shimoga news | ಶಿವಮೊಗ್ಗದಲ್ಲಿ ನಿರ್ಮಾಣವಾಗಲಿದೆ ಅತ್ಯಾಧುನಿಕ ಫಿಲ್ಮ್ ಸಿಟಿ!

shimoga film city

ಶಿವಮೊಗ್ಗ (shivamogga), ನವೆಂಬರ್‌ 24 : ಮಲೆನಾಡು, ಬಯಲಸೀಮೆ ಮತ್ತು ಕರಾವಳಿಯ ಜಿಲ್ಲೆಗಳ ವಿಶೇಷತೆಯೊಂದಿಗೆ ಶಿವಮೊಗ್ಗ ಜಿಲ್ಲೆಯನ್ನು ಕೇಂದ್ರಸ್ಥಾನವನ್ನಾಗಿಟ್ಟುಕೊಂಡು ಸ್ಥಾಪಿಸಲು ಉದ್ದೇಶಿಸಿರುವ ಫಿಲ್ಮ್ ಸಿಟಿಯನ್ನು ಕೇವಲ ಸಿನಿಮಾ ಚಿತ್ರೀಕರಣಕ್ಕೆ ಸೀಮಿತಗೊಳಿಸದೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಹೂಡಿಕೆ, ಸ್ಥಳೀಯ ಆರ್ಥಿಕತೆ ಮತ್ತು ಸಾಂಸ್ಕೃತಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಾಪಿಸಬೇಕಾದ ಅಗತ್ಯವಿದ್ದು, ಅದರ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಕಡಿಮೆ ಅವಧಿಯಲ್ಲಿ ಗುರುತಿಸಿ, ಹಸ್ತಾಂತರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

ಕಂಠೀರವ ಸ್ಟುಡಿಯೋಸ್‌ನ ಅಧ್ಯಕ್ಷ ಮೆಹಬೂಬ್‌ ಪಾಷ ಅವರು ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರೊಂದಿಗೆ ಪ್ರತ್ಯೇಕ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ಭೇಟಿಯ ಸಂದರ್ಭದಲ್ಲಿ ಮಾನ್ಯ ಸಚಿವರು ಪಿಲ್ಮ್‌ಸಿಟಿ ನಿರ್ಮಾಣ ಕಾರ್ಯಕ್ಕೆ ಸಹಕರಿಸುವುದಾಗಿ ತಿಳಿಸಿದ್ದಲ್ಲದೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಿಗಮದ ಅಧ್ಯಕ್ಷರು ತಿಳಿಸಿದ್ದಾರೆ.

ಪಿಲ್ಮ್‌ಸಿಟಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ ಎರಡು ಹಂತದ ಸಮಾಲೋಚನೆ ನಡೆಸಲಾಗಿದೆ ಎಂದ ಅವರು, ನಟರು, ತಂತ್ರಜ್ಞರು, ಕ್ಯಾಮೆರಾಮನ್‌ಗಳು, ಸಂಕಲನಕಾರರು, ಕಲಾವಿದರು, ಕಾರ್ಮಿಕರು ಸೇರಿದಂತೆ ಸಾವಿರಾರು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶ ದೊರೆಯಲಿದೆ ಮಾತ್ರವಲ್ಲ ಹೋಟೆಲ್, ವಸತಿ, ಸಾರಿಗೆ, ಆಹಾರ, ನಿರ್ಮಾಣ, ವ್ಯಾಪಾರ ಮತ್ತು ಸೇವಾ ಕ್ಷೇತ್ರಗಳಿಗೆ ಉತ್ತೇಜನ ದೊರೆಯಲಿದೆ ಎಂದರು.

ಫಿಲ್ಮ್ ಸಿಟಿ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡ ನಂತರ ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ರೂಪುಗೊಳ್ಳಲಿದೆ. ಇದರಿಂದಾಗಿ ಸಹಜವಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚುವುದಲ್ಲದೆ ಸ್ಥಳೀಯ ವ್ಯಾಪಾರಕ್ಕೂ ಅನುಕೂಲವಾಗಲಿದೆ ಎಂಬ ಆಶಯ ಹೊಂದಲಾಗಿದೆ. ಕನ್ನಡ ಸಿನಿಮಾಗಳ ಚಿತ್ರೀಕರಣ, ಸೆಟ್ ನಿರ್ಮಾಣ, ಪೋಸ್ಟ್ ಪ್ರೊಡಕ್ಷನ್ ಮತ್ತು ತಾಂತ್ರಿಕ ತರಬೇತಿಗೆ ಒಂದೇ ಸೂರಿನಡಿ ಸೌಲಭ್ಯ ಕಲ್ಪಿಸಲೂ ಉದ್ದೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇತರ ಭಾಷೆಗಳ ಚಿತ್ರ ನಿರ್ಮಾಪಕರನ್ನು ಆಕರ್ಷಿಸಬಹುದಾಗಿದೆ.  ಅಭಿನಯ, ನಿರ್ದೇಶನ, ಛಾಯಾಗ್ರಹಣ, ಅನಿಮೇಷನ್, ಗ್ರಾಫಿಕ್ಸ್, ಧ್ವನಿ ಸಂಯೋಜನೆ ಮತ್ತು ಚಲನಚಿತ್ರ ತಂತ್ರಜ್ಞಾನದಲ್ಲಿ ಯುವಜನರಿಗೆ ತರಬೇತಿ ನೀಡಲು ಈ ಸ್ಟುಡಿಯೋ ಬಳಸಬಹುದಾಗಿದೆ. ಕಲಾ ವಿನ್ಯಾಸ, ವಸ್ತ್ರ ವಿನ್ಯಾಸ, ಮೇಕಪ್, ಸೆಟ್ ನಿರ್ಮಾಣ, ವಾಹನ ಬಾಡಿಗೆ ಮತ್ತು ಇತರ ಪೂರಕ ಉದ್ಯಮಗಳು ಬೆಳೆದು ಸಣ್ಣ ಉದ್ಯಮಗಳಿಗೆ ಉತ್ತೇಜನ ದೊರೆಯಲಿದೆ ಎಂದರು.

ವಿಶೇಷವಾಗಿ ಜೋಗ ಜಲಪಾತ, ಆಗುಂಬೆ, ಕೊಡಚಾದ್ರಿ, ಶರಾವತಿ ಕಣಿವೆ, ತುಂಗಾ ನದಿ ತೀರ, ಪಶ್ಚಿಮ ಘಟ್ಟಗಳ ಹಸಿರು ಪರಿಸರ ಹೀಗೆ ವೈವಿಧ್ಯಮಯ ಹಿನ್ನೆಲೆಗಳು ಒಂದೇ ಜಿಲ್ಲೆಯಲ್ಲಿ ಚಿತ್ರೀಕರಣಕ್ಕೆ ಪೂರಕ ವಾತಾವರಣ ನಿರ್ಮಿಸಿವೆ. ಕೆಳದಿ, ಇಕ್ಕೇರಿ, ಬಳ್ಳಿಗಾವಿ, ತಾಳಗುಂದ ಮೊದಲಾದ ಐತಿಹಾಸಿಕ ಸ್ಥಳಗಳು ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಕಥಾವಸ್ತುಗಳ ಚಿತ್ರೀಕರಣಕ್ಕೆ ಸೂಕ್ತವಾದ ಪಾರಂಪರಿಕ ಹಿನ್ನೆಲೆ ಒದಗಿಸಿವೆ. ಮಲೆನಾಡಿನ ಮಳೆ, ಮಂಜು, ದಟ್ಟ ಅರಣ್ಯ, ನದಿ ಹಾಗೂ ಬಯಲುಸೀಮೆಯ ಕೃಷಿಭೂಮಿ, ಗ್ರಾಮೀಣ ಪರಿಸರ ಎರಡೂ ಬಗೆಯ ಚಿತ್ರೀಕರಣಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಿದೆ ಜೊತೆಗೆ ಇಲ್ಲಿನ ವಿಮಾನ ನಿಲ್ದಾಣ, ರೈಲು ಮತ್ತು ರಸ್ತೆ ಸಂಪರ್ಕಗಳು ಚಿತ್ರರಂಗದ ಕಲಾವಿದರು, ನಿರ್ಮಾಪಕರು ಹಾಗೂ ತಂತ್ರಜ್ಞರ ಸಂಚಾರಕ್ಕೆ ಸಹಕಾರಿಯಾಗಬಹುದಾದ ನಿರೀಕ್ಷೆ ಇದೆ. ಕುವೆಂಪು, ರಾಷ್ಟ್ರಕವಿ ಪರಂಪರೆ, ಮಲೆನಾಡಿನ ಜನಪದ ಕಲೆ, ಯಕ್ಷಗಾನ, ಡೊಳ್ಳು ಕುಣಿತ ಹಾಗೂ ಸ್ಥಳೀಯ ಸಂಸ್ಕೃತಿ ಚಲನಚಿತ್ರಗಳಿಗೆ ವಿಶಿಷ್ಟ ಆಯಾಮ ನೀಡಬಲ್ಲವುಗಳಾಗಿವೆ ಎಂದವರು ತಿಳಿಸಿದ್ದಾರೆ.

ಉದ್ಧೇಶಿತ ಫಿಲ್ಮ್‌ಸಿಟಿಯಲ್ಲಿ ಅತ್ಯಾಧುನಿಕ ಒಳಾಂಗಣ ಚಿತ್ರೀಕರಣ ಸ್ಟುಡಿಯೋಗಳು, ಗ್ರಾಮ, ಅರಮನೆ, ಪೊಲೀಸ್ ಠಾಣೆ, ನ್ಯಾಯಾಲಯ, ಆಸ್ಪತ್ರೆ, ರೈಲು ನಿಲ್ದಾಣ ಮುಂತಾದ ಶಾಶ್ವತ ಚಿತ್ರೀಕರಣ ಸೆಟ್‌ಗಳು, ಚಲನಚಿತ್ರ ಸಂಕಲನ, ಧ್ವನಿಮುದ್ರಣ ಮತ್ತು ಡಬ್ಬಿಂಗ್ ಕೇಂದ್ರ, ಅನಿಮೇಷನ್, VFX ಮತ್ತು ಡಿಜಿಟಲ್ ತಂತ್ರಜ್ಞಾನ ಕೇಂದ್ರ, ಚಲನಚಿತ್ರ ತರಬೇತಿ ಸಂಸ್ಥೆ, ಕಲಾವಿದರು ಮತ್ತು ತಂತ್ರಜ್ಞರಿಗೆ ವಸತಿ ವ್ಯವಸ್ಥೆ, ಹೊರಾಂಗಣ ಚಿತ್ರೀಕರಣಕ್ಕೆ ವಿಶೇಷ ವಲಯ ಮತ್ತಿತರ ಸೌಲಭ್ಯಗಳನ್ನು ಹಂತಹಂತವಾಗಿ ಒದಗಿಸಲಾಗುವುದು ಎಂದವರು ತಿಳಿಸಿದ್ದಾರೆ.

ಸರ್ಕಾರವು ಇತ್ತೀಚಿಗೆ ಮೈಸೂರು ಜಿಲ್ಲೆಯ ಇಮ್ಮಾವು ಪ್ರದೇಶದಲ್ಲಿ 160 ಎಕರೆ 8 ಗುಂಟೆ ಜಮೀನಿನಲ್ಲಿ ₹729.43 ಕೋಟಿ ವೆಚ್ಚದ ಅಂತಾರಾಷ್ಟ್ರೀಯ ಫಿಲ್ಮ್ ಸಿಟಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಆದ್ದರಿಂದ ಶಿವಮೊಗ್ಗದಲ್ಲಿ ಪ್ರತ್ಯೇಕವಾದ ಮಲೆನಾಡು ಆಧಾರಿತ ಕಿರು ಫಿಲ್ಮ್ ಸಿಟಿ ಅಥವಾ ಪ್ರಾದೇಶಿಕ ಚಲನಚಿತ್ರ ನಿರ್ಮಾಣ ಕೇಂದ್ರ ಸ್ಥಾಪಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದ್ದು, ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದರು.

ಮೈಸೂರು ರಾಜ್ಯದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದ್ದರೆ, ಶಿವಮೊಗ್ಗ ಮಲೆನಾಡಿನ ನೈಸರ್ಗಿಕ ಸೌಂದರ್ಯ, ಐತಿಹಾಸಿಕ ವೈಭವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿದೆ. ಪಶ್ಚಿಮ ಘಟ್ಟಗಳ ವಿಶಿಷ್ಟ ಪರಿಸರ, ಜಲಪಾತಗಳು, ನದಿಗಳು, ಐತಿಹಾಸಿಕ ತಾಣಗಳು ಹಾಗೂ ವೈವಿಧ್ಯಮಯ ಭೌಗೋಳಿಕ ಪರಿಸರವನ್ನು ಹೊಂದಿರುವ ಶಿವಮೊಗ್ಗ ಚಲನಚಿತ್ರ ನಿರ್ಮಾಣಕ್ಕೆ ವಿಶಿಷ್ಟ ತಾಣವಾಗಿದೆ. ರಾಜ್ಯದ ಚಲನಚಿತ್ರೋದ್ಯಮದ ವಿಕೇಂದ್ರೀಕರಣ, ಮಲೆನಾಡಿನ ಯುವ ಪ್ರತಿಭೆಗಳಿಗೆ ಅವಕಾಶ, ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಉತ್ತೇಜಿಸುವ ದೂರದೃಷ್ಟಿಯಿಂದ ಶಿವಮೊಗ್ಗದಲ್ಲಿ ಸುಸಜ್ಜಿತ ಪ್ರಾದೇಶಿಕ ಫಿಲ್ಮ್ ಸಿಟಿ ಸ್ಥಾಪಿಸುವುದು ಉತ್ತಮ ಕಾರ್ಯಗಳಲ್ಲೊಂದು ಎಂದು ಭಾವಿಸಿರುವುದಾಗಿ ಅವರು ತಿಳಿಸಿರು.

State-of-the-art Film City to be established in Shivamogga! | Shivamogga, November 24: S. Madhu Bangarappa, the State Minister for School Education and Literacy and the Minister in-charge of the district, stated that a Film City is proposed to be established in Shivamogga, incorporating the unique characteristics of the Malenadu, Bayaluseeme, and coastal regions. He emphasized that this facility should not be limited merely to film shooting; rather, it must be developed with a broader vision encompassing tourism, job creation, investment, the local economy, and cultural growth. He further added that the Deputy Commissioner would be instructed to identify and hand over the necessary land for the project within a short timeframe.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *