
ಬೆಳಿಗ್ಗೆ ಮದುವೆ, ಸಂಜೆ ಮಚ್ಚಿನಿಂದ ಹೊಡೆದಾಡಿಕೊಂಡ ನವ ದಂಪತಿ : ವಧು ಸಾವು – ವರನ ಸ್ಥಿತಿ ಗಂಭೀರ!
ಕೆಜಿಎಫ್ (ಕೋಲಾರ), ಆ. 8: ಮದುವೆಯಾದ ದಿನದಂದೇ ಕೆಲ ನವ ದಂಪತಿಗಳು ಬೇರೆಯಾದ ಘಟನೆಗಳನ್ನು ಕೇಳಿದ್ದೆವೆ, ನೋಡಿದ್ದೆವೆ. ಆದರೆ ಕೋಲಾರ ಜಿಲ್ಲೆಯ ಕೆಜಿಎಫ್ ನ (kolar kgf) ಆಂಡರ್ ಸನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಿಗ್ಗೆ ಮದುವೆಯಾದ ನವ ದಂಪತಿ (new couple), ರಾತ್ರಿ ಆಗುವಷ್ಟರಲ್ಲಿ ಪರಸ್ಪರ ಮಚ್ಚಿನಿಂದ ಹೊಡೆದಾಡಿಕೊಂಡ ಘಟನೆ ನಡೆದಿದೆ!
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಧು (bride) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ವರ (groom) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿಯೂ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಏನೀದು ಘಟನೆ? : ಕೆಜಿಎಫ್ (kgf) ತಾಲೂಕಿನ ಬೈನೇಹಳ್ಳಿ ನಿವಾಸಿ ಲಿಖಿತಶ್ರೀ (20) ಹಾಗೂ ಆಂಧ್ರಪ್ರದೇಶದ (andhrapradesh) ಶಾಂತಿಪುರಂ ನಿವಾಸಿ ನವೀನ್ ಕುಮಾರ್ (30) ಪರಸ್ಪರ ಪ್ರೀತಿಸುತ್ತಿದ್ದರು.
ಆ. 7 ರ ಬುಧವಾರ ಬೆಳಿಗ್ಗೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದಲ್ಲಿರುವ ವರ ನವೀನ್ ಕುಮಾರ್ ಅವರ ಅಕ್ಕನ ಮನೆಯಲ್ಲಿ ಇವರಿಬ್ಬರ ವಿವಾಹ (marriage) ನೆರವೇರಿತ್ತು. ಮದುವೆಯ ಸಕಲ ರೀತಿ-ರಿವಾಜುಗಳು ನೆರವೇರಿದ್ದವು. ನವ ದಂಪತಿಗಳು ಖುಷಿಖುಷಿಯಿಂದಲೇ ಇದ್ದರು.
ವಿವಾಹದ ನಂತರ ಅದೇ ಗ್ರಾಮದಲ್ಲಿರುವ ವರನ ದೊಡ್ಡಪ್ಪನ ಮನೆಯಲ್ಲಿ ಇಬ್ಬರು ತಂಗಿದ್ದರು. ಕೋಣೆ ಸೇರಿಕೊಂಡಿದ್ದ ಇಬ್ಬರು, ದಿಢೀರ್ ಆಗಿ ಸಂಜೆ ವೇಳೆ ಮಚ್ಚಿನಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನವ ದಂಪತಿಗಳ ಚೀರಾಟ, ಆಕ್ರಂದನ ಗಮನಿಸಿ ಮನೆಯಲ್ಲಿದ್ದವರು ತಕ್ಷಣವೇ ಇಬ್ಬರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ವಧು ಲಿಖಿತಶ್ರೀ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾಳೆ. ಮತ್ತೊಂದೆಡೆ, ಗಂಭೀರ ಸ್ಥಿತಿಯಲ್ಲಿದ್ದ ವರ ನವೀನ್ ಕುಮಾರ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವಾಹವಾಗಿ ಸುಖ ಜೀವನದ ಕನಸು ಕಾಣುತ್ತಿದ್ದ ನವ ದಂಪತಿ, ಜೀವನ ದುರಂತಮಯವಾಗಿದ್ದು ನಿಜಕ್ಕೂ ಖೇದಕರ ಸಂಗತಿಯಾಗಿದೆ.
ನವ ದಂಪತಿಗಳ ಹೊಡೆದಾಟಕ್ಕೆ ಕಾರಣವೇನು ಎಂಬಿತ್ಯಾದಿ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಈ ಸಂಬಂಧ ಕೆಜಿಎಫ್ ನ ಆಂಡರ್’ಸನ್ ಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.