ಅಪ್ಪು ಹುಟ್ಟು ಹಬ್ಬದಂದು ಅನ್ನ ಸಂತರ್ಪಣೆ ಕಾರ್ಯಕ್ರಮ

ಶಿಕಾರಿಪುರ, ಮಾ. 16: ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಮಾ.17 ರಂದು ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಸ್ನೇಹ ಬಳಗ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮುಕ್ತಿಧಾಮ ಅಭಿವೃದ್ಧಿ ಸಮಿತಿ ವತಿಯಿಂದ ಸಿಹಿ ವಿತರಣೆ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು  ಸ್ನೇಹ ಬಳಗದ ವೈಭವ್ ಬಸವರಾಜ್ ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗ್ಗೆ 8:30ಕ್ಕೆ ಬೈಕ್ ರಾ‌್ಯ ಲಿಯ ಮೂಲಕ ಪಟ್ಟಣದ ವಿವಿಧ ಭಾಗದಲ್ಲಿ ಸಂಚರಿಸಿ 9:30ಕ್ಕೆ ಹೊಸ ಸಂತೆ ಮೈದಾನದ ಬಳಿಯಿರುವ ಬಸವೇಶ್ವರ ವೃತ್ತದಲ್ಲಿ ಜನ್ಮ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ತಾಲೂಕಿನ ಸಮಸ್ತ ನಾಗರಿಕರು ಭಾಗವಹಿಸಬೇಕೆಂದು ಕೋರಿದ್ದಾರೆ. 

ಡಾ. ರಾಜಕುಮಾರ್ ಕುಟುಂಬ ಮಾಡಿರುವ ದಾನ ಧರ್ಮ ಇಂದಿಗೆ ಹೋಲಿಸಿದರೆ ಸಾವಿರ ಕೋಟಿಯ ಮೇಲೆ ಆಗುತ್ತದೆ. ಗುಂಡುರಾವ್ ಸರ್ಕಾರದಲ್ಲಿ ಆರ್ಥಿಕ ವ್ಯವಸ್ಥೆ ಹದಗೆಟ್ಟಾಗ ಕರ್ನಾಟಕದ 18 ಜಿಲ್ಲೆಗಳಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿ 18 ಜಿಲ್ಲಾ ಕೇಂದ್ರಗಳಲ್ಲಿ ಯುವಜನ ಕ್ರೀಡಾಂಗಣ ಕಟ್ಟಿದ್ದು ಇದೇ ಡಾ. ರಾಜಕುಮಾರ್ ಅವರಾಗಿದ್ದಾರೆ.

ಮುಂಬೈ, ದೆಹಲಿ, ದುಬೈನಲ್ಲಿ ಕನ್ನಡ ಸಂಘದ ಕಟ್ಟಡಗಳ  ನಿರ್ಮಾಣ ಹಾಗೂ ಬೆಂಗಳೂರಿನ ಕೆ.ಇ.ಬಿ ನೌಕರರ ಸಮುದಾಯ ಭವನಕ್ಕೆ ಮತ್ತು ಪೋಲಿಸ್ ಕ್ವಾಟ್ರಸ್ ಗಳಿಗೆ  ರಸಮಂಜರಿ ಕಾರ್ಯಕ್ರಮದ ಮೂಲಕ ಅಂದೆ ಕೋಟ್ಯಾಂತರ ರೂಪಾಯಿ ಗಳನ್ನು ದಾನ ಮಾಡಿದ್ದರು.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಬಂದ 5 ಲಕ್ಷ ರೂ. ಹಣವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿಗಾಗಿ ನೀಡಿದ್ದರು. ಅವರ ಗಾಯನದಿಂದ ಬರುತ್ತಿದ್ದ ಹಣದಿಂದ  ಅನೇಕ ಸಂಘ ಸಂಸ್ಥೆಗಳಿಗೆ ವಿನಯೋಗಿಸಿದ್ದಾರೆ. ಅಲ್ಲದೆ ಶಿವಮೊಗ್ಗದ ಕುವೆಂಪುರ ರಂಗ ಮಂದಿರ, ಡೆಂಟಲ್ ಕಾಲೇಜುಗಳು, ಉಜಿರೆ ಶ್ರೀ ರಾಮ ಮಂದಿರ ಸೇರಿದಂತೆ ಕೆ.ಎಂ.ಎಫ್ ಗೆ ಉಚಿತ ಜಾಹೀರಾತು ನೀಡಿ ರೈತರ ಉತ್ಪನ್ನಗಳಿಗೆ ರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಕಲ್ಪಿಸಿಕೊಟ್ಟವರು ಇದೇ ಡಾ. ರಾಜಕುಮಾರ್.

ರಾಜಕಾರಣಿಗಳು ಮಾಡಬೇಕಾದ ಕೆಲಸವನ್ನು ಒಬ್ಬ ನಟನಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದ ಯಾರಾದರೂ ಒಬ್ಬ ನಟ ಇದ್ದರೆ ಅದು ನಮ್ಮ ಕರ್ನಾಟಕದ  ಹೆಮ್ಮೆಯ ಮುತ್ತುರಾಜ್ ಎಂದ ಅವರು, ಅದೇ ರೀತಿ ಅಪ್ಪು ಅವರು ಕೂಡ ತಂದೆಯಂತೆಯೇ ಪ್ರಚಾರ ಬಯಸದೆ ಎಡಗೈಲಿ  ಕೊಟ್ಟಿದ್ದು, ಬಲಗೈಗೆಗೆ ಗೊತ್ತಾಗಬಾರದು ಎಂದು ಅವರ ತಂದೆಯ ಮಾತಿನಂತೆ ಎಲೆಮರೆಯ ಕಾಯಾಗಿ ಅನೇಕ ಅನಾಥಾಶ್ರಮ, ಅಬಲಾಶ್ರಮ, ಶಾಲೆಗಳ ದತ್ತು, ಶಕ್ತಿಧಾಮ ಸೇರಿದಂತೆ ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಸಾಮಾಜಿಕ ಸೇವೆ ಮಾಡಿದ್ದಾರೆ.

ಇವರು ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ  ಕೇವಲ ಆರು ಸಾವಿರ ನೇತ್ರದಾನ ನೋಂದಣಿಯಾಗಿತ್ತು, ರಾಜಕುಮಾರ್ ಹಾಗೂ ಪುನೀತ್ ನೇತ್ರದಾನದ ನಂತರ 5 ಲಕ್ಷಕ್ಕೂ ಹೆಚ್ಚು  ನೊಂದಣಿ ಯಾಗಿದೆ. ಮುಂದಿನ ದಿನಗಳಲ್ಲಿ ಅಪ್ಪು ಸ್ಮರಣಾರ್ಥ ನೇತ್ರದಾನ, ದೇಹ ದಾನ, ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಮತ್ತು ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಈ ಬಳಗದಿಂದ ಹಮ್ಮಿಕೊಳ್ಳಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಚ್.ಎಸ್ ರಘು ಮಾತನಾಡಿ, ಪುನೀತ್ ರಾಜಕುಮಾರ್ ಅವರ ದತ್ತಿಯನ್ನು ಶ್ರೀಮತಿ ವಿಜಯಲಕ್ಷ್ಮಿ ಕಂಚುಗಾರ್ ರವರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪುನೀತ್ ರಾಜಕುಮಾರ್ ರವರ ದತ್ತಿಯನ್ನು  ನಡೆಸಲಾಗುವುದು ಎಂದ ಅವರು, ಪುನೀತ್ ರವರ ಗುಣ, ನಡವಳಿಕೆ, ಸರಳತೆ ಹಾಗೂ ಸಮಾಜ ಸೇವೆ ಈ ದೇಶದ ನಟರಿಗೆ ಮಾದರಿ ಎಂದರು.

ಈ ಸಂದರ್ಭ ಮಾಜಿ ಕಾ.ಸ.ಪಾ ಅಧ್ಯಕ್ಷರಾದ ಶಿವರಂಜಿನಿ ಸುದರ್ಶನ್, ಜಗದೀಶ್, ಪ್ರದೀಪ್ ರೊಟ್ಟಿ, ಮಂಜುನಾಥ್, ಕಾಟನೂರು ರವಿ, ಸಂತೋಷ್,    ಸುರೇಂದ್ರ, ಹಾಜರಿದ್ದರು.

Previous post ಮಾ.17 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯ!
Next post ಶಿವಮೊಗ್ಗ ಜಿ.ಪಂ.ಗೆ ಅತ್ಯುತ್ತಮ ಜಿಲ್ಲಾ ಪಂಚಾಯತ್ ಪ್ರಶಸ್ತಿ