ಇದು ಪ್ರಸಿದ್ಧ ಪತ್ರಕರ್ತ ಲೋಹಿಯಾವಾದಿ, ವಿನೋಬಾ ಅವರ ಸರ್ವೋದಯದ ಜೀವದಾನಿಸ ದಿವಂಗತ ಖಾದ್ರಿ ಶಾಮಣ್ಣ ಅವರು ಭಾವಪರವಶರಾಗಿ ಹೇಳುತ್ತಿದ್ದ ಮಾತು. ಕೇವಲ ಮಾತಲ್ಲ. ಕೂಗುತ್ತಿದ್ದ ಘೋಷಣೆ. ಪ್ರಾಚೀನ ಕಾಲದಿಂದಲೂ ಭಾರತದ ಜನತೆಯ ಆದರ್ಶವಾಗಿರುವ “ಸರ್ವೇಜನಾ ಸುಖಿನೋಭವಂತು’ ಚಕ್ರವರ್ತಿ ಹಾಗೂ ರಾಜ ಮಹಾರಾಜರ ಧರ್ಮ ಆಡಳಿತ, ಕಾರ್ಲ್ ಮಾಕ್ಸ್ ಸಮಾಜವಾದ, ಜಯಪ್ರಕಾಶ್ ನಾರಾಯಣ್ ಹಾಗೂ ಡಾ|| ರಾಮಮನೋಹರ ಲೋಹಿಯಾ ಅವರ ಸಮಾಜವಾದ, ಮಹಾತ್ಮಾ ಗಾಂಧಿ ಅವರ ರಾಮರಾಜ್ಯ ವಿನೋಬ ಬಾವೆ ಅವರ ಸರ್ವೋದಯ, ವಿಕಾಸಗೊಂಡ ಪ್ರಜಾಪ್ರಭುತ್ವ ಪದ್ಧತಿ, ಭಾರತದ ಬಂಧ ವಿಮೋಚನೆಗಾಗಿ ಗಾಂಧಿ ನಾಯಕತ್ವದಲ್ಲಿ ನಡೆದ ಅಹಿಂಸಾತ್ಮಕ ಚಳವಳಿ, ಸ್ವಾತಂತ್ರ್ಯ ಬಂದ ನಂತರ, ಸಮಾಜದ ನಿರ್ಮಾಣಕ್ಕಾಗಿ ಭಾರತದ ಜನತೆ ರೂಪಿಸಿಕೊಂಡಿರುವ ಸಂವಿಧಾನ ಇವೆಲ್ಲ ಹಾಗೂ ಇವೆಲ್ಲದರ ಆದರ್ಶ, ಸಂದೇಶ ಒಂದೇ. ಮಾರ್ಗ ಭಿನ್ನ ಅಷ್ಟೇ, ಸಮಾನ ಅವಕಾಶಗಳಿರುವ ಸಮಾನತೆ, ಸ್ವಾತಂತ್ರ್ಯ ಹಾಗೂ ಶೋಷಣೆ ರಹಿತ ಸಮಾಜದ ರಚನೆಯೇ ಈ ಎಲ್ಲಾ ವಿಚಾರಗಳ, ವಾದಗಳ, ಪ್ರತಿಪಾದನೆಗಳ ಹಾಗೂ ಸಿದ್ಧಾಂತಗಳ ಮೂಲ ಗುರಿ ಹಾಗೂ ಸಂದೇಶ.

ಇಂತಹ ವೈಚಾರಿಕ ಸಂಘರ್ಷಗಳ ಕಾಲದಲ್ಲಿ ಕಣ್ಣು ಬಿಟ್ಟ ಕೂಸು ಎಸ್. ಬಂಗಾರಪ್ಪ. ಅವರು ಬೆಳೆದರು. ಬೆಳೆಯುತ್ತಲೇ ಬಂದರು. ಬಡವರು, ದುರ್ಬಲರು, ಅವಕಾಶ ಹಾಗೂ ಆತ್ಮ ಗೌರವ ವಂಚಿತರು ನೂರಾರು ರೀತಿಗಳಲ್ಲಿ ಅಮಾನುಷ ಶೋಷಣೆಗೆ ಒಳಗಾದವರು ಇವರ ಪರವಾಗಿ ಹೋರಾಡಲು ಮನಸ್ಸು ಮಾಡಿದರು. ವಣತೊಟ್ಟರು. ಜೀವನದಲ್ಲಿ ಪರಿಸರದ ಪರಿಚಯವಾಗುತ್ತಿದ್ದಂತೆ ಸಮಾಜಮುಖಿಯಾದರು. ಮೇಲೆದ್ದು ಹೊರಟರು. ಸಮಾಜವಾದಿ ಸಮಾಜದ ಹಾಗೂ ಸರ್ವತ್ರ್ಯ ಕಲ್ಯಾಣ ಕ್ಷೇತ್ರದ ನಿರ್ಮಾಣ ಮಾಡಲು ಮುನ್ನೆಜ್ಜೆಗಳನ್ನಿಡುತ್ತ ತಮ್ಮ ಬಾಳಿನ ಮಹಾಪಯಣವನ್ನು ಆರಂಭಿಸಿದರು. ಈ ನಿತ್ಯೋತ್ಸಾಹಿ, ನಿರಂತರ ಉತ್ಸಾಹಿ ಅಂದಿನಿಂದ ನಿಂತಿಲ್ಲ. ನಿಲ್ಲುವುದೂ ಇಲ್ಲ.
1967ರಲ್ಲಿ ಕರ್ನಾಟಕದ ವಿಧಾನಸಭೆಯನ್ನು ಪ್ರವೇಶಿಸಿದ ಲೋಹಿಯಾ ಸಮಾಜವಾದಿ ಎಸ್. ಬಂಗಾರಪ್ಪ ಅವರು ಸಚಿವರಾಗಿ, ಮುಖ್ಯಮಂತ್ರಿಯಾಗಿ, ಲೋಕಸಭೆ ಸದಸ್ಯರಾಗಿ ಕಳೆದ ನಾಲ್ಕು ದಶಕಗಳ ಕಾಲಕ್ಕಿಂತ ಹೆಚ್ಚು ಕಾಲ ನಿರಂತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕ್ಷೇತ್ರ ಯಾವುದೇ ಆಗಲಿ, ಪಕ್ಷ ಯಾವುದೇ ಆಗಲಿ, ಸಂದರ್ಭ ಯಾವುದೇ ಆಗಲಿ, ಇವರ ಆದರ್ಶ ನಿಷ್ಠೆ ಕಡಿಮೆಯಾಗಿಲ್ಲ. ಬದಲಾಗಿಲ್ಲ. ಬಲಗೊಂಡಿದೆ.
ಈ ಸಮಾಜವಾದಿ, ಗುರಿಸಾಧನಾ ಮಾರ್ಗದಲ್ಲಿ ಹಟವಾದಿ” ವೈವಿಧ್ಯತೆಯಲ್ಲಿ ಐಕೃತೆ” ಇವರ ವ್ಯಕ್ತಿತ್ವದ ವೈಶಿಷ್ಟ್ಯ ಇದರ ಆಸಕ್ತಿ ಸಾಧನೆ ಬಹುಮುಖಿ ಷಟಲ್ ಕಾಕ್-ಬ್ಯಾಂಡ್ಮೆಂಟಿನ್ ಪ್ರಿಯ ನಡಿಗೆಯಷ್ಟು ಸೈಕಲ್ ಸವಾರಿಯಲ್ಲಿ ಆನಂದ, ಕುಸ್ತಿಪಟು, ಕಲೆ-ಕ್ರೀಡೆಗಳು ಒಲವು. ಪಂಪರಿಂದ ಕುವೆಂಪುವರೆಗೆ ಸಾಹಿತ್ಯ ಪರಿಚಯ. ಕನ್ನಡ ಭಾಷೆ ಬಗ್ಗೆ ಅಷ್ಟೇ ಪ್ರೇಮ-ಸಂಗೀತ ಹಾಗೂ ಜನಪದದ ರಾಗ ಕೇಳಿಬಂದರೆ ಎಲ್ಲವನ್ನು ಮರೆಯುತ್ತಾರೆ. ಮಗ್ನರಾಗುತ್ತಾರೆ. ಕುಣಿಯುತ್ತಾರೆ. ಒಮ್ಮೊಮ್ಮೆ ಕುಪ್ಪಳಿಸುತ್ತಾರೆ.
28-12-72ರಂದು ಕರ್ನಾಟಕದ ವಿಧಾನಸಭೆ, ರಾಜ್ಯದ ಹೆಸರು “ಕರ್ನಾಟಕ” ಎಂದಾಗಬೇಕು ಎಂಬ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದ ಶುಭ ಹಾಗೂ ಚಾರಿತ್ರಿಕ ಸಂದರ್ಭ. ಬಂಗಾರಪ್ಪ ಅವರು ಅರಳಿದ ಮಲ್ಲಿಗೆಯನ್ನು ಸಭೆಯಲ್ಲಿ ಸುತ್ತ ಎರಚಿ, ಸಮಗ್ರ ಕರ್ನಾಟಕಕ್ಕೆ “ಮೈಸೂರು ಮಲ್ಲಿಗೆ”ಯ ಕಂಪನ್ನು ಬೀರಿದರು. ಸಮಸ್ತ ಕನ್ನಡಿಗರೊಡನೆ ಸಂತೋಷವನ್ನು ಹಂಚಿಕೊಂಡರು. ಬಂಗಾರಪ್ಪ ಅವರು 15 ಸಾವಿರಕ್ಕಿಂತ ಹೆಚ್ಚು ಸಾಮೂಹಿಕ ವಿವಾಹಗಳು ನಡೆಯಲು ಕಾರಣರಾಗಿದ್ದಾರೆ. ಇವರು ಸಮಾಜ ಮುಖಿ ಎನ್ನುವುದಕ್ಕೆ ಅಪರೂಪ ನಿದರ್ಶನವೇ ಸಾಕು.
ಒಮ್ಮ ಇವರು ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಓರ್ವ ವ್ಯಕ್ತಿ ಬಗ್ಗೆ ಕಟುವಾದ ಟೀಕೆ ಮಾಡಿದರು. ಕೆಲ ಸಮಯದ ನಂತರ ನಾನು ಇವರನ್ನು ಲಾಬಿಯಲ್ಲಿ ಭೇಟಿ ಮಾಡಿದೆ. ವ್ಯಕ್ತಿಯೊಬ್ಬರ ಬಗ್ಗೆ ಬಂಗಾರಪ್ಪ ಅವರು ಮಾಡಿದ ಟೀಕೆ ನಿರಾಧಾರವಾದುದು ಎಂದು ನಾನು ಬಂಗಾರಪ್ಪ ಅವರಿಗೆ ಹೇಳಿದೆ. ನನಗೆ ಗೊತ್ತಿದ್ದ ಸತ್ಯವನ್ನು ಅವರ ಗಮನಕ್ಕೆ ತಂದೆ. ಸರಿ ಎಂದು ಹೇಳಿ ಸುಮ್ಮನಾದರು. ಕೆಲ ನಿಮಿಷಗಳ ನಂತರ, ನಾನು ಪತ್ರಿಕಾ ಗ್ಯಾಲರಿಗೆ ಹಿಂದಿರುಗಿದೆ. ಬಂಗಾರಪ್ಪ ಅವರು ಅಷ್ಟು ಹೊತ್ತಿಗೆ ವಿಧಾನಸಭೆ ಪ್ರವೇಶಿಸಿ ತಮ್ಮ ಸ್ಥಾನದಲ್ಲಿ ಕುಳಿತಿದ್ದರು. ಬಂಗಾರಪ್ಪ ವೈಯಕ್ತಿಕ ವಿವರಣೆಯೊಂದನ್ನು ಸಭೆಯಲ್ಲಿ ನೀಡಲು ಸಭಾಧ್ಯಕ್ಷರ ಅನುಮತಿ ಕೋರಿದರು. ಬಂಗಾರಪ್ಪ ವೈಯಕ್ತಿಕ ವಿವರಣೆ ನೀಡಿ ತಾವು ಸಭೆಯ ಮಾನ್ಯ ಸದಸ್ಯರೊಬ್ಬರನ್ನು ಕುರಿತು ಮಾಡಿದ ಟೀಕೆ ನಿರಾಧಾರವಾದದ್ದು ಅದನ್ನು ವಾಪಸ್ಸು ಪಡೆದು ಕ್ಷಮೆ ಯಾಚಿಸುವುದಾಗಿ ತಿಳಿಸಿದರು. ಪ್ರೆಸ್ ಗ್ಯಾಲರಿಯಲ್ಲಿ ಕುಳಿತಿದ್ದ ನಾನು ಚಕಿತನಾದೆ.
ಮಾನ್ಯ ಸದಸ್ಯರೊಬ್ಬರನ್ನು ಕುರಿತ ತಾವು ಮಾಡಿದ್ದ ಟೀಕೆ ನಿರಾಧಾರವಾದದ್ದು ಎಂದು ತಿಳಿದು ಬಂದಾಗ ಅದನ್ನು ವಾಪಸ್ಸು ಪಡೆದು ಕ್ಷಮೆಯಾಚಿಸುವಂತಹ ಸೌಜನ್ಯದ ವರ್ತನೆ!. ಅದೂ ಒಬ್ಬ ಶಾಸಕರ ಇಂತಹ ಸಂಸದೀಯ ನಡವಳಿಕೆ ಉನ್ನತ ಮಟ್ಟದ ವರ್ತನೆ ಸರ್ವಕಾಲಕ್ಕೂ ಸ್ಫೂರ್ತಿದಾಯಕ. ಈ ರೀತಿಯ ಸಂಸದೀಯ ನಡವಳಿಕೆ ಪ್ರಶಂಸನೀಯ ಹಾಗೂ ಅನುಕರಣೀಯ. ಇವರು ಸಂಸದೀಯ ನಡವಳಿಕೆಯಲ್ಲೂ ಒಂದು ಮಾದರಿಯೇ.
1991 ರಲ್ಲಿ ತುಮಕೂರಿನಲ್ಲಿ ಭಾರತ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ವಾರ್ಷಿಕ ಅಧಿವೇಶನ, ಶ್ರೀ ಸಿದ್ದಗಂಗಾ ಮಠಾಧೀಶರ ದಾಸೋಹದ ಆಶೀರ್ವಾದದಡಿಯಲ್ಲಿ. ಅಧಿವೇಶನಕ್ಕೆ ಎರಡು ದಿನ ಮುನ್ನ ಒಕ್ಕೂಟದ ಅಧ್ಯಕ್ಷ ಕೆ. ವಿಕ್ರಮರಾವ್, ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಆಗಿನ ಅಧ್ಯಕ್ಷ ಎಸ್. ಅರ್ಜುನ ದೇವ ಹಾಗೂ ನಾನು ಆಗ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರನ್ನು ಭೇಟಿ ಮಾಡಿದೆವು. ಸಮ್ಮೇಳನ ನಡೆಸಲು ಧನ ಸಹಾಯ ತೋರಿದವು. ಒಂದು ಮೊತ್ತವನ್ನು ಸಹಾಯ ಧನವಾಗಿ ನೀಡುವುದಾಗಿ ಬಂಗಾರಪ್ಪ ಅವರು ಹೇಳಿದರು. “ಸಾಲದು ಸಾರ್. ಇನ್ನೊಂದು ಲಕ್ಷ ಕೊಡಿ” ಎಂದು ನಾನು ಕೋರಿದೆ.
ತತ್ಕ್ಷಣ” ಆಗಲಿ’ ಎಂದು ಮಂಜೂರು ಮಾಡಿದರು. ರಾಷ್ಟ್ರದ ಎಲ್ಲಾ ರಾಜ್ಯಗಳಿಂದ ಬರುವ ಪತ್ರಕರ್ತರು ಭಾಗವಹಿಸುವ ಸಮ್ಮೇಳನ ಎಂದು ಬಂಗಾರಪ್ಪ ಅವರಿಗೆ ಗೊತ್ತಿತ್ತು. ಮೇಲಾಗಿ ಪತ್ರಕರ್ತರು ಪತ್ರಿಕಾ ಸಂಘದ ಚಳವಳಿ ನಡೆಸುತ್ತಿದ್ದಾರೆಂಬುದೂ ತಿಳಿದಿತ್ತು. ಜೊತೆಗೆ ಸಹಾಯ ಧನ ನ ದುರುಪಯೋಗವಾಗಿದೆಂಬ ವಿಶ್ವಾಸವೂ ಅವರಲ್ಲಿತ್ತು. ರಾಜ್ಯದ ಪತ್ರಕರ್ತರ ಪರವಾಗಿ ನಾವು ಕೃತಜ್ಞತೆ ಅರ್ಪಿಸಿದೆವು. ಸರ್ವರ ಸುಖ-ಸ್ವಾತಂತ್ರ್ಯ ಬಯಸುವ ಸಿದ್ಧಾಂತದ ಬಗ್ಗೆ ಇವರ ಬದ್ಧತೆ ಕಾಲ ಉರುಳುತ್ತ ಬಂದಿದ್ದರೂ ಕಡಿಮೆಯಾಗಿಲ್ಲ. ಅಲುಗಾಡಿಯೂ ಇಲ್ಲ. ಮಿಗಿಲಾಗಿ ಬದ್ಧತೆ, ಇನ್ನಷ್ಟು ಭದ್ರವಾಗುತ್ತಿದೆ. ಬಂಗಾರಪ್ಪ, ಜನಪರ ಬದ್ಧತೆಯಲ್ಲಿ ಬಂಗಾರವೇ.
ಲೇಖಕರು : ಎಸ್.ವಿ. ಜಯಶೀಲರಾವ್, ಹಿರಿಯ ಪತ್ರಕರ್ತರು. (ಕೃಪೆ: ಶ್ರೀ ಎಸ್. ಬಂಗಾರಪ್ಪ ಅಭಿನಂದನಾ ಗ್ರಂಥ)


