
ಶಿವಮೊಗ್ಗ – ಕೊಂಚ ಇಳಿಕೆಯಾದ ತುಂಗಾ ನದಿ ನೀರು : ತಗ್ಗದ ಪ್ರವಾಹ ಭೀತಿ!
ಶಿವಮೊಗ್ಗ (shivamogga), ಜು. 27: ತುಂಗಾ ಜಲಾಶಯದಿಂದ (tunga dam) ಭಾರೀ ಪ್ರಮಾಣದ ನೀರು ಹೊರಬಿಟ್ಟ ಕಾರಣದಿಂದ, ಶನಿವಾರ ಶಿವಮೊಗ್ಗ ನಗರದಲ್ಲಿ ತುಂಗಾ ನದಿಯು (tunga river) ಅಪಾಯದ ಮಟ್ಟ (danger level) ಮೀರಿ ಹರಿಯುತ್ತಿತ್ತು. ಇದರಿಂದ ನದಿ ಪಾತ್ರದ ತಗ್ಗು ಪ್ರದೇಶಗಳ ಹಲವೆಡೆ, ರಸ್ತೆಯ ಮೇಲೆ ನೀರು ಹರಿಯಲಾರಂಭಿಸಿತ್ತು. ಮನೆಗಳಿಗೆ ನದಿ ನೀರು ನುಗ್ಗುವ ಆತಂಕ ಎದುರಾಗಿತ್ತು.
ಇದು ನದಿ ಪಾತ್ರದ ಸ್ಥಳೀಯ ನಿವಾಸಿಗಳ ಆತಂಕ ಹೆಚ್ಚಾಗುವಂತೆ ಮಾಡಿತ್ತು. ಸೀಗೆಹಟ್ಟಿ, ಕುಂಬಾರಗುಂಡಿ, ನ್ಯೂ ಮಂಡ್ಲಿ ಸೇರಿದಂತೆ ನದಿ ಪಾತ್ರದ ಕೆಲ ತಗ್ಗು ಪ್ರದೇಶಗಳ ರಸ್ತೆ ಹಾಗೂ ಮನೆಗಳ ಮುಂಭಾಗ ನದಿ ನೀರು ಹರಿಯಲಾರಂಭಿಸಿತ್ತು.
ಆದರೆ ಯಾವುದೇ ಮನೆಗಳಿಗೆ ನೀರು ನುಗ್ಗಿರಲಿಲ್ಲ. ಈ ನಡುವೆ ಸಂಜೆಯ ವೇಳೆಗೆ ತುಂಗಾ ಜಲಾಶಯದಿಂದ ಬಿಡುತ್ತಿರುವ ನೀರಿನ ಪ್ರಮಾಣ ಕೊಂಚ ಇಳಿಕೆಯಾಗಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ನದಿ ನೀರಿನ ಹರಿವಿನಲ್ಲಿಯೂ ತುಸು ಇಳಿಕೆಯಾಗಿದೆ ಎಂದು ಮಹಾನಗರ ಪಾಲಿಕೆ (corporation) ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಭಾರೀ ನೀರು ಹೊರಕ್ಕೆ : ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ, ತುಂಗಾ ಜಲಾಶಯದ ಒಳಹರಿವಿನಲ್ಲಿ (tunga dam inflow) ಗಣನೀಯ ಏರಿಕೆ ಕಂಡುಬಂದಿತ್ತು. ಶನಿವಾರ ಬೆಳಿಗ್ಗೆ 85 ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು. ಇದರಿಂದ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿತ್ತು.
ಸಂಜೆಯ ವೇಳೆಗೆ ಜಲಾಶಯದಿಂದ ಬಿಡಲಾಗುತ್ತಿದ್ದ ನೀರಿನ ಪ್ರಮಾಣ ಸರಿಸುಮಾರು 70 ಸಾವಿರಕ್ಕೆ ಇಳಿಕೆಯಾಗಿತ್ತು. ಆದಾಗ್ಯೂ ತುಂಗಾ ನದಿಯ ಪ್ರವಾಹ (flood) ಭೀತಿ ಮುಂದುವರಿದಿದೆ. ಡ್ಯಾಂನಿಂದ ಹೊರಬಿಡುವ ನೀರಿನ ಪ್ರಮಾಣ ಹೆಚ್ಚಾದರೆ, ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತವಾಗುವ ಆತಂಕ ಮುಂದುವರಿದಿದೆ.
‘ವ್ಯಾಪಕ ಕಟ್ಟೆಚ್ಚರ’ : ಪಾಲಿಕೆ ಉಪ ಆಯುಕ್ತ ನಾಗೇಂದ್ರ
*** ‘ತುಂಗಾ ನದಿ ಪಾತ್ರದ ಪ್ರದೇಶಗಳಲ್ಲಿ ವ್ಯಾಪಕ ಕಟ್ಟೆಚ್ಚರ (high alert) ವಹಿಸಲಾಗಿದೆ. ಜಲಾವೃತವಾಗುವ ಪ್ರದೇಶಗಳ ನಿವಾಸಿಗಳಿಗೆ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಬೆಳಿಗ್ಗೆ ಕೆಲ ತಗ್ಗು ಪ್ರದೇಶಗಳ ಬಡಾವಣೆಗಳ ರಸ್ತೆಗಳ ಮೇಲೆ ನದಿ ನೀರು ಹರಿಯುತ್ತಿತ್ತು. ಸಂಜೆಯ ವೇಳೆಗೆ ತುಂಗಾ ನದಿ (tunga river) ನೀರಿನ ಹರಿವಿನಲ್ಲಿ ಕೊಂಚ ಇಳಿಕೆಯಾದ ಹಿನ್ನೆಲೆಯಲ್ಲಿ, ಜಲಾವೃತ ಸ್ಥಿತಿ ಕಡಿಮೆಯಾಗಿದೆ. ಈಗಾಗಲೇ ತಗ್ಗು ಪ್ರದೇಶಗಳ ನಿವಾಸಿಗಳಿಗೆಂದೇ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ (shimoga city corporation) ಪ್ರಭಾರ ಉಪ ಆಯುಕ್ತ ನಾಗೇಂದ್ರ ಅವರು ಶನಿವಾರ ಸಂಜೆ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.