ಹೂವು ವ್ಯಾಪಾರಿ ಬಡ ಮಹಿಳೆಯ ಬರ್ಬರ ಹತ್ಯೆ ಪ್ರಕರಣ : ಬಿರುಸುಗೊಂಡ ಪೊಲೀಸ್ ತನಿಖೆ!

ಶಿವಮೊಗ್ಗ, ಮಾ. 11: ಸಂಪೂರ್ಣ ನಿಗೂಢವಾಗಿ ಪರಿಣಮಿಸಿರುವ ಹೂವು ವ್ಯಾಪಾರಿ ಮಹಿಳೆಯ ಬರ್ಬರ ಹತ್ಯೆ ಪ್ರಕರಣದ ತನಿಖೆಯನ್ನು, ಹೊಳೆಹೊನ್ನೂರು ಠಾಣೆ ಪೊಲೀಸರು ಬಿರುಸುಗೊಳಿಸಿದ್ದಾರೆ.

ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ಆರ್.ಎಲ್. ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಹಂತಕರ ಬಗ್ಗೆ ಕೆಲ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆಂದು ಹೇಳಲಾಗುತ್ತಿದೆ. ಇಷ್ಟರಲ್ಲಿಯೇ ಹತ್ಯೆ ಪ್ರಕರಣದ ಸತ್ಯಾಂಶ ಬಯಲಾಗುವ ಸಾಧ್ಯತೆಗಳಿವೆ.

ನಾಪತ್ತೆ-ಕೊಲೆ!: ಶಿವಮೊಗ್ಗ ನಗರದ ರಾಗಿಗುಡ್ಡ ಬಡಾವಣೆ ನಿವಾಸಿ ಮುಮ್ತಾಜ್ ಬೇಗಂ (45) ಎಂಬುವರೇ ಕೊಲೆಗೀಡಾದ ಮಹಿಳೆಯಾಗಿದ್ದಾರೆ. ಇವರು ಹೂವು ವ್ಯಾಪಾರ ಮಾಡುತ್ತಿದ್ದರು. ಇವರ ಪತಿ ಮೊಹಮ್ಮದ್ ರಫೀಕ್ ಆಟೋ ಚಾಲಕರಾಗಿದ್ದಾರೆ.

ಎಂದಿನಂತೆ 6-3-2023 ರಂದು ಮುಮ್ತಾಜ್ ಬೇಗಂ ಅವರು ಹೂವು ವ್ಯಾಪಾರಕ್ಕೆಂದು ಮನೆಯಿಂದ ಬೆಳಿಗ್ಗೆ 5.30 ಕ್ಕೆ ತಾಲೂಕಿನ ಹೊಳಲೂರು ಗ್ರಾಮಕ್ಕೆ ತೆರಳಿದ್ದಾರೆ. ಆದರೆ ಸಂಜೆಯಾದರೂ ಅವರು ಮನೆಗೆ ಹಿಂದಿರುಗಿರಲಿಲ್ಲ. ಸಂಬಂಧಿಕರ ಮನೆಗಳಲ್ಲಿಯೂ ಅವರ ಸುಳಿವು ಸಿಕ್ಕಿರಲಿಲ್ಲ.

ಹೊಳಲೂರು ಗ್ರಾಮದಲ್ಲಿ ಹೂವು ವ್ಯಾಪಾರ ಮಾಡಿಕೊಂಡು ಮಧ್ಯಾಹ್ನ ಹೋಗಿದ್ದ ವಿವರ ಸ್ಥಳೀಯ ಗ್ರಾಮಸ್ಥರಿಂದ ಗೊತ್ತಾಗಿತ್ತು. 7-3-2023 ರಂದು ಪತಿ ಮೊಹಮ್ಮದ್ ರಫೀಕ್ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಇದೆಲ್ಲದರ ನಡುವೆಯೇ, ಮಾ. 10 ರಂದು ಹೊಳೆಹೊನ್ನೂರು ಸಮೀಪದ ಸನ್ಯಾಸಿ ಕೊಡಮಗ್ಗೆ ಬಳಿಯ ಭದ್ರಾ ನದಿ ಸೇತುವೆ ಕೆಳಭಾಗದ ಕಸದ ಗುಡ್ಡೆಯ ರಾಶಿಯಲ್ಲಿ, ಮಹಿಳೆಯ ಕೊಲೆಗೀಡಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಚೀಲವೊಂದರಲ್ಲಿ ಮಹಿಳೆಯ ದೇಹವಿರಿಸಿ ಕಸದ ಗುಡ್ಡೆಯಲ್ಲಿ ಎಸೆದಿದ್ದು ಬೆಳಕಿಗೆ ಬಂದಿತ್ತು.

ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಿಗೂಢ: ಮಹಿಳೆಯ ಹತ್ಯೆ ಪ್ರಕರಣ ಸಂಪೂರ್ಣ ನಿಗೂಢವಾಗಿ ಪರಿಣಮಿಸಿದೆ. ಹತ್ಯೆ ಮಾಡಿದವರು ಯಾರು? ಕಾರಣವೇನು? ಎಂಬಿತ್ಯಾದಿ ವಿವರಗಳು ಪೊಲೀಸರ ತನಿಖೆಯ ನಂತರವಷ್ಟೆ ತಿಳಿದುಬರಬೇಕಾಗಿದೆ.

Previous post ಟ್ರಾನ್ಸ್’ಫಾರ್ಮಾರ್ ಸ್ಫೋಟ :  ಮನೆಗೆ ಹೊತ್ತಿದ ಬೆಂಕಿ!
Next post ಮಹಿಳೆಯ ಕೊಲೆ : ಹಂತಕರ ವಿರುದ್ದ ಕಠಿಣ ಕ್ರಮಕ್ಕೆ ಮಣಿ ಎಸ್. ಗೌಂಡರ್ ಆಗ್ರಹ