ಹೊಸ ವರ್ಷಾಚರಣೆ : ಶಿವಮೊಗ್ಗ ಎಸ್ಪಿ ನೀಡಿದ ಖಡಕ್ ವಾರ್ನಿಂಗ್ ಏನು?

ಶಿವಮೊಗ್ಗಡಿ. 29: ಹೊಸ ವರ್ಷಾಚರಣೆ ವೇಳೆ ಪಾಲಿಸಬೇಕಾದ ನಿಯಮಗಳ ಕುರಿತಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ತಮ್ಮ ಕಚೇರಿಯಲ್ಲಿ ಹೋಟೆಲ್, ಕ್ಲಬ್ ಮತ್ತು ರೆಸಾರ್ಟ್ ಮಾಲೀಕರ – ವ್ಯವಸ್ಥಾಪಕರ ಸಭೆ ನಡೆಸಿದರು.
ಹೊಸ ವರ್ಷಾಚರಣೆ ವೇಳೆ ಕಟ್ಟುನಿಟ್ಟಾಗಿ ನಿಯಮಗಳ ಪಾಲನೆ ಮಾಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ಸೂಚನೆಗಳೇನು?: ಸರ್ಕಾರದ ಆದೇಶದ ಅನ್ವಯ, ಹೊಸ ವರ್ಷಾಚರಣೆ ವೇಳೆ ಅನುಸರಿಸಬೇಕಾದ ನಿಯಮಗಳ ಪಾಲನೆ ಮಾಡಬೇಕು. ಬೆಳಿಗ್ಗಿನ ಜಾವ 1 ಗಂಟೆಯೊಳಗೆ ಎಲ್ಲ ಕಾರ್ಯಕ್ರಮ ಮುಕ್ತಾಯಗೊಳಿಸಬೇಕು. ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸುವ ಮಕ್ಕಳು, ವೃದ್ಧರು ಮತ್ತು ಮಹಿಳೆಯರ ಸುರಕ್ಷತೆಯ ಕುರಿತು ಮುಂಜಾಗರೂಕ ಕ್ರಮಕೈಗೊಳ್ಳಬೇಕು.
ಸಂಭ್ರಮಾಚರಣೆಯ ವೇಳೆ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬಳಸಬಾರದು. ಮದ್ಯ ಮಾರಾಟವನ್ನುರಾತ್ರಿ 11:30 ರವರೆಗೆ ಮಾತ್ರ ಮಾಡಬೇಕು. ನಿಗದಿ ಪಡಿಸಿದ ಶಬ್ದ ಮಿತಿಯನ್ನು ಮೀರಿ ಸೌಂಡ್ ಸಿಸ್ಟಂಗಳನ್ನು ಬಳಸುವಂತಿಲ್ಲ. ಸಂಭ್ರಮಾಚರಣೆಗೆ ಬರುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ವ್ಯವಸ್ಥಿತವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು.
ಗುಂಪನ್ನು ನಿಯಂತ್ರಿಸುವ ಸಂಬಂಧ ಒಂದಕ್ಕಿಂತ ಹೆಚ್ಚು ಪ್ರವೇಶ ದ್ವಾರಗಳನ್ನು ನಿರ್ಮಿಸಬೇಕು. ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಬಳಸಬೇಕು.
60 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸದೇ ಇರುವುದು ಸೂಕ್ತವಾಗಿರುತ್ತದೆ. ನೋ ಮಾಸ್ಕ್ ನೋ ಎಂಟ್ರಿ ಬೋರ್ಡ್ ಗಳನ್ನು ಸಾರ್ವಜನಿಕರವಾಗಿ ಎದ್ದು ಕಾಣುವ ರೀತಿಯಲ್ಲಿ ಹಾಕಬೇಕು.
ಹೊಸ ವರ್ಷ ಆಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಾರ್ವಜನಿಕರಿಗೂ ಕಡ್ಡಾಯವಾಗಿ ಥರ್ಮಲ್ ಸ್ರ್ಕೀನಿಂಗ್ ಗೆ ಒಳಪಡಿಸಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ / ಪೊಲೀಸ್ ಕಂಟ್ರೋಲ್ ರೂಂ ನಂಬರ್: 9480803300 / 08182-261413 ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡಬೇಕು ಎಂದು ಎಸ್ಪಿ ಅವರು ಸೂಚಿಸಿದ್ದಾರೆ.

Previous post ಡಿ. 29 ರಂದು ಶಿವಮೊಗ್ಗ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ!
Next post ಜಾತ್ರಾ ಮಹೋತ್ಸವ : ಭೋವಿ ಗುರುಪೀಠದ ಶ್ರೀಗಳು ಭಾಗಿ