ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅಕ್ಟೋಬರ್ 10: ನೆನೆಗುದಿಗೆ ಬಿದ್ದಿದ್ದ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಅಧಿಕಾರಾವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಕಳೆದ ಕೆಲ ತಿಂಗಳ ಹಿಂದೆ, ಗ್ರಾಪಂ ಸ್ಥಾನಗಳ ಮೀಸಲಾತಿ ಪ್ರಕಟಿಸಿತ್ತು. ಇದೀಗ ಜಿಪಂ ಹಾಗೂ ತಾಪಂ ಸ್ಥಾನಗಳ ಕ್ಷೇತ್ರವಾರು ಮೀಸಲಾತಿ ಪ್ರಕಟಿಸಿದೆ. ಚುನಾವಣಾ ದಿನಾಂಕಗಳು ಇನ್ನಷ್ಟೆ ಪ್ರಕಟವಾಗಬೇಕಾಗಿದೆ.
ಕ್ಷೇತ್ರವಾರು ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೆ, ಹಳ್ಳಿ ರಾಜಕಾರಣ ಕ್ರಮೇಣ ಕಾವೇರಲಾರಂಭಿಸಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಚುನಾವಣಾ ರಾಜಕಾರಣ ಕ್ರಮೇಣ ಗರಿಗೆದರಲಾರಂಭಿಸಿದೆ. ಸ್ಪರ್ಧಾಕಾಂಕ್ಷಿಗಳ ಚಟುವಟಿಕೆಗಳು ಬಿರುಸುಗೊಳ್ಳಲಾರಂಭಿಸಿವೆ.

ಗ್ರಾಪಂ ಚುನಾವಣೆ ರಾಜಕೀಯೇತರವಾಗಿದ್ದು, ಪಕ್ಷಗಳ ಚಿಹ್ನೆ ಆಧಾರದ ಮೇಲೆ ನಡೆಯುವುದಿಲ್ಲ. ಆದರೆ ಜಿಪಂ-ತಾಪಂ ಎಲೆಕ್ಷನ್ ಗಳು ಪಕ್ಷಗಳ ಚಿಹ್ನೆಗಳಿರಲಿವೆ. ಇದರಿಂದ ಪ್ರಮುಖ ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತವೆ. ವಿಧಾನಸಭೆ, ಲೋಕಸಭೆಗೆ ಕೊಟ್ಟಷ್ಟೆ ಮಹತ್ವವನ್ನು ಈ ಚುನಾವಣೆಗೆ ನೀಡುತ್ತವೆ.
ಟಿಕೆಟ್ ಪಾಲಿಟಿಕ್ಸ್ : ಪ್ರಮುಖ ರಾಜಕೀಯ ಪಕ್ಷಗಳಲ್ಲಿ, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಟಿಕೆಟ್ ಖಚಿತಪಡಿಸಿಕೊಳ್ಳಲು ಕೆಲ ಸ್ಪರ್ಧಾಕಾಂಕ್ಷಿಗಳು ಲಾಬಿ ಆರಂಭಿಸಿದ್ದಾರೆ. ಪಕ್ಷಗಳ ಪ್ರಮುಖ ನಾಯಕರ ಬಳಿಗೆ ಎಡತಾಕಲಾರಂಭಿಸಿದ್ದಾರೆ.
ಸಹಜವಾಗಿಯೇ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಟಿಕೆಟ್ ಡಿಮ್ಯಾಂಡ್ ಹೆಚ್ಚಿದೆ. ಮತ್ತೊಂದೆಡೆ, ಬಿಜೆಪಿ – ಜೆಡಿಎಸ್ ಮೈತ್ರಿ ರಾಜಕಾರಣ ಸದರಿ ಚುನಾವಣೆಗಳಲ್ಲಿ ಮುಂದುವರಿಯಲಿದೆಯಾ? ಇಲ್ಲವೆ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಒಟ್ಟಾರೆ ನಿಸ್ತೇಜಗೊಂಡಿದ್ದ ಹಳ್ಳಿ ರಾಜಕಾರಣ ಇದೀಗ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೆ ಮತ್ತೆ ರಂಗೇರಲಾರಂಭಿಸಿದೆ. ಚುನಾವಣಾ ದಿನಾಂಕಗಳತ್ತ ಸ್ಪರ್ಧಾಕಾಂಕ್ಷಿಗಳ ಚಿತ್ತ ನೆಟ್ಟಿದೆ.

ಜಿಪಂ – ತಾಪಂ ಚಿಹ್ನೆ ಆಧಾರಿತ : ಪ್ರತಿಷ್ಠೆಯ ಕಣ
*** ಸ್ಥಳೀಯ ಸ್ಥಂಸ್ಥೆಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ರಾಜಕೀಯೇತರವಾಗಿದೆ. ಪಕ್ಷಗಳ ಚಿಹ್ನೆ ಆಧಾರದ ಮೇಲೆ ನಡೆಯುವುದಿಲ್ಲ. ಆದರೆ ಜಿಲ್ಲಾ ಪಂಚಾಯ್ತಿ – ತಾಲೂಕು ಪಂಚಾಯ್ತಿ ಎಲೆಕ್ಷನ್ ಗಳಲ್ಲಿ ಪಕ್ಷಗಳ ಚಿಹ್ನೆಗಳಿರಲಿವೆ. ಇದರಿಂದ ಪ್ರಮುಖ ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತವೆ. ವಿಧಾನಸಭೆ, ಲೋಕಸಭೆಗೆ ಕೊಟ್ಟಷ್ಟೆ ಮಹತ್ವವನ್ನು ಈ ಚುನಾವಣೆಗೆ ನೀಡುತ್ತವೆ.
ಅಖಾಡಕ್ಕಿಳಿಯುವ ಸಿದ್ದತೆಯಲ್ಲಿ ಘಟಾನುಘಟಿಗಳು!
*** ಜಿಪಂ ಚುನಾವಣೆಯಲ್ಲಿ ಕೆಲ ಹಾಲಿ – ಮಾಜಿ ಶಾಸಕರ ಕುಟುಂಬ ಸದಸ್ಯರು ಸೇರಿದಂತೆ ಘಟಾನುಘಟಿ ರಾಜಕಾರಣಿಗಳು ಅಖಾಡಕ್ಕಿಳಿಯುವ ತಯಾರಿ ನಡೆಸುತ್ತಿರುವ ಮಾಹಿತಿಗಳು ಕೇಳಿಬರಲಾರಂಭಿಸಿವೆ. ಅದರಲ್ಲಿಯೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ, ಕೆಲ ಕ್ಷೇತ್ರಗಳಲ್ಲಿ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಮಾಹಿತಿಗಳು ಕೇಳಿಬರುತ್ತಿವೆ.


