ಇಬ್ಬರು ರೌಡಿಗಳ ವಿರುದ್ದ ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶ..!

ಶಿವಮೊಗ್ಗ, ಮಾ. 4: ಶಿವಮೊಗ್ಗ ನಗರದ  ಇಬ್ಬರು ರೌಡಿಗಳ ವಿರುದ್ದ ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶಿಸಿದ್ದಾರೆ.

ನಗರದ  ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿ ಶಮಂತ ಯಾನೆ ಶಮಂತನಾಯ್ಕ್ (30) ಹಾಗೂ ಬೊಮ್ಮನಕಟ್ಟೆ ಬಡಾವಣೆ ನಿವಾಸಿ ಸಂದೀಪ್ ಯಾನೆ ಸಂದೀಪ್ ಕುಮಾರನಾಯ್ಕ್ (27) ಎಂಬುವರ ವಿರುದ್ದ ಗೂಂಡಾ ಕಾಯ್ದೆ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಈ ಕುರಿತಂತೆ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.  ‘ಈ ಇಬ್ಬರು ಆರೋಪಿಗಳ ವಿರುದ್ದ ಕೊಲೆ, ಕೊಲೆ ಯತ್ನ, ದರೋಡೆ, ಹಲ್ಲೆ, ಸುಲಿಗೆ, ದೊಂಬಿ, ಕೋಮು ಗಲಭೆ, ಗಾಂಜಾ ಮಾರಾಟದಂತಹ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ದೂರುಗಳು ದಾಖಲಾಗಿವೆ.

ಜೊತೆಗೆ ಸಹಚರರೊಂದಿಗೆ ಸೇರಿಕೊಂಡು ಸಾರ್ವಜನಿಕ ಶಾಂತಿಗೆ ಹಾಗೂ ಕಾನೂನು-ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಕಾರ್ಯದಲ್ಲಿ ತೊಡಗಿದ್ದರು. ನ್ಯಾಯಾಲಯದ ಜಾಮೀನು ಷರತ್ತು ನಿಯಮಗಳನ್ನು ಉಲ್ಲಂಘಿಸಿ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು’ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ದ ಗೂಂಡಾ ಕಾಯ್ದೆಯಡಿ ಬಂಧನ ಕೋರಿ, ಪೊಲೀಸ್ ಇಲಾಖೆಯು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆ ಪರಿಶೀಲಿಸಿದ ಡಿಸಿ ಅವರು ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶಿಸಿದ್ದರು.

ತದನಂತರ 25-2-2023 ರಂದು ಗೂಂಡಾ ಕಾಯ್ದೆ ಅಧಿನಿಯಮದಡಿ ರಚಿತವಾದ ಸಲಹಾ ಮಂಡಳಿಯು ಈ ಇಬ್ಬರು ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿರುವುದನ್ನು ಪರಿಗಣಿಸಿ ವರದಿ ನೀಡಿತ್ತು. ಅದರಂತೆ 3-3-2023 ರಿಂದ 1 ವರ್ಷದ ಅವಧಿಯವರೆಗೆ ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ಆದೇಶಿಸಲಾಗಿದೆ ಎಂದು ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Previous post <strong>ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ..!</strong>
Next post ಮಾ. 5 ರಂದು ಶಿವಮೊಗ್ಗ ನಗರ, ಹೊರವಲಯ, ಗ್ರಾಮಾಂತರ ಭಾಗದ ವಿವಿಧೆಡೆ ವಿದ್ಯುತ್ ವ್ಯತ್ಯಯ!