shimoga railway | ಶಿವಮೊಗ್ಗ : ದಸರಾ, ದೀಪಾವಳಿ – ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ!

shimoga railway - train news

ಶಿವಮೊಗ್ಗ (shivamogga), ಅಕ್ಟೋಬರ್ 16 : ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ತಮ್ಮ ಕುಟುಂಬದೊಂದಿಗೆ ಹಬ್ಬ ಆಚರಿಸಲು ಊರುಗಳಿಗೆ ತೆರಳುವ ಮತ್ತು ಮರಳಿ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲನ್ನು ತಾಳಗುಪ್ಪದವರೆಗೆ ತಾತ್ಕಾಲಿಕವಾಗಿ ವಿಸ್ತರಿಸಲು ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.

ಹಬ್ಬಗಳ ಸಂದರ್ಭದಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ, ಪ್ರಯಾಣಿಕರಿಗೆ ಸುಗಮ ಹಾಗೂ ಅನುಕೂಲಕರ ರೈಲು ಸಂಪರ್ಕ ಕಲ್ಪಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಯಶವಂತಪುರ ಜಂಕ್ಷನ್ ಮತ್ತು ಶಿವಮೊಗ್ಗ ಟೌನ್ ನಡುವೆ ವಾರದಲ್ಲಿ ಮೂರು ದಿನ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ತಾಳಗುಪ್ಪದವರೆಗೆ ವಿಸ್ತರಿಸಿರುವುದು ಸಾಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.

ನೈಋತ್ಯ ರೈಲ್ವೆಯ ಪ್ರಧಾನ ಕಚೇರಿಯ ಆದೇಶದಂತೆ, ರೈಲು ಸಂಖ್ಯೆ 16581 (ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್) ಹಾಗೂ ರೈಲು ಸಂಖ್ಯೆ 16582 (ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್) ರೈಲುಗಳನ್ನು ನಿಗದಿತ ದಿನಗಳಲ್ಲಿ ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ.

ರೈಲು ಸಂಚಾರದ ಪ್ರಮುಖ ವಿವರಗಳು : ರೈಲು ಸಂಖ್ಯೆ 16581: ಯಶವಂತಪುರದಿಂದ ಹೊರಟು ಶಿವಮೊಗ್ಗ ಟೌನ್ ಬದಲಿಗೆ ತಾಳಗುಪ್ಪದವರೆಗೆ ಸಂಚರಿಸಲಿದೆ.

  • ರೈಲು ಸಂಖ್ಯೆ 16582: ತಾಳಗುಪ್ಪದಿಂದ ಹೊರಟು ಶಿವಮೊಗ್ಗ ಟೌನ್ ಮೂಲಕ ಯಶವಂತಪುರಕ್ಕೆ ಸಂಚರಿಸಲಿದೆ.
  • ಸಂಚಾರದ ದಿನಾಂಕಗಳು: ಅಕ್ಟೋಬರ್ 18, 20, 22, 25, 27 ಮತ್ತು 29 ಹಾಗೂ ನವೆಂಬರ್ 3, 5, 8, 10 ಮತ್ತು 12, 2026. ಒಟ್ಟು 11 ಟ್ರಿಪ್‌ಗಳಿಗೆ ಈ ವಿಸ್ತರಣೆ ಅನ್ವಯಿಸುತ್ತದೆ.
  • ತಾಳಗುಪ್ಪಕ್ಕೆ ಆಗಮನ: ರೈಲು ಸಂಖ್ಯೆ 16581 ಬೆಳಿಗ್ಗೆ 9.00 ಗಂಟೆಗೆ ತಾಳಗುಪ್ಪ ತಲುಪಲಿದೆ.
  • ತಾಳಗುಪ್ಪದಿಂದ ನಿರ್ಗಮನ: ರೈಲು ಸಂಖ್ಯೆ 16582 ರಾತ್ರಿ 10.00 ಗಂಟೆಗೆ ತಾಳಗುಪ್ಪದಿಂದ ಹೊರಡಲಿದೆ.
  • ಶಿವಮೊಗ್ಗದಿಂದ ಯಶವಂತಪುರದವರಗೆ ಹಾಗೂ ಯಶವಂತಪುರದಿಂದ ಶಿವಮೊಗ್ಗದ ವರೆಗೆ ಈ ಹಿಂದೆ ಸಂಚರಿಸುತ್ತಿದ್ದ ವೇಳಾ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಾಗರ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಈ ತಾತ್ಕಾಲಿಕ ವಿಸ್ತರಣೆಯಿಂದ ಶಿವಮೊಗ್ಗ, ಕೊನಗವಳ್ಳಿ, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಲ, ಆನಂದಪುರಂ, ಅಡ್ಡೇರಿ, ಸಾಗರ ಹಾಗೂ ತಾಳಗುಪ್ಪದಲ್ಲಿ ರೈಲುಗಳ ನಿಲುಗಡೆ ಇದ್ದು, ಈ ಮಾರ್ಗದ ಪ್ರಯಾಣಿಕರಿಗೆ ಹೆಚ್ಚುವರಿ ರೈಲು ಸಂಪರ್ಕದ ಅನುಕೂಲ ದೊರೆಯಲಿದೆ.

ವಿಶೇಷವಾಗಿ ಹಬ್ಬದ ಸಂದರ್ಭದಲ್ಲಿ ಕುಟುಂಬದೊಂದಿಗೆ ಪ್ರಯಾಣಿಸುವವರು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ದೂರದ ಊರುಗಳಿಗೆ ತೆರಳುವ ಸಾರ್ವಜನಿಕರಿಗೆ ಇದು ನೆರವಾಗಲಿದೆ.

ರೈಲು ಸೇವೆಗಳನ್ನು ಸಾರ್ವಜನಿಕರ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳುವ ಮೂಲಕ ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ ನೀಡುವುದು ಮುಖ್ಯವಾಗಿದೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸುಗಮ ಸಂಪರ್ಕ ಕಲ್ಪಿಸುವ ಈ ಕ್ರಮವು ರೈಲ್ವೆ ಸೇವೆಯ ಪ್ರಯೋಜನವನ್ನು ಇನ್ನಷ್ಟು ಜನರಿಗೆ ತಲುಪಿಸಲು ಸಹಕಾರಿಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.

Shivamogga: Significant Changes to Train Services for Dasara and Deepavali! | Shivamogga, October 16: Member of Parliament B.Y. Raghavendra has announced that the South Western Railway has issued an order to temporarily extend the Yesvantpur–Shivamogga Town Express train up to Talaguppa. This decision aims to assist the public who are traveling to their hometowns to celebrate the Dasara and Deepavali festivals with their families, as well as those returning from these celebrations.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *