
ಶಾಸಕ ಕೆ.ಬಿ.ಅಶೋಕನಾಯ್ಕ್ ವಿರುದ್ದ ಪ್ರತಿಭಟನಾ ಮೆರವಣಿಗೆ : ಜೆಡಿಎಸ್, ಕಾಂಗ್ರೆಸ್, ಎಎಪಿ ಪಕ್ಷದ ಮುಖಂಡರು ಭಾಗಿ
ಶಿವಮೊಗ್ಗ, ಮಾ. 13: ನಗರದ ಹೊರವಲಯ ಚನ್ನಮುಂಭಾಪುರ ಗ್ರಾಮದಲ್ಲಿ ಭೂತೇಶ್ವರ ದೇವಾಲಯ ಹಾನಿಗೊಳಿಸಿದ ಶಾಸಕ ಕೆ.ಬಿ.ಅಶೋಕನಾಯ್ಕ್ ಹಾಗೂ ಸಹಚರರ ವಿರುದ್ದ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ, ಸೋಮವಾರ ಚನ್ನಾಮುಂಭಾಪುರ ಗ್ರಾಮದಿಂದ ಡಿಸಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷದ ಮುಖಂಡರು – ಕಾರ್ಯಕರ್ತರು ಸೇರಿದಂತೆ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.
ಮಾ. 1 ರಂದು ಚನ್ನಮುಂಭಾಪುರ ಗ್ರಾಮದಲ್ಲಿ ಭೂತೇಶ್ವರ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ. ಈ ಮೂಲಕ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವ ಯತ್ನ ನಡೆಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಘಟನೆಯ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ದೇವಾಲಯ ಧ್ವಂಸಗೊಳಿಸಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು. ದೇವಾಲಯ ಪುನರ್ ನಿರ್ಮಾಣ ಮಾಡಬೇಕು. ಕೆರೆ ಒತ್ತುವರಿ ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಡಿಸಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ಭಾಗವಹಿಸಿದ್ದರು. ಉಳಿದಂತೆ ಮುಖಂಡರಾದ ಗೇಮ್ಯಾನಾಯ್ಕ್, ಜಗದೀಶ್, ಪಿಳ್ಳಂಗೆರೆ ನಾಗರಾಜ್, ಗಿರೀಶ್ ಬುಕ್ಲಾಪುರ, ಬೂದಿಗೆರೆ ಬಸವರಾಜ್, ಮಂಜುನಾಥ್, ಶೇಖರ್, ಶರತ್, ಯೋಗೇಶ್, ಕುಮಾರನಾಯ್ಕ್ ಶಶಿಕುಮಾರ್,
ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ಪಲ್ಲವಿ, ನಾರಾಯಣಸ್ವಾಮಿ, ನಿವೃತ್ತ ಪಿಡಬ್ಲ್ಯೂಡಿ ಇಂಜಿನಿಯರ್ ಮಲ್ಲಪ್ಪ, ಬಲದೇವ್ ಕೃಷ್ಣ, ದೇವಿಕುಮಾರ್, ಕೆ.ದೇವೇಂದ್ರಪ್ಪ,
ಜೆಡಿಎಸ್ ಮುಖಂಡರಾದ ಸತೀಶ್ ಗೌಡ, ಶಶಿನಾಯ್ಕ್, ರೇಣುನಾಯ್ಕ್, ಫಾಲಾಕ್ಷಿ ಹಾಗೂ ಎಎಪಿ ಮುಖಂಡರಾದ ಟಿ.ನೇತ್ರಾವತಿ ಸೇರಿದಂತೆ ಮೊದಲಾದವರಿದ್ದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ : ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್ ಅಸಮಾಧಾನ
*** ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಚೆನ್ನಾಮುಂಭಾಪುರ ಗ್ರಾಮದಲ್ಲಿ ದೇವಾಲಯ ಧ್ವಂಸಗೊಳಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ನಡೆಸಿರುವುದು ಸರಿಯಲ್ಲವಾಗಿದೆ ಎಂದು ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ಡಿಸಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮಸ್ಥರು ಪಕ್ಷಾತೀತವಾಗಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿದ್ದೆನೆ. ಜನಪ್ರತಿನಿಧಿಗಳಾದವರು ಜನಸಾಮಾನ್ಯರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳಬಾರದು. ಇದು ಯಾರಿಗೂ ಶ್ರೇಯಸ್ಸು ತರುವುದಿಲ್ಲ ಎಂಬುವುದನ್ನು ಅರ್ಥೈಸಿಕೊಳ್ಳಬೇಕಾಗಿದೆ ಎಂದು ಇದೇ ವೇಳೆ ಶಾರದಾ ಪೂರ್ಯನಾಯ್ಕ್ ಅವರು ತಿಳಿಸಿದ್ದಾರೆ.