ಕೃಷಿ ಮೇಳದ ವೇದಿಕೆ ಮೇಲೆಯೇ ದಿಢೀರ್ ಪ್ರತಿಭಟನೆ..!

ಶಿವಮೊಗ್ಗ, ಮಾ. 19: ಶಿವಮೊಗ್ಗದ ಹೊರವಲಯ ನವುಲೆಯ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕೆ ಮೇಳದ ವೇದಿಕೆಯಲ್ಲಿಯೇ ಭಾನುವಾರ ಮಧ್ಯಾಹ್ನ ಕೆಲವರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಮಾ. 17 ರಿಂದ ಆರಂಭವಾಗಿರುವ ಕೃಷಿ ಮೇಳಕ್ಕೆ, ರೈತರು ನಿರೀಕ್ಷಿತ ಪ್ರಮಾಣದಲ್ಲಿ ಆಗಮಿಸುತ್ತಿಲ್ಲ. ಮೇಳದ ಬಗ್ಗೆ ರೈತರಿಗೆ ಸಮರ್ಪಕವಾಗಿ ಮಾಹಿತಿ ನೀಡಿಲ್ಲ. ಜೊತೆಗೆ ಮೇಳಕ್ಕೆ ಆಗಮಿಸುತ್ತಿರುವ ರೈತರಿಗೆ ಸೂಕ್ತ ಮಾಹಿತಿ ನೀಡುವ ವ್ಯವಸ್ಥೆಯೂ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಮತ್ತೊಂದೆಡೆ, ಮೇಳದಲ್ಲಿ ಹಾಕಲಾಗಿರುವ ಸ್ಟಾಲ್ ಗಳಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ-ವಹಿವಾಟು ನಡೆಯುತ್ತಿಲ್ಲ. ಸಾವಿರಾರು ರೂ. ನಷ್ಟ ಅನುಭವಿಸುವಂತಾಗಿದೆ ಎಂದು ಕೆಲ ಸ್ಟಾಲ್ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

ಪ್ರತಿಭಟನೆಯಲ್ಲಿ ಕೆಲ ರೈತರು, ಸ್ಟಾಲ್ ವ್ಯಾಪಾರಿಗಳು ಭಾಗಿಯಾಗಿದ್ದರು. ಪ್ರತಿಭಟನಾಕಾರರ ಮನವೊಲಿಕೆಗೆ ವಿವಿ ಅಧಿಕಾರಿಗಳು ಹರಸಾಹಸ ನಡೆಸಿದರು. ದಿಢೀರ್ ಪ್ರತಿಭಟನೆಯಿಂದ ವೇದಿಕೆ ಸಭಾಂಗಣದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Previous post ಶಿವಮೊಗ್ಗ ಜಿ.ಪಂ.ಗೆ ಅತ್ಯುತ್ತಮ ಜಿಲ್ಲಾ ಪಂಚಾಯತ್ ಪ್ರಶಸ್ತಿ
Next post ಕೃಷಿ ಮೇಳದಲ್ಲಿ ಗಮನ ಸೆಳೆದ ಶ್ವಾನಗಳ ಪ್ರದರ್ಶನ