ಶಿವಮೊಗ್ಗ (shivamogga), ಜೂನ್ 28: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 7 ಕಡೆ 300 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.
ಜೂನ್ 28 ರಂದು ಶಿವಮೊಗ್ಗದ ವಿದ್ಯಾನಗರದ ಮೇಲ್ಸೇತುವೆಗೆ ಹೊಂದಿಕೊಂಡಂತಿರುವ ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಸಮಾರಂಭದಲ್ಲಿ ಮಾತನಾಡಿದರು.
ಕುಂಸಿ, ಯಡೇಹಳ್ಳಿ ಸಮೀಪದಲ್ಲಿ ತಲಾ 60 ಕೋಟಿ ರೂ. ಅಂದಾಜು ವೆಚ್ಚದಲ್ಲಿ, ಹೊಸೂರು, ತಾಳಗುಪ್ಪ ಮತ್ತು ನಗರದ ಬೊಮ್ಮನಕಟ್ಟೆ ಪ್ರದೇಶಗಳಲ್ಲಿ ತಲಾ 70 ಕೋ.ರೂ. ಹಾಗೂ ಗುಂಡಪ್ಪಶೆಡ್ ರಸ್ತೆಯಲ್ಲಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಆರಂಭಕ್ಕೆ ಅಗತ್ಯ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಭೂ ಸಾರಿಗೆ ಸಚಿವ ನಿತಿನ್‌ಗಡ್ಕರಿಯವರ ಸಹಕಾರದೊಂದಿಗೆ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್‌ರವರ ಸಹಕಾರದೊಂದಿಗೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹೊಸ ರೈಲು ಸಂಪರ್ಕಗಳ ಅಭಿವೃದ್ಧಿಯ ಪರ್ವ ಆರಂಭಗೊಂಡಿದೆ.
ಅನೇಕ ವಿಶೇಷ ಪ್ರಯತ್ನಗಳ ಫಲವಾಗಿ ಇಲ್ಲಿಯವರೆಗೂ ಸುಮಾರು 20 ಸಾವಿರ ಕೋಟಿಗೂ ಅಧಿಕ ವೆಚ್ಚದ ಹೆದ್ದಾರಿ ಮತ್ತು ರೈಲ್ವೇ ಕಾಮಗಾರಿಗಳಿಗೆ ಅನುದಾನ ದೊರಕಿದೆ. ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದು ಹೇಳಿದರು.
ಕ್ಷೇತ್ರದ ಹೆದ್ದಾರಿಗಳಲ್ಲಿರುವ ಎಲ್ಲಾ ರೈಲ್ವೇ ಗೇಟ್ ಲೆವೆಲ್‌ಕ್ರಾಸಿಂಗ್‌ಗಳ ಬದಲಾಗಿ ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ಗಳನ್ನು ನಿರ್ಮಿಸಿ ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ವಿಶೇಷ ಗಮನಹರಿಸಲಾಗಿದೆ.
ಈಗಾಗಲೇ ಆರಂಭಿಸಲಾಗಿದ್ದ ವಿದ್ಯಾನಗರದ ವೃತ್ತಾಕಾರದ ಮೇಲ್ಸೇತುವೆ, ಸವಳಂಗರಸ್ತೆಯ ಮೇಲ್ಸೇತುವೆ ಮತ್ತು ಅಂಡರ್‌ಪಾಸ್, ಸೋಮಿನಕೊಪ್ಪ ರಸ್ತೆಯಲ್ಲಿ ಮೇಲ್ಸೇತುವೆ, ಪಿ.ಅಂಡ್‌ಟಿ.ಕಾಲೋನಿಯಲ್ಲಿ ಅಂಡರ್‌ಪಾಸ್‌ಮತ್ತು ಭದ್ರಾವತಿ ಸಮೀಪದ ಕಡದಕಟ್ಟೆ ಬಳಿ ಮೇಲ್ಸೇತುವೆ ನಿರ್ಮೀಸಿ ಲೋಕಾರ್ಪಣೆಗೊಳಿಸಲಾಗಿರುವುದು ಅತ್ಯಂತ ಹರ್ಷದ ಸಂಗತಿಯಾಗಿದೆ ಎಂದರು.
ಭಾರೀ ಮೊತ್ತದ ಬಿಡುಗಡೆಗೊಳಿಸಿ ಅಭಿವೃದ್ದಿ ಕಾರ್ಯಕ್ಕೆ ಸಹಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ಗಡ್ಕರಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪರವರು ಅಭಿನಂದನಾರ್ಹರು ಎಂದು ಸಂಸದ ಬಿ ವೈ ರಾಘವೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್, ಬಲ್ಕೀಸ್‌ಬಾನು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಶಿವಮೊಗ್ಗದ ನಾಲ್ಕು ಸರ್ಕಲ್ ಗಳು ಮೇಲ್ದರ್ಜೆಗೆ
*** ಶಿವಮೊಗ್ಗ ನಗರದ ಎಂ.ಆರ್.ಎಸ್.ಸರ್ಕಲ್‌ನಿಂದ ರಿಂಗ್‌ರೋಡ್‌ನವರೆಗೆ ಒಂದು ಬಾರಿ ಅಭಿವೃದ್ದಿಗೊಳಿಸಿ ನಿರ್ವಹಿಸಲು ಹಾಗೂ ಎಂ.ಆರ್.ಎಸ್‌ನಿಂದ ಬಸ್‌ನಿಲ್ದಾಣದವರೆಗೆ ಹಾಗೂ ನಗರದ ವಿವಿಧ 04 ಪ್ರಮುಖ ವೃತ್ತಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರರವರು ತಿಳಿಸಿದ್ದಾರೆ.

