ಮಾ.13 ರಿಂದ ಪಾಲಿಕೆ ಹೊರಗುತ್ತಿಗೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

ಶಿವಮೊಗ್ಗ, ಮಾ. 12: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ವಾಹನ ಚಾಲಕರು ಹಾಗೂ ಸಹಾಯಕರ ಸಂಘವು ಮಾ. 13 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರು, ಸಹಾಯಕರು, ಲೋಡರ್ಸ್, ಯುಜಿಡಿ ಕಾರ್ಮಿಕರು ಕಳೆದ 15-20 ವರ್ಷಗಳಿಂದ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸೇವೆ ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಕಳೆದ ಹಲವು ವರ್ಷಗಳಂದ ಸರ್ಕಾರಕ್ಕೆ ಆಗ್ರಹಿಸಿಕೊಂಡು ಬರಲಾಗುತ್ತಿದೆ. ಕಳೆದ ಜುಲೈ ತಿಂಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೂಡ ನಡೆಸಲಾಗಿತ್ತು.

ಜೊತೆಗೆ ಫೆ. 22 ಹಾಗೂ ಫೆ.23 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ವೇಳೆ, ನಗರಾಭಿವೃದ್ದಿ ಇಲಾಖೆ ಮುಖ್ಯ ಕಾರ್ಯದರ್ಶಿಗಳು ಮಾ.10 ರೊಳಗೆ ಖಾಯಂಗೊಳಿಸುವ ಅಥವಾ ನೇರ ಪಾವತಿ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದ್ದರು.

ಆದರೆ ಇಲ್ಲಿಯವರೆಗೂ ಆದೇಶ ಹೊರಡಿಸಿಲ್ಲ. ಈ ಕಾರಣದಿಂದ ಮಾ. 13 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇದಕ್ಕೆ ಪಾಲಿಕೆ ಹೊರಗುತ್ತಿಗೆ ವಾಹನ ಚಾಲಕರು-ಸಹಾಯಕರ ಸಂಘ ಬೆಂಬಲ ವ್ಯಕ್ತಪಡಿಸಲಿದೆ. ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಲಿದೆ ಎಂದು ಸಂಘಟನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Previous post ಮಹಿಳೆಯ ಕೊಲೆ : ಹಂತಕರ ವಿರುದ್ದ ಕಠಿಣ ಕ್ರಮಕ್ಕೆ ಮಣಿ ಎಸ್. ಗೌಂಡರ್ ಆಗ್ರಹ
Next post ಎಂಐಎಫ್ಎಸ್ಇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ