
ಮಂಗಳೂರಿನಿಂದ ಮಾದಕ ವಸ್ತು ತಂದವ ; ಸಾಗರದಲ್ಲಿ ತೆಗೆದುಕೊಳ್ಳುತ್ತಿದ್ದ ಆರೋಪಿಗಳು ಪೊಲೀಸ್ ಬಲೆಗೆ!
ಶಿವಮೊಗ್ಗ, ಮಾ. 14: ಮಂಗಳೂರಿನಿಂದ ಮಾದಕ ವಸ್ತು ತಂದು, ಸಾಗರದ ವ್ಯಕ್ತಿಗಳಿಗೆ ನೀಡುತ್ತಿದ್ದ ಪ್ರಕರಣವೊಂದನ್ನು ಸಾಗರ ಟೌನ್ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ಮಂಗಳೂರಿನ ತೋಡಾರ್ ಗ್ರಾಮದ ನಿವಾಸಿ ಸೃಜನ್ ಎಸ್ ಶೆಟ್ಟಿ (20), ಸಾಗರ ಪಟ್ಟಣದ ಅಣಲೇಕೊಪ್ಪದ ನಿವಾಸಿ ಮೊಹಮ್ಮದ್ ಸಮ್ಮಾನ್ ಯಾನೆ ಸಲ್ಮಾನ್ (24) ಹಾಗೂ ಶ್ರೀಧರ್ ನಗರದ ನಿವಾಸಿ ಮೊಹಮ್ಮದ್ ಯಾಸೀಫ್ (25) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಬಂಧಿತರಿಂದ 1.06 ಗ್ರಾಂ ತೂಕದ ಬಿಳಿ ಬಣ್ಣದ ಮಾದಕ ವಸ್ತುವಿನ ಪುಡಿ, ದ್ರವರೂಪದ ವಸ್ತುವಿದ್ದ ಬಾಟಲಿ, ಖಾಲಿ ಮಾತ್ರೆಯ ಶೀಟ್, 4 ಮೊಬೈಲ್ ಫೋನ್, 2 ಸಿಮ್ ಕಾರ್ಡ್, 200 ರೂಪಾಯಿ, ಸ್ವಿಪ್ಟ್ ಡಿಸೈರ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಗರ ಟೌನ್ ಠಾಣೆ ಇನ್ಸ್’ಪೆಕ್ಟರ್ ಸೀತಾರಾಂ, ಸಾಗರ ಉಪವಿಭಾಗದ ಅಬಕಾರಿ ಉಪಾಧೀಕ್ಷಕರಾದ ಶಿವಪ್ರಸಾದ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಈ ಸಂಬಂಧ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಚಿತ ಮಾಹಿತಿ: ಮಾ.13 ರ ಮುಂಜಾನೆ ಮಂಗಳೂರಿನಿಂದ ಬಸ್ ನಲ್ಲಿ ಸಾಗರಕ್ಕೆ ಆಗಮಿಸುತ್ತಿರುವ ಯುವಕನೋರ್ವ, ಮಾದಕ ವಸ್ತುವನ್ನು ಸಾಗರದ ಅಣಲೆಕೊಪ್ಪದ ಶುಂಠಿ ಕಣದಲ್ಲಿ ನಿಲ್ಲಿಸಿರುವ ಸ್ವಿಪ್ಟ್ ಡಿಸೈರ್ ಕಾರಿನಲ್ಲಿದ್ದವರಿಗೆ ನೀಡಲಿದ್ದಾನೆ ಎಂಬ ಖಚಿತ ವರ್ತಮಾನ ಸಾಗರ ಟೌನ್ ಠಾಣೆ ಇನ್ಸ್’ಪೆಕ್ಟರ್ ಸೀತಾರಾಂ ಅವರಿಗೆ ಲಭಿಸಿತ್ತು.
ಇದರ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಮಂಗಳೂರಿನಿಂದ ಮಾದಕ ವಸ್ತು ತಂದವ ಹಾಗೂ ಅದನ್ನು ಪಡೆದುಕೊಳ್ಳುತ್ತಿದ್ದವರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.