
ಹೋಳಿ, ಶಬ್-ಎ-ಬರಾತ್ ಆಚರಣೆ : ಪೊಲೀಸರಿಂದ ಶಾಂತಿ ಸಮಿತಿ ಸಭೆ
ಶಿವಮೊಗ್ಗ, ಮಾ. 7: ಹೋಳಿ ಹಾಗೂ ಶಬ್-ಎ-ಬರಾತ್ ಆಚರಣೆ ಹಿನ್ನೆಲೆಯಲ್ಲಿ, ಶಿವಮೊಗ್ಗ ನಗರದ ಹೊರವಲಯ ರಾಗಿಗುಡ್ಡ ಬಡಾವಣೆಯಲ್ಲಿ ಮಾ. 7 ರಂದು ಗ್ರಾಮಾಂತರ ಠಾಣೆ ಪೊಲೀಸರು ಶಾಂತಿ ಸಮಿತಿ ಸಭೆ ನಡೆಸಿದರು.
ಸಲಹೆ-ಸೂಚನೆಗಳೇನು?: ಶಾಂತಿಯುತವಾಗಿ, ಕಾನೂನಿನ ಚೌಕಟ್ಟಿನಲ್ಲಿ, ಸಹಬಾಳ್ವೆಯೊಂದಿಗೆ ಹೋಳಿ ಹಾಗೂ ಶಬ್ ಎ ಬರಾತ್ ಆಚರಣೆ ಮಾಡಬೇಕು. ಏನಾದರೂ ಭಿನ್ನಾಭಿಪ್ರಾಯಗಳಿದ್ದರೆ ತಕ್ಷಣವೇ ಪೊಲೀಸ್ ಠಾಣೆಗೆ ಆಗಮಿಸಿ ಸಮಸ್ಯೆ ಪರಿಹರಿಸಕೊಳ್ಳಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
ಧ್ವನಿವರ್ಧಕಗಳ ಬಳಕೆ ವೇಳೆ ಶಬ್ದ ಮಿತಿಯಲ್ಲಿರಬೇಕು. ಈ ಕುರಿತಂತೆ ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು. ಹೋಳಿ ಆಚರಣೆ ವೇಳೆ ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ ಹಾಗೂ ಬಲವಂತವಾಗಿ ಬಣ್ಣ ಎರಚಬಾರದು. ಜೊತೆಗೆ ದ್ವಿಚಕ್ರ ವಾಹನಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ರೀತಿಯಲ್ಲಿ ಓಡಾಡುವವರ ವಿರುದ್ದ ನಿಗಾವಹಿಸಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಗುರುಬಸವರಾಜ್ ಅವರ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ ನಡೆಯಿತು.