
ಶಿವಮೊಗ್ಗದಲ್ಲಿ ತುಂಗಾ ನದಿ ಪ್ರವಾಹ ಭೀತಿ : ರಾತ್ರಿಯಿಡಿ ಪಾಲಿಕೆ ಆಯುಕ್ತರ ರೌಂಡ್ಸ್!
ಶಿವಮೊಗ್ಗ (shivamgga), ಜು. 31: ಗಾಜನೂರು ತುಂಗಾ ಜಲಾಶಯದಿಂದ (tunga dam) ಭಾರೀ ಪ್ರಮಾಣದ ನೀರು ಹೊರಬಿಟ್ಟ ಕಾರಣದಿಂದ, ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ (tunga river overflowing). ಮಂಗಳವಾರ ರಾತ್ರಿ ನದಿಯಂಚಿನ ಕೆಲ ಜನವಸತಿ ಪ್ರದೇಶಗಳ ರಸ್ತೆಗಳು ಜಲಾವೃತವಾಗಿದ್ದವು.
ಇದು ಪಾಲಿಕೆ ಆಡಳಿತದ ನಿದ್ದೆಗೆಡುವಂತೆ ಮಾಡಿತ್ತು. ರಾತ್ರಿಯಿಡಿ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ (shimoga palike commissioner) ಅವರು, ತಮ್ಮ ಅಧಿಕಾರಿ – ಸಿಬ್ಬಂದಿಗಳೊಂದಿಗೆ ನಗರದ ತುಂಗಾ ನದಿಯಂಚಿನ ತಗ್ಗು ಪ್ರದೇಶಗಳಲ್ಲಿ ಸಂಚರಿಸಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಿದರು. ನಿವಾಸಿಗಳಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸುತ್ತಿದ್ದುದು ಕಂಡುಬಂದಿತು.
ಈ ನಡುವೆ ಸೀಗೆಹಟ್ಟಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ, 5 ಕುಟುಂಬಗಳನ್ನು ಪಾಲಿಕೆ ಆಡಳಿತ ರಾತ್ರಿಯೇ ಸ್ಥಳಾಂತರಿಸಿದೆ. ಅವರಿಗೆ ಕಾಳಜಿ ಕೇಂದ್ರಗಳಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಿದೆ. ತಗ್ಗು ಪ್ರದೇಶಗಳ ಬಳಿ ಪಾಲಿಕೆ ಅಧಿಕಾರಿಗಳ ತಂಡ ನಿರಂತರವಾಗಿ ಗಸ್ತು ನಡೆಸಿ, ನಿವಾಸಿಗಳಿಗೆ ನೆರವಿನಹಸ್ತ ಕಲ್ಪಿಸುತ್ತಿದೆ.
ಆತಂಕ : ನದಿಯಂಚಿನ (riverside) ತಗ್ಗು ಪ್ರದೇಶದ ನಿವಾಸಿಗಳು ಮಂಗಳವಾರ ರಾತ್ರಿ ನಿದ್ರೆಯಿಲ್ಲದ ರಾತ್ರಿ ಕಳೆಯುವಂತಾಗಿತ್ತು. ತುಂಗಾ ನದಿಯಲ್ಲಿ (tunga river) ಭಾರೀ ಪ್ರಮಾಣದ ನೀರು ಹರಿಯುತ್ತಿದ್ದುದು ಹಾಗೂ ಕೆಲವೆಡೆ ನದಿ ನೀರಿನಿಂದ ರಸ್ತೆಗಳು ಜಲಾವೃತವಾಗಿದ್ದ ಕಾರಣದಿಂದ, ಎಲ್ಲಿ ತಮ್ಮ ಮನೆಗಳಿಗೂ ನೀರು ನುಗ್ಗುವುದೋ ಎಂಬ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿತ್ತು.
ಹೆಚ್ಚಳ : ಬುಧವಾರ ಬೆಳಿಗ್ಗೆಯ ಮಾಹಿತಿಯಂತೆ ಗಾಜನೂರು ತುಂಗಾ ಜಲಾಶಯದಿಂದ ಸುಮಾರು 82 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಅಪಾಯದ ಮಟ್ಟ (tunga river flood) ಮೀರಿ ಹರಿಯುತ್ತಿದೆ. ಡ್ಯಾಂನಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾದರೆ, ನಗರದಂಚಿನ ತಗ್ಗು ಪ್ರದೇಶಗಳು ಜಲಾವೃತವಾಗಲಿವೆ.
ಅಗತ್ಯ ಮುನ್ನೆಚ್ಚರಿಕೆ ಕ್ರಮ : ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್
*** ‘ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಕಾರಣದಿಂದ ನಗರದ ನದಿಯಂಚಿನ ಪ್ರದೇಶಗಳಲ್ಲಿ ವ್ಯಾಪಕ ಕಟ್ಟೆಚ್ಚರವಹಿಸಲಾಗಿದೆ. ಈಗಾಗಲೇ ಸೀಗೆಹಟ್ಟಿ ಬಡಾವಣೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 5 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ (shimoga palike commissioner dr kavitha yogappanavar) ತಿಳಿಸಿದ್ದಾರೆ.
ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಮಂಗಳವಾರ ತಡರಾತ್ರಿಯವರೆಗೂ ನಗರದ ತಗ್ಗು ಪ್ರದೇಶಗಳಲ್ಲಿ ತಾವು ಸೇರಿದಂತೆ ಪಾಲಿಕೆ ಅಧಿಕಾರಿ-ಸಿಬ್ಬಂದಿಗಳ ತಂಡ ಸಂಚರಿಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದವು. ನದಿ ನೀರಿನ ಹರಿವು ಕಡಿಮೆಯಾಗುವವರೆಗೂ ಎಚ್ಚರದಿಂದ ಇರುವಂತೆ ನದಿಯಂಚಿನ ಬಡಾವಣೆ ನಿವಾಸಿಗಳಿಗೆ ಸೂಚನೆ ನೀಡಲಾಗುತ್ತಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಪಾಲಿಕೆ ಆಡಳಿತ ಸಕಲ ಸಜ್ಜಾಗಿದೆ’ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.