ಬೈಕ್ ಸವಾರನಿಗೆ 6500 ರೂ. ದಂಡ ವಿಧಿಸಿದ ಕೋರ್ಟ್!

ಶಿವಮೊಗ್ಗ, ಮಾ. 2: ನಿಯಮಕ್ಕೆ ವಿರುದ್ದವಾಗಿ ಬೈಕ್ ಬಣ್ಣ ಬದಲಾಯಿಸಿ, ಕರ್ಕಶ ಶಬ್ದ ಉಂಟು ಮಾಡುವ ಸೈಲೆನ್ಸರ್ ಅಳವಡಿಸಿಕೊಂಡು ಹಾಗೂ ಚಾಲನೆಯ ವೇಳೆ ಹೆಲ್ಮೆಟ್ ಧರಿಸದ ಬೈಕ್ ಸವಾರನಿಗೆ ಭದ್ರಾವತಿಯ ಜೆಎಂಎಫ್’ಸಿ ನ್ಯಾಯಾಲಯವು 6500 ರೂ. ದಂಡ ವಿಧಿಸಿದೆ.
ಭದ್ರಾವತಿ ಪಟ್ಟಣದ ಹೊಸಮನೆ ಬಡಾವಣೆಯ ನಿವಾಸಿ 25 ವರ್ಷ ವಯೋಮಾನದ ಯುವಕನೇ ನ್ಯಾಯಾಲಯದಿಂದ ದಂಡ ಹಾಕಿಸಿಕೊಂಡ ಬೈಕ್ ಸವಾರ. ನ್ಯಾಯಾಧೀಶರಾದ ಯತೀಶ್ ಅವರು ಫೆ. 28 ರಂದು ದಂಡ ವಿಧಿಸಿ ಆದೇಶಿಸಿದ್ದಾರೆ.
ಕೇಸ್ ದಾಖಲು: 23-2-2023 ರಂದು ಭದ್ರಾವತಿ ಪಟ್ಟಣದ ಜಯಶ್ರೀ ಸರ್ಕಲ್ ಬಳಿ, ನ್ಯೂ ಟೌನ್ ಠಾಣೆ ಸಬ್ ಇನ್ಸ್’ಪೆಕ್ಟರ್ ರಂಗನಾಥ್ ಅವರು ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಸದರಿ ಯುವಕನನ್ನು ತಡೆದು ಪರಿಶೀಲಿಸಿದ್ದರು.
ಈ ವೇಳೆ ಆರ್.ಸಿ. ಪುಸ್ತಕದಲ್ಲಿ ನಮೂದಿಸಿದ್ದ ಬಣ್ಣಕ್ಕೆ ಬದಲಾಗಿ, ಬೈಕ್ ಗೆ ಕಪ್ಪು ಬಣ್ಣ ಹಚ್ಚಿರುವುದು ಹಾಗೂ ಹೆಚ್ಚು ಕರ್ಕಶ ಹೊರಹೊಮ್ಮುವ ಸೈಲೈನ್ಸರ್ ನ್ನು ಬೈಕ್ ಗೆ ಅಳವಡಿಸಿದ್ದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಸದರಿ ಯುವಕನ ವಿರುದ್ದ ಇಂಡಿಯನ್ ಮೋಟಾರ್ ಕಾಯ್ದೆ (ಐ.ಎಂ.ವಿ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Previous post ಮಲೇರಿಯಾ, ಕ್ಷಯ, ಅನಿಮೀಯ ಮುಕ್ತ ಭಾರತಕ್ಕೆ ಪಣ – ಜಿ.ವಿಜಯಕುಮಾರ್
Next post ನಗರಾಭಿವೃದ್ಧಿ ಪ್ರಾಧಿಕಾರ ಅಧೀನದ ಕುವೆಂಪು ಬಡಾವಣೆ ಪಾಲಿಕೆಗೆ ಹಸ್ತಾಂತರ