
bengaluru | ಬಸವಣ್ಣ, ಬುದ್ಧನ ನಂತರ ಸಮಾನತೆಗೆ ಹೋರಾಡಿದವರು ಡಾ.ಬಿ.ಆರ್.ಅಂಬೇಡ್ಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು (bangalore), ಡಿ. 06: ದೇಶದಲ್ಲಿ ಬಸವಣ್ಣ, ಬುದ್ಧನ ನಂತರ ಸಮಾನತೆಗಾಗಿ ಹೋರಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಂವಿಧಾನಶಿಲ್ಪಿ, ಭಾರತ ರತ್ನ, ಮಹಾ ಮಾನವತಾವಾದಿ ಬಾಬಾ ಸಾಹೇಬ್ ಡಾ ll ಬಿ ಆರ್ ಅಂಬೇಡ್ಕರ್ ರವರ 68 ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಇಂದು ವಿಧಾನಸೌಧದ ಮುಂಭಾಗವಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದು ಪುಷ್ಪಾರ್ಚನೆ ಮೂಲಕ ಅವರನ್ನು ಗೌರವಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1956 ಡಿಸೆಂಬರ್ 6 ರಂದು ನಮ್ಮನ್ನೆಲ್ಲಾ ಅಗಲಿದರು. ಆ ದಿನವನ್ನೇ ಪರಿನಿರ್ವಾಣ ದಿನಾಚರಣೆ ಎಂದು ಆಚರಿಸಲಾಗುತ್ತದೆ ಎಂದರು
ಅವರು ತಮ್ಮ ಬದುಕನ್ನು ಸಾಮಾಜಿಕ ಹೋರಾಟದಲ್ಲಿ ಹಾಗೂ ಸಮಾಜದ ಪರಿವರ್ತನೆಗಾಗಿ ತೊಡಗಿಸಿಕೊಂಡರು. ಅಂಬೇಡ್ಕರ್ ಅವರು ಈ ದೇಶಕ್ಕೆ ಹಾಗೂ ನಮ್ಮ ಸಾಮಾಜಿಕ ಬದುಕಿಗೆ ಅಗತ್ಯವಾದಂತಹ ಸಂವಿಧಾನವನ್ನು ಕೊಟ್ಟಿದ್ದಾರೆ.
ಜಗತ್ತಿನಲ್ಲಿಯೇ ಶ್ರೇಷ್ಠ ಲಿಖಿತ ಸಂವಿಧಾನವೆಂದು ನಮ್ಮ ಸಂವಿಧಾನ ಖ್ಯಾತಿ ಪಡೆದಿದೆ . ಸಂವಿಧಾನದ ಶ್ರೇಷ್ಠತೆ ತಿಳಿಯಬೇಕಾದರೆ ಒಳ್ಳೆಯವರ ಕೈಯಲ್ಲಿ ಅನುಷ್ಟಾನವಾಗಬೇಕು. ಕೆಟ್ಟವರ ಕೈಗೆ ಹೋದರೆ ಕೆಟ್ಟದಾಗುತ್ತದೆ ಎಂದು ಅಂಬೇಡ್ಕರ್ ಅವರು ಸ್ಪಷ್ಟವಾಗಿ ಈ ದೇಶದ ಜನರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದರು ಎಂದರು.
ಕೇವಲ ದಲಿತರಿಗೆ ಎಲ್ಲರಿಗೂ ಸಾಮಾಜಿಕ ಅವಕಾಶಗಳನ್ನು ದೊರಕಿಸಲು ಅವರು ಶ್ರಮಿಸಿದರು.ಅವಕಾಶ ವಂಚಿತರು, ಶೋಷಣೆ, ಅನ್ಯಾಯಕ್ಕೆ, ಅವಮಾನಕ್ಕೆ, ದೌರ್ಜನ್ಯಕ್ಕೆ ಒಳಪಟ್ಟ ಎಲ್ಲಾ ಜನರ ಪರವಾಗಿ ಕೆಲಸ ಅವರು ಮಾಡಿದ್ದರು. ಸಮಾಜದಲ್ಲಿ ಸಮಾನತೆ ಬಯಸಿ ಅದನ್ನೇ ನಿರ್ಮಿಸಲು ಬಹಳ ಸ್ಪಷ್ಟವಾಗಿ ಹೇಳಿದ್ದರು.
ಸಂವಿಧಾನದ ಧ್ಯೇಯೋದ್ದೇಶಗಳೂ ಅದನ್ನೇ ಹೇಳುತ್ತದೆ. ಸಂವಿಧಾನದಿಂದ ಅನುಕೂಲ ಪಡೆದವರು ಅವರ ಸೋದರ ಜನಾಂಗಗಳಿಗೆ ಸಹಾಯ ಮಾಡಬೇಕು. ಎಲ್ಲರೂ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕೆಂದು ಬಯಸಿದ್ದರು ಎಂದರು.
ಬಹಳ ಜನ ಸಂವಿಧಾನವನ್ನು ವಿರೋಧಿಸುತ್ತಾರೆ. ಭಾರತ ಬಹುಸಂಸ್ಕೃತಿಯ, ಬಹುತ್ವದ ದೇಶ. ಅನೇಕ ಜಾತಿ, ಧರ್ಮಗಳಿವೆ. ಅನೇಕ ಭಾಷೆಗಳೂ ಇವೆ. ಇದಕ್ಕೆ ಯೋಗ್ಯವಾದ ಸಂವಿಧಾನವನ್ನು ಕೊಟ್ಟವರು ಅಂಬೇಡ್ಕರ್. ಎಲ್ಲಾ ಧರ್ಮಗಳೂ, ಜಾರಿಗಳೂ ಸಮಾನವಾದುದು. ಮಾನವ ಧರ್ಮಕ್ಕೆ ಒತ್ತು ನೀಡಿದ್ದರು. ಮೂಲಭೂತವಾಗಿ ನಾವೆಲ್ಲಾ ಮನುಷ್ಯರು. ಮಾನವರು ಪರಸ್ಪರ ಪ್ರೀತಿಸಬೇಕೇ ಹೊರತು ದ್ವೇಷ ಸಲ್ಲದು. ಇದನ್ನು ಅಂಬೇಡ್ಕರ್ ಅವರು ತಮ್ಮ ಬದುಕಿನಲ್ಲಿ ಸಾರಿದ್ದರು.
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದ ನಾನು ಹಿಂದೂ ಆಗಿ ಹುಟ್ಟಿದ್ದು, ಹಿಂದೂ ಆಗಿ ಸಾಯುವುದಿಲ್ಲ ಎಂದು ತಮ್ಮ ಕಡೇ ದಿನಗಳಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದರು. ಸ್ವೀಕಾರ ಮಾಡಿದ ನಂತರ ಬಹಳ ದಿನಗಳ ಕಾಲ ಉಳಿಯಲಿಲ್ಲ . ಅವರು ಕೊಟ್ಟ ಸಂವಿಧಾನದ ಪ್ರಕಾರ ಮತ್ತು ಅವರ ಹೋರಾಟದ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವುದೇ ಅವರಿಗೆ ನಾವು ಸಲ್ಲಿಸುವ ಗೌರವ ಎಂದರು. ಅದೇ ರೀತಿಯಲ್ಲಿ ಸಂವಿಧಾನ , ಪ್ರಜಾಪ್ರಭುತ್ವ, ಸಮಾನತೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದರು.
ಬಳ್ಳಾರಿಯಲ್ಲಿ ಬಾಣಂತಿ ಸಾವು : ಪರಿಶೀಲನೆ
*** ಬಳ್ಳಾರಿಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈಗಾಗಲೇ ಸಭೆ ನಡೆಸಿ ಡ್ರಗ್ಸ್ ಕಂಟ್ರೋಲರ್ ಅವರನ್ನು ಅಮಾನತ್ತು ಮಾಡಲಾಗಿದೆ. ಈ ಪ್ರಕರಣದಲ್ಲಿ ಸಾವು ಹೇಗೆ ಸಂಭವಿಸಿದೆ ಎಂದು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Chief Minister Siddaramaiah said that after Basavanna and Buddha, Baba Saheb Ambedkar fought for equality in the country. Constitution Architect, Bharat Ratna, Great Humanist Baba Saheb Dr. BR Ambedkar was speaking to the media after garlanding his statue in front of the Vidhana Soudha today on the occasion of his 68th Maha Parinirvana Day.