ಹೋಳಿ ವೇಳೆ ಕರ್ಕಶ ಶಬ್ದದ ಸೈಲೆನ್ಸರ್ ಅಳವಡಿಸಿಕೊಂಡು ಬೈಕ್ ಓಡಿಸುತ್ತಿದ್ದ ಚಾಲಕರಿಗೆ ಟ್ರಾಫಿಕ್ ಪೊಲೀಸರ ಶಾಕ್..!

ಶಿವಮೊಗ್ಗ, ಮಾ. 8: ಹೋಳಿ ಹಬ್ಬ ಆಚರಣೆ ವೇಳೆ ಕರ್ಕಶ ಶಬ್ದ ಹೊರಹೊಮ್ಮುವ ಸೈಲೆನ್ಸರ್ ಅಳವಡಿಸಿಕೊಂಡು, ನಾಗರೀಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ 10 ಬೈಕ್ ಗಳನ್ನು ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದು, ಸವಾರರಿಗೆ ದಂಡ ವಿಧಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ಬುಧವಾರ ನಡೆದಿದೆ.

ವಶಕ್ಕೆ ಪಡೆದ ದೋಷಪೂರಿತ ಸೈಲೆನ್ಸರ್ ಗಳ ದೃಶ್ಯ…

ಟ್ರಾಫಿಕ್ ಠಾಣೆ ಇನ್ಸ್’ಪೆಕ್ಟರ್ ಜಯಶ್ರೀ ಎಸ್ ಮಾನೆ ನೇತೃತ್ವದಲ್ಲಿ ಪೂರ್ವ ಮತ್ತು ಪಶ್ಚಿಮ ಸಂಚಾರಿ ಠಾಣೆಗಳ ಪೊಲೀಸರು ನಗರದ  ವಿವಿಧೆಡೆ ಈ ಕಾರ್ಯಾಚರಣೆ ನಡೆಸಿದ್ದಾರೆ.

ಬೈಕ್ ಗಳ ಸೈಲೆನ್ಸರ್ ಮಾರ್ಪಡಿಸಿಕೊಂಡು, ಕರ್ಕಶ ಶಬ್ದ ಉಂಟು ಮಾಡುವ ಬೈಕ್ ಸವಾರರನ್ನು ಪತ್ತೆ ಹಚ್ಚಿ ಅವರು ಚಲಾಯಿಸುತ್ತಿದ್ದ ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೋಟಾರು ವಾಹನ (ಐಎಂವಿ) ಕಾಯ್ದೆಯಡಿ ಚಾಲಕರ ವಿರುದ್ದ ಕೇಸ್ ದಾಖಲಿಸಿಕೊಂಡು, ದಂಡ ವಿಧಿಸಿದ್ದಾರೆ. ಜೊತೆಗೆ ದೋಷಪೂರಿತ ಸೈಲೆನ್ಸರ್ ಗಳನ್ನು ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Previous post ಹೋಳಿ, ಶಬ್-ಎ-ಬರಾತ್ ಆಚರಣೆ : ಪೊಲೀಸರಿಂದ ಶಾಂತಿ ಸಮಿತಿ ಸಭೆ
Next post ಸಿಮ್ಸ್ ನಲ್ಲಿ ಖಾಲಿಯಿರುವ ಹುದ್ದೆಗಳು : ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ