ಶಿವಮೊಗ್ಗ (shivamogga), ಅಕ್ಟೋಬರ್ 28 : ಮುಂಗಾರು ವೈಫಲ್ಯದಿಂದಾಗಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರವು ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೃಷಿಕರ ಹಿತಕಾಯುವ ನಿಟ್ಟಿನಲ್ಲಿ ಅವರ ಬದುಕಿಗೆ ಆಸರೆಯಾಗಿ ರೈತರು ಪಡೆದ ಬೆಳೆಸಾಲದ ಮರುಪಾವತಿಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್ ಅವರು ಹೇಳಿದರು.
ಅಕ್ಟೋಬರ್ 28 ರಂದು ಜಿಲ್ಲಾ ಪಂಚಾಯ್ತಿ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವ ಕುರಿತು ಏರ್ಪಡಿಸಲಾಗಿದ್ದ ವಿಶೇಷ ಜಿಲ್ಲಾ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಬ್ಯಾಂಕುಗಳ ವ್ಯವಸ್ಥಾಪಕರು ಸಾಲ ವಸೂಲಾತಿ ವಿಚಾರದಲ್ಲಿ ರೈತರ ಮೇಲೆ ಯಾವುದೇ ಒತ್ತಡ ಹೇರದಂತೆ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಸಾಲ ಮರುಪಾವತಿ ಅವಧಿ ವಿಸ್ತರಣೆ ಸೇರಿದಂತೆ ಸರ್ಕಾರದ ಸೌಲಭ್ಯಗಳು ರೈತರಿಗೆ ತಲುಪುವಂತೆ ಬ್ಯಾಂಕ್ಗಳು ಸಹಕರಿಸಬೇಕು. ಅಲ್ಲದೆ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯಕ್ಕೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಕೃಷಿ ಪರಿಕರಗಳನ್ನು ಖರೀದಿಸಲು ಅವರ ಅಗತ್ಯಗಳಿಗೆ ಯಾವುದೇ ನಿರ್ಬಂಧಗಳಿಲ್ಲದೆ ಹೊಸ ಸಾಲ ನೀಡುವಂತೆಯೂ ಅವರು ಸೂಚಿಸಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಶೇ.38ರಷ್ಟು ಮಳೆ ಕೊರತೆ ಇರುವುದನ್ನು ಗುರುತಿಸಲಾಗಿದೆ. ಜಿಲ್ಲೆಯ ಏಳು ತಾಲೂಕುಗಳ ಪೈಕಿ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ.
ಹೊಸನಗರ, ಸಾಗರ, ಶಿಕಾರಿಪುರ, ಸೊರಬ ಮತ್ತು ತೀರ್ಥಹಳ್ಳಿ ತಾಲೂಕುಗಳನ್ನು ಭಾಗಶಃ ಬರಪೀಡಿತ ತಾಲೂಕುಗಳೆಂದು ವರ್ಗೀಕರಿಸಿ ಸರ್ಕಾರ ಆದೇಶಿಸಿರುವುದಾಗಿ ತಿಳಿಸಿದರು.
ಸರ್ಕಾರದ ಮಾರ್ಪಡಿಸಿದ ಮಾರ್ಗಸೂಚಿಗಳ ಪ್ರಕಾರ, ಭಾಗಶಃ ಬರಪೀಡಿತ ತಾಲೂಕುಗಳಲ್ಲಿ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಗೆ ಹಾಗೂ ತೀವ್ರ ಬರಪೀಡಿತ ತಾಲೂಕುಗಳಲ್ಲಿ 60 ತಿಂಗಳಿಗೆ ವಿಸ್ತರಿಸಲಾಗಿದೆ. ಸಾಲ ಮರುಪಾವತಿ ಅವಧಿ ವಿಸ್ತರಣೆಯ ಸೌಲಭ್ಯವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸುವುದು ಬ್ಯಾಂಕ್ಗಳ ಜವಾಬ್ದಾರಿಯಾಗಿದೆ. ಪ್ರಸಕ್ತ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ತೊಂದರೆಯಾಗದಂತೆ ಬ್ಯಾಂಕ್ ಅಧಿಕಾರಿಗಳು ಮಾನವೀಯವಾಗಿ ನಡೆದುಕೊಳ್ಳಬೇಕು ಎಂದ ಅವರು, ರೈತರ ಸಾಲ ಮರುಪಾವತಿ ವಿಚಾರದಲ್ಲಿ ಬ್ಯಾಂಕ್ಗಳಿಂದ ಒತ್ತಡ ಅಥವಾ ಬಲವಂತದ ಕುರಿತು ದೂರುಗಳು ಬಂದರೆ ಸಂಬಂಧಪಟ್ಟ ಬ್ಯಾಂಕ್ ಅಥವಾ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಿಯಮಗಳ ಉಲ್ಲಂಘನೆಯಾದರೆ ಶಿಸ್ತು ಕ್ರಮದ ಜೊತೆಗೆ ಕಾನೂನು ಪರಿಣಾಮಗಳೂ ಎದುರಿಸಬೇಕಾಗಬಹುದು ಎಂದವರು ನುಡಿದರು.
ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯಕ್ಕೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಕೃಷಿ ಪರಿಕರಗಳನ್ನು ಖರೀದಿಸಲು ರೈತರಿಗೆ ಹಣದ ಅವಶ್ಯಕತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ರೈತರಿಗೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಾಲ ಸೌಲಭ್ಯ ಒದಗಿಸಬೇಕು. ಹೊಸ ಸಾಲ ನೀಡುವ ವಿಚಾರದಲ್ಲಿ ಅನಗತ್ಯ ನಿರ್ಬಂಧಗಳನ್ನು ವಿಧಿಸದೇ ರೈತಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಕೇಂದ್ರ ಹಣಕಾಸು ಸಚಿವಾಲಯದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಅಕ್ಟೋಬರ್ 28 ರಿಂದ ಡಿಸೆಂಬರ್ 31 ರವರೆಗೆ ಹಣಕಾಸು ಸೇರ್ಪಡೆ ಸ್ಯಾಚುರೇಶನ್ ಶಿಬಿರಗಳನ್ನು ಆಯೋಜಿಸಲಾಗಿದೆ. ಪ್ರತಿ ಗ್ರಾ.ಪಂ.ಗೆ ಒಂದು ಬ್ಯಾಂಕ್ ಶಾಖೆಯನ್ನು ನೋಡಲ್ ಆಗಿ ನೇಮಿಸಲಾಗಿದೆ.
ಪ್ರಧಾನ ಮಂತ್ರಿ ಜನ್ ಧನ್, ಜೀವನ್ ಜ್ಯೋತಿ, ಸುರಕ್ಷಾ ವಿಮಾ, ಅಟಲ್ ಪಿಂಚಣಿ ಸೇರಿದಂತೆ ಎಲ್ಲಾ ಯೋಜನೆಗಳ ವ್ಯಾಪ್ತಿಯನ್ನು ಶತಭಾಗದಷ್ಟು ಖಚಿತಪಡಿಸುವುದು ಅಭಿಯಾನದ ಉದ್ದೇಶವಾಗಿದೆ. ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕರು ಜಿಲ್ಲಾ ನೋಡಲ್ ಅಧಿಕಾರಿಯಾಗಿದ್ದು, ಬ್ಯಾಂಕುಗಳು PDO, SHG ಒಕ್ಕೂಟಗಳೊಂದಿಗೆ ಸಮನ್ವಯ ಸಾಧಿಸಿ ಶಿಬಿರಗಳನ್ನು ನಡೆಸಬೇಕು ಎಂದರು.
ಸಭೆಯಲ್ಲಿ ಸಂಜೀವ್ ಕುಮಾರ್, ಶರತ್ ಗೌಡ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಹನುಮಂತಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವಿಭಾಗೀಯ ವ್ಯವಸ್ಥಾಪಕರು, ಸಂಬಂಧಿತ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Shivamogga District Declared Drought-Affected: Repayment Period for Farmers’ Loans Extended by 3 to 5 Years | Shivamogga, October 28: Due to the failure of the monsoon, the government has declared all taluks in Shivamogga district as drought-affected. Rishi Anand, Chief Executive Officer of the Zilla Panchayat, stated that in order to protect the interests of farmers facing distress and to provide support for their livelihoods, the time period for the repayment of crop loans has been extended.

