
ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಆರೋಪಿಗಳಿಬ್ಬರ ಮೇಲೆ ದಾಳಿ : ಓರ್ವ ಸಾವು – ಮತ್ತೋರ್ವನ ಸ್ಥಿತಿ ಗಂಭೀರ..!
- ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ನಡೆದ ಘಟನೆ
- ಕೃತ್ಯಕ್ಕೆ ಬಳಕೆಯಾಗಿದ್ದು ಬೆಂಗಳೂರು ಮೂಲದ ಕಾರು!
- ಘಟನಾ ಸ್ಥಳಕ್ಕೆ ಇನ್ಸ್’ಪೆಕ್ಟರ್ ರಾಘವೇಂದ್ರ ಕಾಂಡಿಕೆ ಭೇಟಿ
***************************************************************************************
ನ್ಯಾಮತಿ (ದಾವಣಗೆರೆ), ಮಾ. 15: ಶಿವಮೊಗ್ಗದ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇಬ್ಬರ ಮೇಲೆ, ಗುಂಪೊಂದು ದಾಳಿ ನಡೆಸಿದೆ. ಈ ವೇಳೆ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ, ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಚೀಲೂರು ಸಮೀಪದ ಗೋವಿನಕೋವಿ ಗ್ರಾಮದ ಹಳ್ಳದ ಬಳಿ ಮಾ. 15 ರ ಮಧ್ಯಾಹ್ನ ನಡೆದಿದೆ.
ಆಂಜನೇಯ (28) ಸ್ಥಳದಲ್ಲಿಯೇ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಧು (27) ಗಂಭೀರವಾಗಿ ಗಾಯಗೊಂಡಿದ್ದು, ಈತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರಿಬ್ಬರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸ್ಕಾರ್ಪಿಯೋ ಕಾರಿನಲ್ಲಿ ಆಗಮಿಸಿದ ಗುಂಪು ಬೈಕ್ ಗೆ ಡಿಕ್ಕಿ ಹೊಡೆಸಿ ಕೆಳಕ್ಕೆ ಬೀಳಿಸಿದೆ. ನಂತರ ಇವರಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಕಾರು ರಸ್ತೆ ಬದಿಯ ತೋಟದಲ್ಲಿ ಸಿಲುಕಿ ಬಿದ್ದಿದೆ. ಇದರಿಂದ ಕಾರನ್ನು ಅಲ್ಲಿಯೇ ಬಿಟ್ಟು, ಆರೋಪಿಗಳೆಲ್ಲರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
‘ಆಂಜನೇಯ ಹಾಗೂ ಮಧು ಹರಿಹರ ತಾಲೂಕು ಬಾನುವಳ್ಳಿಯವರಾಗಿದ್ದಾರೆ. ಚಾಲಕ ವೃತ್ತಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ವಿರುದ್ದ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿ ತೆರೆಯಲಾಗಿದೆ. ಇವರ ಮೇಲೆ ದಾಳಿ ನಡೆಸಿದ ಆರೋಪಿಗಳ ವಿವರ ಕಲೆ ಹಾಕಲಾಗುತ್ತಿದೆ’ ಎಂದು ನ್ಯಾಮತಿ ಪೊಲೀಸ್ ಮೂಲಗಳು ಮಾಹಿತಿ ನೀಡುತ್ತವೆ.
ಘಟನಾ ಸ್ಥಳಕ್ಕೆ ಇನ್ಸ್’ಪೆಕ್ಟರ್ ರಾಘವೇಂದ್ರ ಕಾಂಡಿಕೆ ಸೇರಿದಂತೆ, ನ್ಯಾಮತಿ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದಿರುಗುತ್ತಿದ್ದರು: ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣದ 8 ಜನ ಆರೋಪಿಗಳಲ್ಲಿ, ಆಂಜನೇಯ ಹಾಗೂ ಮಧು ಕೂಡ ಆಪಾದಿತರಾಗಿದ್ದರು. ಇತರೆ ಆರೋಪಿಗಳ ಜೊತೆ ಜೈಲು ಸೇರಿದ್ದ ಇವರಿಬ್ಬರು, ಜಾಮೀನಿನ ಮೇಲೆ ಹೊರಬಂದಿದ್ದರು.
ಇದೇ ಪ್ರಕರಣದ ವಿಚಾರಣೆಗಾಗಿ ಬುಧವಾರ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೋರ್ಟ್ ಗೆ ಆಗಮಿಸಿ ಬೈಕ್ ನಲ್ಲಿ ಹಿಂದಿರುಗುತ್ತಿದ್ದ ವೇಳೆ, ಸ್ಕಾರ್ಪಿಯೋ ಕಾರಿನಲ್ಲಿ ಆಗಮಿಸಿದ ಗುಂಪು ದಾಳಿ ನಡೆಸಿದೆ.
ಇವರಿಬ್ಬರ ಮೇಲೆ ದಾಳಿಗೆ ಸ್ಪಷ್ಟ ಕಾರಣಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಹಂದಿ ಅಣ್ಣಿ ಹತ್ಯೆಗೆ ಪ್ರತೀಕಾರವಾಗಿ ದಾಳಿ ನಡೆದಿದೆಯೇ? ಅಥವಾ ಬೇರೆ ಕಾರಣಗಳಿವೆಯೇ? ಎಂಬುವುದು ಪೊಲೀಸರ ತನಿಖೆಯ ನಂತರವಷ್ಟೆ ಸ್ಪಷ್ಟವಾಗಬೇಕಾಗಿದೆ.
ಬೆಂಗಳೂರು ನೊಂದಣಿ ಹೊಂದಿರುವ ಸ್ಕಾರ್ಪಿಯೋ ಕಾರು!

*** ಆಂಜನೇಯ ಹಾಗೂ ಮಧು ಮೇಲೆ ದಾಳಿ ನಡೆಸಿದ ಗುಂಪು ಸ್ಕಾರ್ಪಿಯೋ ಕಾರನ್ನು ಘಟನಾ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದೆ. ಸದರಿ ಕಾರು ಬೆಂಗಳೂರಿನ ನೊಂದಣಿ ಸಂಖ್ಯೆ ಹೊಂದಿದ್ದಾಗಿದೆ. ಕಾರಿನ ಮಾಲೀಕರು ಯಾರು ಎಂಬಿತ್ಯಾದಿ ವಿವರಗಳನ್ನು ನ್ಯಾಮತಿ ಪೊಲೀಸರು ಕಲೆ ಹಾಕಲಾರಂಭಿಸಿದ್ದಾರೆ.
ಪೊಲೀಸ್ ಠಾಣೆ ಸಮೀಪದಲ್ಲಿಯೇ ನಡೆದಿತ್ತು ಹಂದಿ ಅಣ್ಣಿಯ ಬರ್ಬರ ಹತ್ಯೆ..!

*** ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿ ವೃತ್ತದ ವಿನೋಬನಗರ ಪೊಲೀಸ್ ಠಾಣೆ ಸಮೀಪದಲ್ಲಿಯೇ 2022 ಜುಲೈ 14 ರಂದು, ಹಾಡಹಗಲೇ ರೌಡಿ ಶೀಟರ್ ಹಂದಿ ಅಣ್ಣಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಆರೋಪಿಗಳಾದ ಕಾಡಾ ಕಾರ್ತಿಕ್, ನಿತಿನ್, ಫಾರೂಕ್, ಚಂದನ್, ಆಂಜನೇಯ, ಮಧು, ಮದನ್ ರಾಯ್, ಮಧುಸೂದನ್ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಚೇರಿಗೆ ರಾತ್ರೋರಾತ್ರಿ ಆಗಮಿಸಿ ಶರಣಾಗಿದ್ದರು. ತದನಂತರ ಶಿವಮೊಗ್ಗ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ರೌಡಿ ಶೀಟರ್ ಬಂಕ್ ಬಾಲು ಹತ್ಯೆಗೆ ಪ್ರತೀಕಾರವಾಗಿ ಹಂದಿ ಅಣ್ಣಿ ಹತ್ಯೆ ಮಾಡಲಾಗಿತ್ತು ಎಂದು ತಿಳಿದುಬಂದಿತ್ತು. ಪ್ರಕರಣದ ಮುಖ್ಯ ಆರೋಪಿಯಾಗಿದ್ದ ಕಾಡಾ ಕಾರ್ತಿಕ್ ಬಂಕ್ ಬಾಲು ಸಹಚರನಾಗಿದ್ದು, ಬಾಲು ಹತ್ಯೆ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದ ಎಂದು ಹೇಳಲಾಗಿತ್ತು.