shimoga news | ರೈಲಿನಲ್ಲಿ ನೀರಿನ ಕೊರತೆ : ಶಿವಮೊಗ್ಗ ಪ್ರಯಾಣಿಕನಿಗೆ ಸೂಕ್ತ ಪರಿಹಾರ ನೀಡಲು ಆದೇಶ!

Shivamogga consumer court

ಶಿವಮೊಗ್ಗ (shivamogga), ಅಕ್ಟೋಬರ್ 27: ರೈಲಿನಲ್ಲಿ ನೀರಿನ ಸೌಲಭ್ಯ ಕಲ್ಪಿಸದೆ ಸೇವಾ ನ್ಯೂನ್ಯತೆ ಎಸಗಿದ್ದಕ್ಕೆ ಸಂಬಂಧಿಸಿದಂತೆ, ರೈಲ್ವೆ ಇಲಾಖೆಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ.

ಏನೀದು ಪ್ರಕರಣ : ಶಿವಮೊಗ್ಗದ ಬಸವನಗುಡಿಯ ಪಿ.ಡಬ್ಲ್ಯೂ ಡಿ ವಸತಿ ಗೃಹದ ನಿವಾಸಿ ನಾಗೇಂದ್ರ ಅವರು ತಮ್ಮ ಕುಟುಂಬದವರು ಮತ್ತು ಸಂಬಂಧಿಕರು ಸೇರಿ ಒಟ್ಟು 24 ಜನರು ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಿದ್ದರು. ದರ್ಶನ ಮುಗಿಸಿ ಯಶವಂತಪುರದಿಂದ ಶಿವಮೊಗ್ಗಕ್ಕೆ ತೆರಳಲು ರೂ. 1,000 ರೂ. ಪಾವತಿಸಿ ಸಾಮಾನ್ಯ ಟಿಕೆಟ್‌ಗಳನ್ನು ಖರೀದಿಸಿ ರೈಲು ಸಂಖ್ಯೆ: 66575ರಲ್ಲಿ ಪ್ರಯಾಣಿಸುತ್ತಿದ್ದರು.

ಆದರೆ ಸದರಿ ರೈಲಿನ ಬಾತ್ ರೂಮ್‌ಗಳಲ್ಲಿ ನೀರಿನ ಸೌಲಭ್ಯವಿರಲಿಲ್ಲ. ಈ ಕುರಿತಂತೆ ತುಮಕೂರು ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್‌ ಬಳಿ ದೂರು ದಾಖಲಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ತುಮಕೂರಿನಲ್ಲಿ ಇಳಿದು ಮತ್ತೊಂದು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಹೆಚ್ಚುವರಿಯಾಗಿ ರೂ. 1,760 ಪಾವತಿಸಿ ಟಿಕೆಟ್ ಪಡೆದು ಪ್ರಯಾಣಿಸಿದ್ದರು.

ನಂತರ ಎದುರುದಾರರಿಗೆ ನೋಟೀಸ್ ನೀಡಿ, ರೈಲಿನಲ್ಲಿ ನೀರಿನ ಸೌಲಭ್ಯವಿಲ್ಲದೆ ಸೇವಾ ನ್ಯೂನ್ಯತೆ ಎಸಗಿರುವುದಾಗಿ ತಿಳಿಸಿ ಟಿಕೆಟ್ ಹಣ ಹಿಂದಿರುಗಿಸಲು ಕೋರಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ, ಅವರು ಗ್ರಾಹಕ ಆಯೋಗದ ಮೊರೆ ಹೋಗಿದ್ದರು.

ಆಯೋಗದ ಆದೇಶ: ದೂರುದಾರರು ಮತ್ತು ಎದುರುದಾರರು ಸಲ್ಲಿಸಿದ ದಾಖಲಾತಿಗಳು ಹಾಗೂ ವಾದ-ವಿವಾದಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷರಾದ  ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠವು ಈ ಕೆಳಗಿನಂತೆ ಆದೇಶಿಸಿದೆ.

1 ಮತ್ತು 2ನೇ ಎದುರುದಾರರು (ಸ್ಟೇಷನ್ ಮಾಸ್ಟರ್, ಸೌತ್ ವೆಸ್ಟರ್ನ್ ರೈಲ್ವೆ, ಬೆಂಗಳೂರು ಹಾಗೂ ಸ್ಟೇಷನ್ ಮಾಸ್ಟರ್, ತುಮಕೂರು ರೈಲು ನಿಲ್ದಾಣ) ರೈಲು ಟಿಕೆಟ್ ಮೊತ್ತ ರೂ. 1,000/- ಗಳಿಗೆ ದಿನಾಂಕ: 15/04/2025 ರಿಂದ ವಾರ್ಷಿಕ ಶೇ. 6 ರಂತೆ ಬಡ್ಡಿ ಸೇರಿಸಿ ಈ ಆದೇಶವಾದ 45 ದಿನಗಳ ಒಳಗೆ ವಾಪಸ್ ನೀಡಬೇಕು. ತಪ್ಪಿದಲ್ಲಿ ಪೂರ್ತಿ ಹಣ ಪಾವತಿಸುವವರೆಗೆ ವಾರ್ಷಿಕ ಶೇ. 10 ರಂತೆ ಬಡ್ಡಿ ವಿಧಿಸಿದೆ.

ಹಾಗೂ ದೂರುದಾರರಿಗೆ ಪರಿಹಾರವಾಗಿ ರೂ. 10,000 ಹಾಗೂ ದೂರಿನ ಖರ್ಚು ವೆಚ್ಚಕ್ಕಾಗಿ ರೂ. 5,000 ಗಳನ್ನು ಕೂಡ ಆದೇಶದ 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದ್ದಲ್ಲಿ ಪೂರ್ತಿ ಹಣ ಪಾವತಿಸುವವರೆಗೆ ವಾರ್ಷಿಕ ಶೇ. 10 ರಂತೆ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಆಯೋಗವು 23/10/2026 ರಂದು ತೀರ್ಪು ನೀಡಿದೆ.

Lack of Water on Train: Order Issued to Provide Appropriate Compensation to a Passenger from Shivamogga! | Shivamogga, October 27: The Shivamogga District Consumer Disputes Redressal Commission has imposed a penalty on the Railway Department for a deficiency in service, specifically the failure to provide water facilities on a train.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *