
shimoga | ರಾಜ್ಯದಲ್ಲಿ ಇ-ಖಾತಾ ವಿಳಂಬಕ್ಕೆ CM ಗರಂ : ಶಿವಮೊಗ್ಗ ಪಾಲಿಕೆಯಲ್ಲಿ ಪರಿಹಾರವಾಗಲಿದೆಯಾ ಗೊಂದಲ?
ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ದಿವ್ಯ ಮೌನಕ್ಕೆ ನಾಗರೀಕರ ಆಕ್ರೋಶ..!
-: ವರದಿ : ಬಿ. ರೇಣುಕೇಶ್ :-
ಶಿವಮೊಗ್ಗ (shivamogga), ಫೆ. 16: ರಾಜ್ಯದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ಉಳಿದ ನಗರ – ಸ್ಥಳೀಯ ಸಂಸ್ಥೆಗಳಲ್ಲಿ ಉಂಟಾಗಿರುವ ಇ – ಖಾತಾ ಗೊಂದಲದ ಬಗ್ಗೆ, ಫೆ. 15 ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಡೆಸಿದ ಸಭೆಯಲ್ಲಿ, ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿರುವ ಮಾಹಿತಿ ಬಂದಿದೆ.
ಕಾಲಮಿತಿಯಲ್ಲಿ ಇ – ಖಾತಾ ಗೊಂದಲ ಪರಿಹರಿಸುವಂತೆ ಸಂಬಂಧಿಸಿದ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಿಎಂ ಖಡಕ್ ಸೂಚನೆ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಇ – ಖಾತಾ ಗೊಂದಲ ಪರಿಹಾರವಾಗುವ ಸಾಧ್ಯತೆಗಳು ಗೋಚರವಾಗುತ್ತಿವೆ.
ಶಿವಮೊಗ್ಗದಲ್ಲಿ ಗೊಂದಲ : ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿಯೂ ಇ – ಖಾತಾ ಗೊಂದಲದ ಗೂಡಾಗಿ ಪರಿಣಮಿಸಿದೆ. ಅವ್ಯವಸ್ಥೆಯ ಆಗರವಾಗಿದ್ದು, ನಾಗರೀಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಇ – ಖಾತಾ ಮಾಡಿಸಲು ಪಾಲಿಕೆ ಕಚೇರಿಗೆ ಅಲೆದಾಡುವಂತಹ ದುಃಸ್ಥಿತಿ ನಿರ್ಮಾಣವಾಗಿದೆ.
ಕಾಲಮಿತಿಯಲ್ಲಿ ಇ – ಖಾತಾ ದೊರಕುತ್ತಿಲ್ಲ. ಸಾಕಷ್ಟು ವಿಳಂಬವಾಗುತ್ತಿದೆ. ಕೆಲ ಅಧಿಕಾರಿ – ಸಿಬ್ಬಂದಿಗಳು ವಿನಾಕಾರಣ ನಾಗರೀಕರಿಗೆ ಸತಾಯಿಸುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ. ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಅದರಲ್ಲಿಯೂ ಕಳೆದ ಮೂರು ದಶಕಗಳ ಹಿಂದೆ ಗ್ರಾಮ ಪಂಚಾಯ್ತಿ ಅಧೀನದಿಂದ ನಗರಾಡಳಿತ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಸ್ಥಿರಾಸ್ತಿಗಳಿಗೆ ಇ – ಖಾತಾ ಮಾಡಿಸಲು ಹರಸಾಹಸ ನಡೆಸುವಂತಾಗಿದೆ. ಹಲವು ರೀತಿಯ ಆಡಳಿತಾತ್ಮಕ ಸಮಸ್ಯೆಗಳನ್ನು ಮುಂದಿಡಲಾಗುತ್ತಿದೆ.
ಯಾವುದೇ ಸ್ಪಷ್ಟ ಮಾಹಿತಿಗಳನ್ನು ನೀಡಲಾಗುತ್ತಿಲ್ಲ. ಪ್ರತಿಯೊಂದಕ್ಕೂ ಸರ್ಕಾರದ ಮೇಲೆ ಜವಾಬ್ದಾರಿ ಹಾಕಿ ನುಣುಚಿಕೊಳ್ಳುವ ಕಾರ್ಯ ನಡೆಸಲಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ಸಾವಿರಾರು ನಾಗರೀಕರು ಇನ್ನಿಲ್ಲದ ಪರಿತಾಪ ಪಡುವಂತಾಗಿದೆ.
ಮತ್ತೊಂದೆಡೆ, ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುವೆ. ಜನರಿಗೆ ನೆರವಾಗುವ ಕಿಂಚಿತ್ತೂ ಕಾಳಜಿ ಪ್ರದರ್ಶನ ಮಾಡುತ್ತಿಲ್ಲ. ಸಣ್ಣಪುಟ್ಟ ವಿಷಯಕ್ಕೂ ಹಾದಿಬೀದಿಗಿಳಿದು ಹೋರಾಟ ಮಾಡುವವರು, ಈ ವಿಷಯದಲ್ಲಿ ತಮ್ಮ ಜನಪರ ಕಾಳಜಿ ಪ್ರದರ್ಶನಕ್ಕೆ ಮುಂದಾಗದಿರುವುದು ಏಕೆ? ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪ್ರಸ್ತುತ ಸ್ಥಿರಾಸ್ತಿ ನೊಂದಣಿ, ಬ್ಯಾಂಕ್ ಲೋನ್ ಮತ್ತೀತರ ಕೆಲಸಕಾರ್ಯಗಳಿಗೆ ಇ – ಖಾತ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಮತ್ತೊಂದೆಡೆ, ಸ್ಥಿರಾಸ್ತಿಗಳಿಗೆ ನಿಗದಿತ ಅವಧಿಯಲ್ಲಿ ಇ – ಖಾತಾ ದೊರಕುತ್ತಿಲ್ಲ. ನಾನಾ ಆಡಳಿತಾತ್ಮಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ.
ಇನ್ನಾದರೂ ಸಂಬಂಧಿಸಿದ ಇಲಾಖೆ ಸಚಿವರುಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಇ – ಖಾತಾ ಕುರಿತಂತೆ ನಾಗರೀಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಮರೋಪಾದಿ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.
Shimoga Feb 16: It has been reported that in the meeting held by CM Siddaramaiah in Bengaluru on Feb 15, CM Siddaramaiah expressed displeasure against the officials regarding the e-khata confusion caused in the rest of the city-local bodies in the state, except the Bangalore Metropolitan Corporation.
Confusion in Shimoga: E-Katha has become a hotbed of confusion in Shimoga Municipal Corporation as well. Chaos is rampant and citizens are facing severe hardship. The situation is like wandering to the corporation office to make e-accounts.