ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಏಪ್ರಿಲ್ 22: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಕ್ಕೆ ಬದಲಾಗಿ, ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ಆತುರದ ನಿರ್ಧಾರದರಿಂದ ಇದೀಗ ವಿದ್ಯಾರ್ಥಿಗಳು ಇಕ್ಕಟ್ಟಿಗೆ ಸಿಲುಕುವಂತಾಗಿದೆ!
ತೃತೀಯ ಭಾಷೆಗಳಿಗೆ ಕಡ್ಡಾಯವಾಗಿ ಅಂಕಗಳನ್ನು ನೀಡುವಂತೆ, ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟ ಆದೇಶ ಹೊರಡಿಸಿದೆ. ಇದರಿಂದ ಸರ್ಕಾರದ ಮುಂದಿನ ನಡೆ ಏನಾಗಲಿದೆ ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಹಿನ್ನಡೆ : ತೃತೀಯ ಭಾಷೆಗಳಿಗೆ ಗ್ರೇಡಿಂಗ್ ಬದಲಾಗಿ ಅಂಕ ನೀಡುವಂತೆ ಏಪ್ರಿಲ್ 15 ರಂದು ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶ ಹೊರಡಿಸಿತ್ತು. ಸದರಿ ಆದೇಶ ಪುನರ್ ಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯ ವೇಳೆಯೂ ಹೈಕೋರ್ಟ್, ಗ್ರೇಡಿಂಗ್ ವ್ಯವಸ್ಥೆ ಒಪ್ಪದೆ ಅಂಕಗಳನ್ನೇ ನೀಡುವಂತೆ ಸ್ಪಷ್ಟ ಆದೇಶ ಹೊರಡಿಸಿದೆ.
ಪೂರ್ವ ಸಿದ್ದತೆಯಿಲ್ಲ : ವಿದ್ಯಾರ್ಥಿ ಜೀವನದಲ್ಲಿ ಎಸ್ಎಸ್ಎಲ್’ಸಿ ಪರೀಕ್ಷೆಯು ಅತ್ಯಂತ ಮಹತ್ವದ ಘಟ್ಟವಾಗಿದೆ. ಪರೀಕ್ಷೆ ನಡೆಯುವ ಸಂದರ್ಭದಲ್ಲಿಯೇ, ಯಾವುದೇ ಅಗತ್ಯ ಕಾನೂನಿನ ಪೂರ್ವ ಸಿದ್ದತೆಯಿಲ್ಲದೆ ರಾಜ್ಯ ಸರ್ಕಾರ ಆತುರಾತುರವಾಗಿ ಗ್ರೇಡಿಂಗ್ ನಿರ್ಧಾರ ಪ್ರಕಟಿಸಿತ್ತು.
ಸರ್ಕಾರದ ದಿಡೀರ್ ನಿರ್ಧಾರವು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಲ್ಲಿ ಗೊಂದಲ, ಸಂದಿಗ್ದ ಸ್ಥಿತಿ ಸೃಷ್ಟಿಯಾಗುವಂತೆ ಮಾಡಿತ್ತು. ಮತ್ತೊಂದೆಡೆ, ಗ್ರೇಡಿಂಗ್ ಪದ್ದತಿ ಎನ್ನುವ ಕಾರಣಕ್ಕೆ ಕೆಲ ವಿದ್ಯಾರ್ಥಿಗಳು ತೃತೀಯ ಭಾಷೆ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೇಗಿದ್ದರೂ ಪಾಸ್ ಆಗುತ್ತೆವೆ ಎಂಬ ಭಾವನೆಯಿಂದ ಪರೀಕ್ಷೆ ಬರೆದಿದ್ದರು ಎಂಬ ಮಾಹಿತಿಯಿದೆ.
ಆದರೆ ಮತ್ತೆ ಕೆಲ ವಿದ್ಯಾರ್ಥಿಗಳು ಇತರೆ ವಿಷಯಗಳ ಪರೀಕ್ಷೆಗಳ ರೀತಿಯಲ್ಲಿಯೇ ಅಧ್ಯಯನ ನಡೆಸಿ, ತೃತೀಯ ಭಾಷೆ ಪರೀಕ್ಷೆ ಎದುರಿಸಿದ್ದರು. ಇಂತಹ ವಿದ್ಯಾರ್ಥಿಗಳು ಗ್ರೇಡಿಂಗ್ – ಅಂಕ ವಿವಾದದ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳದೆ, ಫಲಿತಾಂಶದತ್ತ ಚಿತ್ತ ನೆಟ್ಟಿದ್ದಾರೆ.
ಹೇಗಿದ್ದರೂ ಪಾಸ್ ಆಗುತ್ತೆವೆ ಎಂಬ ಭಾವನೆಯಿಂದ ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳಲ್ಲಿ ತಳಮಳ ಎದುರಾಗಿದೆ. ಎಲ್ಲಿ ಅಂಕಗಳು ಕಡಿಮೆಯಾಗುತ್ತವೆಯೋ? ಎಂಬ ಆತಂಕ ಉಂಟು ಮಾಡುವಂತಾಗಿದೆ ಎಂಬ ಮಾತುಗಳು ವಿದ್ಯಾರ್ಥಿ ವಲಯದಿಂದ ಕೇಳಿಬರುತ್ತಿವೆ.
ಒಟ್ಟಾರೆ ಸಮರ್ಪಕ ಪೂರ್ವ ಸಿದ್ದತೆಯಿಲ್ಲದೆ, ಮುಂದೆ ಎದುರಾಗಬಹುದಾದ ಕಾನೂನು ತೊಡಕುಗಳ ಬಗ್ಗೆ ಎಚ್ಚರಿಕೆವಹಿಸದೆ ಶಿಕ್ಷಣ ಇಲಾಖೆ ಕೈಗೊಂಡ ಗ್ರೇಡಿಂಗ್ ನಿರ್ಧಾರವೀಗ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ವಲಯದಲ್ಲಿ ಟೀಕೆಗೆ ಗುರಿಯಾಗಿರುವುದಂತೂ ಸತ್ಯವಾಗಿದೆ.
ಶಿಕ್ಷಣ ಇಲಾಖೆ ಎಡವಿದ್ದೆಲ್ಲಿ?
*** ಎಸ್ಎಸ್ಎಲ್’ಸಿ ಪರೀಕ್ಷೆ ನಡೆಯುತ್ತಿದ್ದ ವೇಳೆಯೇ ತೃತೀಯ ಭಾಷೆಗಳಿಗೆ ಗ್ರೇಡಿಂಗ್ ನೀಡುವ ನಿರ್ಧಾರ ಪ್ರಕಟಿಸಿದ್ದು ಸರಿಯಲ್ಲ. ಇಂತಹ ಮಹತ್ವದ ನಿರ್ಧಾರವನ್ನು ಪರೀಕ್ಷೆ ಆರಂಭಕ್ಕೂ ಮುನ್ನವೇ ಸರ್ಕಾರ ಪ್ರಕಟಿಸಬೇಕಾಗಿತ್ತು. ನಿಯಮಾನುಸಾರ ನಡೆದುಕೊಳ್ಳಬೇಕಾಗಿತ್ತು. ಹಾಗೆಯೇ ಭವಿಷ್ಯದಲ್ಲಿ ಎದುರಾಗಬಹುದಾಗಿದ್ದ ಕಾನೂನು ಎಡರು – ತೊಡರುಗಳ ಬಗ್ಗೆ ಸಾಕಷ್ಟು ಎಚ್ಚರಿಕೆವಹಿಸಬೇಕಾಗಿತ್ತು.
ಜೊತೆಗೆ ಪರೀಕ್ಷೆ ಪೂರ್ಣಗೊಂಡ ನಂತರ ಏಪ್ರಿಲ್ 10 ರಂದು ಗ್ರೇಡಿಂಗ್ ವ್ಯವಸ್ಥೆ ಜಾರಿಯ ಅಧಿಕೃತ ಕರಡು ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದ್ದು ಕೂಡ ಮತ್ತೊಂದು ಎಡವಟ್ಟಿಗೆ ಕಾರಣವಾಗಿದೆ. ಇಲ್ಲಿಯವರೆಗೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಈ ಎಲ್ಲ ಅಂಶಗಳು ಕಾನೂನು ಸಮರದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಲು ಮುಖ್ಯ ಕಾರಣವಾಗಿದೆ.
ಅಂಕ ಕಡಿಮೆ ಮಾಡಬಹುದಾಗಿತ್ತು…
*** ಗ್ರೇಡಿಂಗ್ ಪದ್ದತಿಗೆ ಬದಲಾಗಿ, ತೃತೀಯ ಭಾಷೆಗಳ ತೇರ್ಗಡೆಯ ‘ಪಾಸಿಂಗ್’ ಅಂಕಗಳನ್ನು ಕಡಿಮೆ ಮಾಡಬಹುದಾಗಿತ್ತು. ಇತರೆ ವಿಷಯಗಳಿಗೆ ನಿಗದಿ ಮಾಡಿರುವ ‘ಪಾಸಿಂಗ್’ ಮಾರ್ಕ್ಸ್ ಗಿಂತ ತೃತೀಯ ಭಾಷೆಗಳಿಗೆ ಕಡಿಮೆ ಅಂಕ ನಿಗದಿಗೊಳಿಸಬಹುದಾಗಿತ್ತು. ಇದರಿಂದ ತೃತೀಯ ಭಾಷೆಗಳಲ್ಲಿ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಕೂಡ ಸಹಜವಾಗಿ ಹೆಚ್ಚಾಗುತ್ತಿತ್ತು. ಇತರೆ ಕಾನೂನು ರೀತ್ಯದ ಆಯ್ಕೆಗಳತ್ತ ಚಿತ್ತ ಹರಿಸದ ಸರ್ಕಾರ, ದಿಡೀರ್ ಆಗಿ ಗ್ರೇಡಿಂಗ್ ಪದ್ದತಿ ಜಾರಿಗೊಳಿಸಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತೆ ಮಾಡಿದ್ದು ಸರಿಯಾದ ಕ್ರಮವಲ್ಲ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ.
SSLC Third Language Grading Controversy: Students in dilemma due to Education Department’s hasty decision!
Shivamogga, April 22: Students are now in dilemma due to the state government’s hasty decision to give grading instead of marks for third languages including Hindi in the SSLC examination!
The High Court has once again issued a clear order to the state government to give marks for third languages. It remains to be seen what the government’s next move will be.
Where did the Education Department go wrong? *** It is not right to announce the decision to provide grading for third languages while the SSLC examination was going on. The government should have announced such an important decision before the examination started. It should have followed the rules. Also, it should have been very careful about the legal hurdles that could be faced in the future. In addition, the fact that the government issued an official draft notification for the implementation of the grading system on April 10 after the examination was completed has also caused another setback. The final notification has not been issued till now. All these factors are the main reasons for the government’s setback in the legal battle.

