
ಭದ್ರಾ ಜಲಾಶಯದಿಂದ ನಾಲೆಗಳಿಗೆ ಇಂದಿನಿಂದಲೇ ನೀರು ಹರಿಸಲು ಮಹತ್ವದ ನಿರ್ಧಾರ!
ಶಿವಮೊಗ್ಗ (shivamogga), ಜು. 29: ಭದ್ರಾ ಜಲಾಶಯದಿಂದ (bhadra dam) ನಾಲೆಗಳಿಗೆ ಇಂದಿನಿಂದಲೇ (ಜು. 29) ನೀರು ಹರಿಸಲು ಸೋಮವಾರ ನಡೆದ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಶಿವಮೊಗ್ಗ ನಗರದ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (madhu bangarappa) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ನಂತರ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಇಂದಿನಿಂದಲೇ ಜಲಾಶಯದಿಂದ ನಾಲೆಗಳಿಗೆ (bhadra dam canals) ನೀರು ಹರಿಸಲು ನಿರ್ಧರಿಸಲಾಗಿದೆ. ಎಷ್ಟು ಪ್ರಮಾಣದ ನೀರು ಹರಿಸಬೇಕು ಎಂಬುವುದನ್ನು ಪ್ರಾಧಿಕಾರದ ಇಂಜಿನಿಯರ್ ಗಳು ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.
ನಾಲೆಯ ಕೊನೆಯವರೆಗೆ ನೀರು ತಲುಪಿಸುವ ಕಾರ್ಯ ಆಗಬೇಕು. ಈ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಳೆಯ ಪ್ರಮಾಣ ಮತ್ತೀತರ ಅಂಶಗಳನ್ನು ಪರಿಗಣಿಸಿ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ನಂತರ ಮುಂದಿನ ಪರಿಸ್ಥಿತಿಗಳ ಅವಲೋಕನ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.