
ಮಾ. 16 ರಿಂದ ವಿದ್ಯುತ್ ಪ್ರಸರಣ ನಿಗಮ ಅಧಿಕಾರಿ-ನೌಕರರ ಅನಿರ್ದಿಷ್ಟಾವಧಿ ಮುಷ್ಕರ!
ಶಿವಮೊಗ್ಗ, ಮಾ.13: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘವು ಮಾ.16 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ರಾಜ್ಯ ಸರ್ಕಾರ ಬೇಡಿಕೆ ಈಡೇರಿಸುವವರೆಗೂ ಅಧಿಕಾರಿ-ನೌಕರರು ಕರ್ತವ್ಯಕ್ಕೆ ಗೈರಾಗಲು ನಿರ್ಧರಿಸಿದ್ದಾರೆ.
ಒಂದು ವೇಳೆ ವಿದ್ಯುತ್ ಪ್ರಸರಣ ನಿಗಮ ಅಧಿಕಾರಿ, ನೌಕರರ ಮುಷ್ಕರ ಆರಂಭವಾದರೆ ರಾಜ್ಯದ ವಿದ್ಯುತ್ ಪೂರೈಕೆ ಮೇಲೆ ಗಂಭೀರ ಪರಿಣಾಮ ಬೀರುವುದು ನಿಶ್ಚಿತವಾಗಿದೆ. ವಿದ್ಯುತ್ ಸರಬರಾಜು ಅಸ್ತವ್ಯಸ್ತದಿಂದ ನಾಗರೀಕರು ತೊಂದರೆ ಎದುರಿಸುವುದು ಕೂಡ ಖಚಿತವಾಗಿದೆ.
ಅಧಿಕಾರಿ-ನೌಕರರ ವೇತನ, ಪಿಂಚಣಿ ಹಾಗೂ ಇತರೆ ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಡಳಿತ ವರ್ಗವು ಈ ಹಿಂದೆ ಸಮಿತಿ ರಚಿಸಿತ್ತು. ಸಮಿತಿಯು ಸಾಕಷ್ಟು ಅಧ್ಯಯನ ನಡೆಸಿತ್ತು.
ಜೊತೆಗೆ ರಾಜ್ಯ ಸರ್ಕಾರಿ ನೌಕರರ ವೇತನ-ಸೌಲಭ್ಯ, ಹೊರರಾಜ್ಯಗಳ ವಿದ್ಯುಚ್ಛಕ್ತಿ ಕಂಪೆನಿಗಳಲ್ಲಿನ ನೌಕರರ ವೇತನ ವಿವರ, ಪ್ರಚಲಿತ ಜೀವನಾಂಶ ಸೂಚಕ ಪರಿಗಣಿಸಿ ಶೇ.30 ರಷ್ಟು ವೇತನ, ಪಿಂಚಣಿ, ಭತ್ಯೆಗಳ ಪರಿಷ್ಕರಣೆಗೆ ಶಿಫಾರಸ್ಸು ಮಾಡಿತ್ತು.
ಆದರೆ ಶೇ. 22 ರಷ್ಟು ವೇತನ, ಪಿಂಚಣಿ ಹಾಗೂ ಭತ್ಯೆ ಪರಿಷ್ಕರಣೆಗೆ ತೀರ್ಮಾನಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಪರಿಷ್ಕರಣೆಯ ಆದೇಶ ಜಾರಿಯಾಗಿಲ್ಲ ಎಂದು ಅಧಿಕಾರಿ-ನೌಕರರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ರಾಜ್ಯ ಸರ್ಕಾರಿ ನೌಕರರ 7 ನೇ ವೇತನ ಆಯೋಗದ ವರದಿ ಸಲ್ಲಿಕೆಯಾಗದಿದ್ದರೂ ಈಗಾಗಲೇ ನೌಕರರ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಶೇ. 17 ರಷ್ಟು ವೇತನ ಪರಿಷ್ಕರಣೆಯ ಆದೇಶ ಹೊರಡಿಸಿದೆ. ಆದರೆ ವಿದ್ಯುತ್ ಪ್ರಸರಣ ನೌಕರರ ವೇತನ ಪರಿಷ್ಕರಣೆಯ ಪ್ರಸ್ತಾವನೆ ಸಲ್ಲಿಕೆಯಾಗಿ ವರ್ಷವಾಗುತ್ತಾ ಬಂದರೂ ಇಲ್ಲಿಯವರೆಗೂ ಸರ್ಕಾರ ಆದೇಶ ಹೊರಡಿಸದಿರುವುದು ಸರಿಯಲ್ಲ. ತಕ್ಷಣವೇ ವೇತನ, ಪಿಂಚಣಿ, ಭತ್ಯೆಗಳ ಪರಿಷ್ಕರಣೆ ಮಾಡಬೇಕು. ಇಲ್ಲದಿದ್ದರೆ ಮಾ. 16 ರಿಂದ ಮುಷ್ಕರ ಆರಂಭಿಸುವುದು ಅನಿವಾರ್ಯವಾಗಲಿದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಶಿವಮೊಗ್ಗ : ಮುಷ್ಕರ ಯಶಸ್ವಿಗೆ ಸಂಘಟನೆಯ ಮನವಿ

ಶಿವಮೊಗ್ಗ, ಮಾ. 13: ರಾಜ್ಯಾದ್ಯಂತ ಮಾ. 16 ರಿಂದ ಆರಂಭವಾಗುವ ಮುಷ್ಕರಕ್ಕೆ, ಶಿವಮೊಗ್ಗದ ವಿದ್ಯುತ್ ಪ್ರಸರಣ ನಿಗಮ – ನಿಯಮಿತದ ಅಧಿಕಾರಿ-ನೌಕರರು ಬೆಂಬಲ ವ್ಯಕ್ತಪಡಿಸುವಂತೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಪ್ರಮುಖರು ಮನವಿ ಮಾಡಿದ್ದಾರೆ.
ಶಿವಮೊಗ್ಗ ನಗರದ ಮೆಸ್ಕಾಂ ಮುಖ್ಯ ಕಚೇರಿ ಆವರಣದಲ್ಲಿ ಸಂಘಟನೆ ಪ್ರಮುಖರು ನೌಕರರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕವಿಪ್ರನಿನಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಮೋಹನ್ ಕುಮಾರ್ ಎಸ್.ಪಿ., ಕೆಇಬಿ ಪರಿಶಿಷ್ಟ ಜಾತಿ – ಪಂಗಡ ಕಲ್ಯಾಣ ಸಂಸ್ಥೆಯ ಉಪಾಧ್ಯಕ್ಷರಾದ ವಸಂತಕುಮಾರ್ ಎನ್., ಕವಿಪ್ರನಿನಿ ನೌಕರರ ಸಂಘದ ಶಿವಮೊಗ್ಗ ವೃತ್ತದ ಸಂಘಟನಾ ಕಾರ್ಯದರ್ಶಿ ಹೇಮಣ್ಣ,
ಶಿವಮೊಗ್ಗ ವೃತ್ತದ ಕೆಇಬಿ ಎಂಜಿನಿಯರ್ ಗಳ ಸಂಘದ ಸಂಘಟನಾ ಕಾರ್ಯದರ್ಶಿ ಸುರೇಶ್ ಸಿ, ಕೆಇಬಿ ಡಿಪ್ಲೊಮಾ ಇಂಜಿನಿಯರ್ ಗಳ ಸಂಘದ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್ ಎಂ, ಕವಿಪ್ರನಿನಿ ನೌಕರರ ಸಂಘದ ಶಿವಮೊಗ್ಗ ವಿಭಾಗದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ದಾರುಕ ಆರಾಧ್ಯ ಮೊದಲಾದವರು ಉಪಸ್ಥಿತರಿದ್ದರು.