ಶಿವಮೊಗ್ಗ (shivamogga), ಜೂನ್ 25: ಹೆಚ್ಚಿನ ವರದಕ್ಷಿಣೆ ತರುವಂತೆ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಪತಿಗೆ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ 2 ನೇ ಜೆಎಂಎಫ್’ಸಿ ನ್ಯಾಯಾಲಯ ತೀರ್ಪು ನೀಡಿದೆ.
ಮೂಲತಃ ಕೊಟ್ಟೂರು ನಿವಾಸಿಯಾದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಮಂಜುನಾಥ್ ಜೈಲು ಶಿಕ್ಷೆಗೆ ಗುರಿಯಾದ ಪತಿ ಎಂದು ಗುರುತಿಸಲಾಗಿದೆ.
ಐಪಿಸಿ ಕಲಂ 498 (ಎ) ಅಪರಾಧಕ್ಕೆ 3 ವರ್ಷ ಸಾದಾ ಸಜೆ ಶಿಕ್ಷೆ ಮತ್ತು ಹತ್ತು ಸಾವಿರ ರೂ. ದಂಡ ಹಾಗೂ ಐಪಿಸಿ ಕಲಂ 506 ರ ಅಡಿ 2 ವರ್ಷ ಸಾದಾ ಶಿಕ್ಷೆ ಮತ್ತು 5000 ರೂ. ದಂಡವನ್ನು ವಿಧಿಸಲಾಗಿದೆ.
ನ್ಯಾಯಾಧೀಶರಾದ ಸಿದ್ಧರಾಜು ಎನ್ ಕೆ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜಿ ಕೆ ಕಿರಣ್ಕುಮಾರ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ : ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಹಾಗೂ ಸೈಟ್ ಕೊಡಿಸುವಂತೆ ಪತಿಯು ಮಾನಸಿಕ – ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಪತ್ನಿಯು 2017 ರಲ್ಲಿ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಅಂದಿನ ತನಿಖಾಧಿಕಾರಿಗಳಾಗಿದ್ದ ಪ್ರಭಾವತಿ ಸಿ ಅವರು 2018 ರಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

