ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ..!

ಶಿವಮೊಗ್ಗ, ಮಾ. 3:  ಕಚೇರಿಯಲ್ಲಿಯೇ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯೋರ್ವರನ್ನು ಲೋಕಾಯುಕ್ತ ಪೊಲೀಸರು ಲಂಚದ ಹಣದ ಸಮೇತ ಬಂಧಿಸಿದ ಘಟನೆ, ಶಿವಮೊಗ್ಗ ನಗರದಲ್ಲಿ ಶುಕ್ರವಾರ (ಮಾ.3) ನಡೆದಿದೆ.

ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಕಚೇರಿಯ ಕಾರ್ಯನಿರ್ವಾಹಕ ಹಾಗೂ ಆಡಳಿತ ಸಹಾಯಕ ವಿಠಲ್ ನಾಯ್ಕ್ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಎಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ: ಶಿವಮೊಗ್ಗದ ವಿನೋಬನಗರ ನಿವಾಸಿ ರಾಕೇಶ್ ಪಟೇಲ್ ಎಂಬುವವರು, ತಮ್ಮ ಒಡೆತನದ ಕಾರ್ಖಾನೆಯ ಲೈಸನ್ಸ್ ರದ್ದುಗೊಳಿಸಿದ ಪ್ರಮಾಣಪತ್ರ ನೀಡುವಂತೆ ಬಾಯ್ಲರ್ ಇಲಾಖೆಗೆ ಕೋರಿದ್ದರು. ಈ ವೇಳೆ ಆರೋಪಿತ ಅಧಿಕಾರಿ ವಿಠಲ ನಾಯ್ಕ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು.

ಅದರಂತೆ ದೂರುದಾರರು 5,000 ರೂ.  ನೀಡಿದ್ದರು. ಆದಾಗ್ಯೂ ರದ್ದತಿ ಪ್ರಮಾಣಪತ್ರ ನೀಡಿರಲಿಲ್ಲ. ದೂರವಾಣಿ ಮುಖಾಂತರ ಪ್ರಮಾಣ ಪತ್ರದ ಬಗ್ಗೆ ಅಧಿಕಾರಿಯನ್ನು ದೂರುದಾರರು ವಿಚಾರಿಸಿದಾಗ, ಮತ್ತೆ 30 ಸಾವಿರ ರೂ. ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ಲೋಕಾಯುಕ್ತ ಪೊಲೀಸರಿಗೆ ರಾಕೇಶ್ ಪಟೇಲ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಕಚೇರಿಯಲ್ಲಿಯೇ ಲಂಚ ಪಡೆಯುತ್ತಿದ್ದ ಅಧಿಕಾರಿ ವಿಠಲ್ ನಾಯ್ಕ್ ಅವರನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕಾರ್ಯಾಚರಣೆ ನಡೆಸಿದ ತಂಡದ ವಿವರ: ಚಿತ್ರದುರ್ಗ ಲೋಕಾಯುಕ್ತ ಕಛೇರಿ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ, ಉಪಾಧೀಕ್ಷಕರಾದ ಉಮೇಶ ಈಶ್ವರ ನಾಯ್ಕ ಮಾರ್ಗದರ್ಶನದಲ್ಲಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಹೆಚ್. ರಾಧಕೃಷ್ಣ,

ಸಿಬ್ಬಂದಿಗಳಾದ ಪ್ರಸನ್ನ. ಲೋಕೇಶಪ್ಪ, ವಿ.ಎ ಮಹಾಂತೇಶ, ಬಿ.ಟಿ ಚನ್ನೇಶ, ಪ್ರಶಾಂತ್ ಕುಮಾರ್, ರಘುನಾಯ್ಕ್, ಸುರೇಂದ್ರ, ಅರುಣ್ ಕುಮಾರ್, ದೇವರಾಜ್, ಪುಟ್ಟಮ್ಮ, ಸಾವಿತ್ರಮ್ಮ, ಗಂಗಾಧರ ಪ್ರದೀಪ್, ತರುಣ್, ಜಯಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Previous post <strong>ಅಪಘಾತದಲ್ಲಿ ಗಾಯಗೊಂಡ ಯುವಕನಿಗೆ ಗೃಹ ಸಚಿವರ ಸಕಾಲಿಕ ನೆರವಿನಹಸ್ತ..!</strong>
Next post ಇಬ್ಬರು ರೌಡಿಗಳ ವಿರುದ್ದ ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶ..!