shimoga railway news | ಶಿವಮೊಗ್ಗ ನಗರದ ಪ್ರಮುಖ ಸ್ಥಳಗಳಲ್ಲಿ ಅಗತ್ಯವಿದೆ ರೈಲ್ವೆ ಅಂಡರ್ ಪಾಸ್ / ಫ್ಲೈ ಓವರ್ : ಗಮನಹರಿಸುವರೆ ಸಂಸದರು?

shimoga-flyover

ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga),ಜೂನ್ 23: ಶಿವಮೊಗ್ಗ ನಗರದಲ್ಲಿ ಸುಗಮ ಜನ – ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ, ಪ್ರಮುಖ ಸ್ಥಳಗಳ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಅಂಡರ್ ಪಾಸ್ ಅಥವಾ ಫ್ಲೈ ಓವರ್ ನಿರ್ಮಾಣ ಮಾಡಬೇಕೆಂಬ ಬೇಡಿಕೆಯಿದೆ.

ಸಂಸದ ಬಿ ವೈ ರಾಘವೇಂದ್ರರವರ ಪ್ರಯತ್ನ ಫಲವಾಗಿ ಈಗಾಗಲೇ ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣ, ಸವಳಂಗ ರಸ್ತೆ ಹಾಗೂ ಕಾಶೀಪುರ ರೈಲ್ವೆ ಲೆವೆಲ್ ಕ್ರಾಸಿಂಗ್ ಗಳ ಬಳಿ ಫ್ಲೈ ಓವರ್ ಹಾಗೂ ಅಂಡರ್ ಪಾಸ್ ಗಳ ನಿರ್ಮಾಣವಾಗಿವೆ. ಇದರಿಂದ ನಾಗರಿಕರಿಗೆ ಸಾಕಷ್ಟು ಅನುಕೂಲವಾಗಿದೆ.

ಬೇಡಿಕೆಯಿದೆ : ನಗರದ ಬಿ ಹೆಚ್ ರಸ್ತೆಗೆ ಹೊಂದಿಕೊಂಡಂತಿರುವ ಗುಂಡಪ್ಪ ಶೆಡ್ ಬಡಾವಣೆ, ಕೀರ್ತಿ ನಗರ ಸಮೀಪದ ಬೊಮ್ಮನಕಟ್ಟೆ ಮುಖ್ಯ ರಸ್ತೆ, ಕೋಟೆಗಂಗೂರು ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ  ಸುಗಮ ಜನ – ವಾಹನ ಸಂಚಾರದ ಅನುಕೂಲಕ್ಕಾಗಿ ಅಂಡರ್ ಪಾಸ್ / ಫ್ಲೈ ಓವರ್ ನಿರ್ಮಿಸಬೇಕೆಂಬ ಬೇಡಿಕೆ ದಶಕಗಳದ್ದಾಗಿದೆ.

ಅದೇ ರೀತಿಯಲ್ಲಿ ಜೆ ಹೆಚ್ ಪಟೇಲ್ ಬಡಾವಣೆ – ಕಾಶೀಪುರ ನಡುವೆ ಹಾದು ಹೋಗಿರುವ ರೈಲ್ವೆ ಮಾರ್ಗದ ಬಳಿ ಅಂಡರ್ ಪಾಸ್ ನಿರ್ಮಾಣದ ಬೇಡಕೆಯಿದೆ.

ಸಂಚಾರ ದಟ್ಟಣೆ : ನಗರದ ಹೊರವಲಯ ಕೋಟೆಗಂಗೂರು ಸಮೀಪ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಡಿಪೋ ಕಾರ್ಯಾರಂಭಗೊಂಡರೆ, ಶಿವಮೊಗ್ಗ ನಗರಕ್ಕೆ ಆಗಮಿಸುವ ರೈಲುಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗಲಿದೆ.

ಇದರಿಂದ ಶಿವಮೊಗ್ಗ ನಗರದ ವಿವಿಧೆಡೆಯಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗಳ ಬಳಿ ಜನ – ವಾಹನ ಸಂಚಾರದ ಮೇಲೆ ಪರಿಣಾಮ ಬೀರಲಿದೆ. ಈ ಕಾರಣದಿಂದ ಪ್ರಮುಖ ಲೆವೆಲ್ ಕ್ರಾಸಿಂಗ್ ಗಳ ಬಳಿ ಫ್ಲೈ ಓವರ್  ಅಥವಾ ಅಂಡರ್ ಪಾಸ್ ನಿರ್ಮಾಣವಾಗಬೇಕು ಎಂಬುವುದು ನಾಗರಿಕರ ಬೇಡಿಕೆಯಾಗಿದೆ.

ಎಲ್ಲೆಲ್ಲೆ ಬೇಕು?

*ಹೊಳೆ ಬಸ್ ನಿಲ್ದಾಣ ಸಮೀಪದ ಗುಂಡಪ್ಪ ಶೆಡ್ ಬಳಿ ಫ್ಲೈ ಓವರ್ / ಅಂಡರ್ ಪಾಸ್

* ಕೀರ್ತಿ ನಗರದ ಬೊಮ್ಮನಕಟ್ಟೆ ರಸ್ತೆ ಬಳಿ ಫ್ಲೈ ಓವರ್ / ಅಂಡರ್ ಪಾಸ್

* ಕೋಟೆಗಂಗೂರು ಮುಖ್ಯ ರಸ್ತೆ ಬಳಿ ಫ್ಲೈ ಓವರ್ / ಅಂಡರ್ ಪಾಸ್

* ಜೆ ಹೆಚ್ ಪಟೇಲ್ ಬಡಾವಣೆ – ಕಾಶೀಪುರ ನಡುವೆ ಅಂಡರ್ ಪಾಸ್

ರಾಜ್ಯದ ನೆರವು ಸಿಗುವುದು ಅನುಮಾನ?

*** ಈ ಹಿಂದೆ ಶಿವಮೊಗ್ಗ ನಗರದಲ್ಲಿ ನಿರ್ಮಿಸಿದ ಮೂರು ಫ್ಲೈ ಓವರ್ ಹಾಗೂ ಅಂಡರ್ ಪಾಸ್ ಗಳನ್ನು ಕೇಂದ್ರ – ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸಂಸದ ಬಿ ವೈ ರಾಘವೇಂದ್ರರವರು ಅನುಷ್ಠಾನಗೊಳಿಸಿದ್ದರು. ಈ ವೇಳೆ ಸಿಎಂ ಆಗಿದ್ದ ಬಿ ಎಸ್ ಯಡಿಯೂರಪ್ಪರವರು ಸದರಿ ಯೋಜನೆಗಳಿಗೆ ಕಾಲಮಿತಿಯೊಳಗೆ ಅನುದಾನ ಬಿಡುಗಡೆಗೊಳಿಸಿದ್ದರು. ಸದ್ಯ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ರೈಲ್ವೆ ಯೋಜನೆಗಳಿಗೆ ರಾಜ್ಯದಿಂದ ಅಗತ್ಯ ಅನುದಾನ ಲಭ್ಯವಾಗುವ ಸಾಧ್ಯತೆ ಕಷ್ಟಸಾಧ್ಯವಾಗಿದೆ. ಈ ಕಾರಣದಿಂದ ಕೇಂದ್ರ ಸರ್ಕಾರದ ಮೂಲಕವೇ ಹೊಸ ಫ್ಲೈ ಓವರ್ – ಅಂಡರ್ ಪಾಸ್ ಯೋಜನೆಗಳ ಅನುಷ್ಠಾನಕ್ಕೆ ಸಂಸದ ಬಿ ವೈ ರಾಘವೇಂದ್ರರವರು ಕ್ರಮಕೈಗೊಳ್ಳಬೇಕಾಗಿದೆ. ಬಿ ವೈ ರಾಘವೇಂದ್ರರವರ ಪ್ರಯತ್ನದ ಫಲವಾಗಿ ಈಗಾಗಲೇ ಜಿಲ್ಲೆಯ ಹೆದ್ದಾರಿ, ರೈಲ್ವೆ ಮೊದಲಾದ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹಲವು ಬದಲಾವಣೆಗಳಾಗಿದೆ. ಹೊಸ ಹೊಸ ಯೋಜನೆಗಳು ಅನುಷ್ಠಾನಗೊಂಡಿವೆ.

 

ಜೆ ಹೆಚ್ ಪಟೇಲ್ ಬಡಾವಣೆ – ಕಾಶೀಪುರ ನಡುವೆ ಅಂಡರ್ ಪಾಸ್ ನಿರ್ಮಾಣಕ್ಕೆ ಆಗ್ರಹ!

*** ನಗರದ ಜೆ ಹೆಚ್ ಪಟೇಲ್ ಬಡಾವಣೆ ಮೂಲಕ ರೈಲ್ವೆ ಮಾರ್ಗ ಹಾದು ಹೋಗಿದೆ. ಸದರಿ ಬಡಾವಣೆಯ ರವಿ ಶಂಕರ್ ವಿದ್ಯಾ ಮಂದಿರ ಸಮೀಪದಲ್ಲಿ ಅಂಡರ್ ಪಾಸ್ ನಿರ್ಮಿಸಬೇಕೆಂಬ  ಬೇಡಿಕೆ ಸ್ಥಳೀಯ ನಾಗರೀಕರದ್ದಾಗಿದೆ. ಸದರಿ ಪ್ರದೇಶದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಯಾವುದೇ ಅಡೆತಡೆಯಿಲ್ಲವಾಗಿದೆ. ಅಂಡರ್ ಪಾಸ್ ನಿರ್ಮಿಸಿದರೆ ಜೆ ಹೆಚ್ ಪಟೇಲ್ ಬಡಾವಣೆ ಹಾಗೂ ಕಾಶೀಪುರ ಸುತ್ತಮುತ್ತಲಿನ ಬಡಾವಣೆಗಳ ನಡುವಿನ ಸಂಪರ್ಕ ಅತ್ಯಂತ ಸುಲಭವಾಗಲಿದೆ. ವಾಹನ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಈ ಭಾಗದ ನಾಗರೀಕರದ್ದಾಗಿದೆ.

 

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *