ಕೊಲೆ ಪ್ರಕರಣ : ನಾಲ್ವರಿಗೆ ಜೀವಾವಧಿ ಶಿಕ್ಷೆ!

ಶಿವಮೊಗ್ಗ, ಮಾ. 10: ಕೊಲೆ ಪ್ರಕರಣವೊಂದರಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಶಿವಮೊಗ್ಗದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ (ಮಾ.10) ತೀರ್ಪು ನೀಡಿದೆ.

ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿ ಗ್ರಾಮದ ನಿವಾಸಿಗಳಾದ ಕುಮಾರನಾಯ್ಕ್ (36), ಪೀರ್ಯಾನಾಯ್ಕ್ (38), ಚಿನ್ನಾನಾಯ್ಕ್ (32) ಹಾಗೂ ಮುಸ್ಸೇಹಾಳ್ ಗ್ರಾಮದ ನಿವಾಸಿಯಾದ ಮಧುಕುಮಾರ (19) ಶಿಕ್ಷೆಗೊಳಗಾದವರೆಂದು ಗುರುತಿಸಲಾಗಿದೆ.

ನಾಲ್ವರಿಗೂ ಜೀವಾವಧಿ ಶಿಕ್ಷೆಯ ಜೊತೆಗೆ 23,500 ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 3 ವರ್ಷಗಳ ಸಾದಾ ಕಾರಗೃಹ ಶಿಕ್ಷೆ ಅನುಭವಿಸುವಂತೆ, ನ್ಯಾಯಾಧೀಶರು ತೀರ್ಪಿನಲ್ಲಿ ಆದೇಶಿಸಿದ್ದಾರೆ.

ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪುಷ್ಪರವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: ಹೊಳೆಬೆನವಳ್ಳಿ ಗ್ರಾಮದ ನಿವಾಸಿ ಮಹೇಶ್ ನಾಯ್ಕ್ (40) ಎಂಬುವರೊಂದಿಗೆ, ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಪ್ರಸ್ತುತ ಶಿಕ್ಷೆಗೊಳಗಾದವರು ಗಲಾಟೆ ಮಾಡಿಕೊಂಡಿದ್ದರು.

ಇದೇ ವೈಮನಸ್ಸಿನ ಕಾರಣವಾಗಿ, 5-5-2017 ರಂದು ಮಧ್ಯಾಹ್ನ ಬೈಕ್ ನಲ್ಲಿ ಹೊಳೆಬೆನವಳ್ಳಿ ಸಣ್ಣ ತಾಂಡಾದ ಚಾನಲ್ ಬಳಿ ತೆರಳುತ್ತಿದ್ದ ಮಹೇಶ್ ನಾಯ್ಕ್ ಅವರ ಮೇಲೆ, ಹರಿತವಾದ ಆಯುಧದಿಂದ ದಾಳಿ ಮಾಡಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.

ಈ ಸಂಬಂಧ ಮೃತನ ಪತ್ನಿಯು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿಸಿ ಕಲಂ 143, 302, 149 ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ಸ್’ಪೆಕ್ಟರ್ ಆರ್.ವಿ.ಗಂಗಾಧರಪ್ಪ ಅವರು ಪ್ರಕರಣ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Previous post ಉದ್ಯೋಗಾವಕಾಶ : ವಿವಿಧ ಕಂಪನಿಗಳಿಂದ ನೇರ ಸಂದರ್ಶನ
Next post ಟ್ರಾನ್ಸ್’ಫಾರ್ಮಾರ್ ಸ್ಫೋಟ :  ಮನೆಗೆ ಹೊತ್ತಿದ ಬೆಂಕಿ!