shimoga dasara news | ಶಿವಮೊಗ್ಗ ಜಂಬೂ ಸವಾರಿ ಪ್ರಕರಣ : ದೇವರ ವಿಗ್ರಹ, ಆಭರಣಗಳು ಸುರಕ್ಷಿತ – ವಾಹನ ಮಾಲೀಕರಿಗೆ ಸಿಗಲಿದೆ ಪರಿಹಾರ!

Shivamogga 'Jambu Savari' Incident: Deity Idol and Ornaments Safe – Vehicle Owner to Receive Compensation! | Shivamogga, October 23: It has been reported that the silver idol of Goddess Chamundeshwari—housed within the *ambari* (howdah)—remained undamaged when the elephant 'Somanna', which was carrying the *ambari* during the Vijayadashami 'Jambu Savari' procession in Shivamogga city, ran off in a panic.
ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivanogga), ಅಕ್ಟೋಬರ್ 23: ಶಿವಮೊಗ್ಗ ನಗರದಲ್ಲಿ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆ ವೇಳೆ, ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆ ದಿಕ್ಕಾಪಾಲಾಗಿ ಓಡಿ ಹೋದ ಸಂದರ್ಭದಲ್ಲಿ, ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ದೇವರ ಬೆಳ್ಳಿಯ ವಿಗ್ರಹಕ್ಕೆ ಯಾವುದೇ ಧಕ್ಕೆಯಾಗಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.

ಚಾಮುಂಡೇಶ್ವರಿ ದೇವರ ವಿಗ್ರಹ ಹಾಗೂ ಬೆಳ್ಳಿಯ ಅಂಬಾರಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ದೇವರ ಮೈಮೇಲಿದ್ದ ಆಭರಣಗಳು ಕಣ್ಮರೆಯಾಗಿವೆ ಎಂಬಿತ್ಯಾದಿ ಅಂತೆಕಂತೆಗಳು ಹಬ್ಬಿದ್ದವು. ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಅದರಲ್ಲಿಯೂ ದೇವರ ವಿಗ್ರಹಕ್ಕೆ ಹಾನಿಯಾಗಿದೆ ಎಂಬ ಸಂಗತಿಯೂ ನಾಗರಿಕರಲ್ಲಿ ಸಾಕಷ್ಟು ಬೇಸರ ಉಂಟು ಮಾಡಿತ್ತು.

ಹಾಗೆಯೇ ವಿಗ್ರಹಕ್ಕೆ ಹಾನಿಯಾಗಿರುವುದು ಅಶುಭದ ಸಂಕೇತ ಎಂದೆಲ್ಲ ಕೆಲ ನಾಗರಿಕರು ಮಾತನಾಡಿಕೊಳ್ಳುತ್ತಿದ್ದರು. ಆದರೆ ಮಹಾನಗರ ಪಾಲಿಕೆ ಆಡಳಿತದ ಉನ್ನತ ಮೂಲಗಳು ನೀಡುವ ಮಾಹಿತಿ ಅನುಸಾರ, ಚಾಮುಂಡೇಶ್ವರಿ ವಿಗ್ರಹಕ್ಕೆ ಯಾವುದೇ ಹಾನಿಯಾಗಿಲ್ಲ. ವಿಗ್ರಹ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸುತ್ತವೆ.

ಹಾಗೆಯೇ ಅಂಬಾರಿಗೂ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿಲ್ಲ. ಸಣ್ಣಪುಟ್ಟ ಧಕ್ಕೆಯಾಗಿದೆ. ಅದೂ ಕೂಡ ಸುರಕ್ಷಿತವಾಗಿದೆ. ಉಳಿದಂತೆ ದೇವರ ಮೈಮೇಲಿದ್ದ ಲಕ್ಷಾಂತರ ರೂ. ಮೌಲ್ಯದ ಎಲ್ಲ ಆಭರಣಗಳು ಸಿಕ್ಕಿವೆ. ಈಗಾಗಲೇ ಈ ಆಭರಣಗಳನ್ನು, ನಿಯಮಾನುಸಾರ ತೂಕ ಮಾಡಿಸಿ ಬ್ಯಾಂಕ್ ನ ಲಾಕರ್ ನಲ್ಲಿಡಲಾಗಿದೆ ಎಂದು ಪಾಲಿಕೆಯ ಮೂಲಗಳು ತಿಳಿಸುತ್ತವೆ.

‘ಚಾಮುಂಡೇಶ್ವರಿ ದೇವರ ವಿಗ್ರಹದ ಒಳಭಾಗವನ್ನು ಮರದ ಕೋಲುಗಳಿಂದ ಮಾಡಲಾಗಿದೆ. ಕೋಲುಗಳ ಮೇಲ್ಭಾಗಕ್ಕೆ ಬೆಳ್ಳಿಯ ಪ್ಲೇಟ್ ಗಳನ್ನು ಅಳವಡಿಸಲಾಗಿದೆ. ಜೊತೆಗೆ ಇಂಟರ್ ಲಾಕಿಂಗ್ ಹಾಗೂ ಸ್ಕ್ರೂ ವ್ಯವಸ್ಥೆ ಹೊಂದಿರುವ ವಿಗ್ರಹವಾಗಿದೆ. ಇದರಿಂದ ವಿಗ್ರಹಕ್ಕೆ ಯಾವುದೇ ಧಕ್ಕೆಯಾಗಿಲ್ಲ. ವಿಗ್ರಹದ ಕೈ ಭಾಗ ಕಳಚಿದ್ದು, ಅದನ್ನು ಮತ್ತೆ ಅಳವಡಿಸಲಾಗಿದೆ.

ಘಟನೆಯ ಪ್ರತಿಯೊಂದು ಹಂತದ ಸಿಸಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಲಾಗಿದೆ. ಹಾಗೆಯೇ ವಿಗ್ರಹ, ಅಂಬಾರಿ, ಚಿನ್ನಾಭರಣಗಳ ವಿಡಿಯೋ ಚಿತ್ರೀಕರಣ ಕೂಡ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಅನುಮತಿ ನೀಡಿದರೆ, ವಸ್ತುಸ್ಥಿತಿಯನ್ನು ನಾಗರಿಕರ ಗಮನಕ್ಕೆ ತರುವ ಕಾರ್ಯ ಮಾಡಲಾಗುವುದು’ ಎಂದು ಹೆಸರೇಳಲಿಚ್ಚಿಸದ ಪಾಲಿಕೆಯ ಹಿರಿಯ ಅಧಿಕಾರಿಯೋರ್ವರು ಮಾಹಿತಿ ನೀಡುತ್ತಾರೆ.

ಪರಿಹಾರ :ದಸರಾ ಜಂಬೂ ಸವಾರಿಯಲ್ಲಿ ಭಾಗಿಯಾಗಿದ್ದ ಮೂರು ಆನೆಗಳಿಗೂ ಇನ್ಸೂರೆನ್ಸ್ (ವಿಮೆ) ಮಾಡಿಸಲಾಗಿತ್ತು. ಆನೆ ದಾಳಿಯಿಂದ ಹಾನಿಗೀಡಾದ ಕಾರು, ಬೈಕ್ ಮಾಲೀಕರಿಗೆ ವಿಮಾ ಕಂಪೆನಿಯ ಮೂಲಕ ಸೂಕ್ತ ಪರಿಹಾರ ನೀಡಲಾಗುವುದು. ಹಾಗೆಯೇ ಹಾನಿ ದಾಳಿಯಿಂದ ಹಾನಿಗೀಡಾದ ಮನೆಯೊಂದರ ಮೇಲ್ಛಾವಣಿ ಕಾಮಗಾರಿಯನ್ನು ಕೂಡ ಪಾಲಿಕೆಯಿಂದಲೇ ನಡೆಸಿಕೊಡಲಾಗುವುದು ಎಂದು ಸದರಿ ಅಧಿಕಾರಿ ತಿಳಿಸುತ್ತಾರೆ.

ಒಟ್ಟಾರೆ ಸೋಮಣ್ಣ ಆನೆ ಮೇಲಿದ್ದ ಅಂಬಾರಿ ಕೆಳಕ್ಕೆ ವಾಲಿದ್ದರಿಂದ ಚಾಮುಂಡೇಶ್ವರಿ ವಿಗ್ರಹಕ್ಕೆ ವಿಘ್ನವಾಗಿದೆ ಎಂಬ ಗೊಂದಲ ನಾಗರಿಕರಲ್ಲಿತ್ತು. ಆದರೆ ವಿಘ್ನವಾಗಿಲ್ಲವೆಂದು ಪಾಲಿಕೆ ಮೂಲಗಳು ಹೇಳುತ್ತಿವೆ. ಈ ಕುರಿತಂತೆ ಪಾಲಿಕೆ ಆಡಳಿತ ಅದಿಕೃತ ಮಾಹಿತಿ ಪ್ರಕಟಿಸಿ, ನಾಗರಿಕರಲ್ಲಿರುವ ಗೊಂದಲ ಪರಿಹರಿಸುವ ಕಾರ್ಯ ಮಾಡಬೇಕಾಗಿದೆ.

Shivamogga ‘Jambu Savari’ Incident: Deity Idol and Ornaments Safe – Vehicle Owner to Receive Compensation! | Shivamogga, October 23: It has been reported that the silver idol of Goddess Chamundeshwari—housed within the *ambari* (howdah)—remained undamaged when the elephant ‘Somanna’, which was carrying the *ambari* during the Vijayadashami ‘Jambu Savari’ procession in Shivamogga city, ran off in a panic.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *