
ಭದ್ರಾ ಜಲಾಶಯ ಸುತ್ತಮುತ್ತ ನಿಷೇಧಾಜ್ಞೆ ಜಾರಿ!
ಶಿವಮೊಗ್ಗ (shivamogga), ಆ. 1: ಭಾರೀ ಮಳೆಗೆ, ಭದ್ರಾ ಜಲಾಶಯ (bhadra dam) ಮೈದುಂಬಿ ಹರಿಯುತ್ತಿದೆ. ಮತ್ತೊಂದೆಡೆ, ಡ್ಯಾಂ ವೀಕ್ಷಣೆ ಹಾಗೂ ಬಾಗಿನ ಅರ್ಪಿಸಲು ಆಗಮಿಸುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (Prohibition) ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
‘ಜಲಾಶಯ ಬಳಿ ಜನಜಂಗುಳಿ (crowd) ಉಂಟಾಗುತ್ತಿರುವುದರಿಂದ ಸುರಕ್ಷತೆ ಕಾಯ್ದುಕೊಳ್ಳುವುದು ಕಷ್ಟಕರವಾಗಿ ಪರಿಣಮಿಸುತ್ತಿದೆ. ಮತ್ತೊಂದೆಡೆ ಮಳೆಯ ತೀವ್ರತೆ (heavy rainfall) ಹೆಚ್ಚಾಗುವ ಮುನ್ಸೂಚನೆಯಿದೆ. ಈ ಕಾರಣದಿಂದ 1-8-2024 ರಿಂದ 31-8-2024 ರವರೆಗೆ ಭಾರತೀಯ ನಾಗರೀಕ ಸುರಕ್ಷತಾ ಸಂಹಿತೆಯಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ (shimoga dc) ಗುರುದತ್ ಹೆಗಡೆ ಅವರು ತಿಳಿಸಿದ್ದಾರೆ.
ನಿಬಂಧನೆಗಳು : ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವಂತಿಲ್ಲ. ಭದ್ರಾ ಎಡ ಮತ್ತು ಬಲ ದಂಡೆಯಲ್ಲಿ ನೀರಿಗೆ ಇಳಿಯುವಂತಿಲ್ಲ. ಪೋಟೋ ತೆಗೆಯುವಂತಿಲ್ಲ. ಜಲಾಶಯದ (reservoir) ಮೇಲ್ಭಾಗಕ್ಕೆ ತೆರಳುವುದನ್ನು ನಿರ್ಬಂಧಿಸಲಾಗಿದೆ.
ಗೇಟ್ ಬಳಿ ಗುಂಪುಗೂಡುವಂತಿಲ್ಲ. ಡ್ಯಾಂ ಸೆಕ್ಯುರಿಟಿ ಇತರೆ ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಮಾಡುವಂತಿಲ್ಲ ಎಂದು ನಿಬಂಧನೆ ವಿಧಿಸಲಾಗಿದೆ.