CM news | ‘ಭ್ರಷ್ಟಾಚಾರ ವಿಚಾರದಲ್ಲಿ ರಾಜಿ ಇಲ್ಲ – ಡಬಲ್ ಬಿಲ್, ನಕಲಿ ಬಿಲ್ ಮಾಡುವವರನ್ನು ಬಡಿದು ಹಾಕುವೆ!’ : ಸರ್ಕಾರಿ ನೌಕರರಿಗೆ ಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ

Bengaluru, August 11: "My cabinet, the officials, and I—we are all government servants. Ours is 'Team Karnataka.' Everyone works together, and we will continue to do so. Our goal is to respond to the people's problems and ensure their welfare," said Deputy Chief Minister D.K. Shivakumar.

ಬೆಂಗಳೂರು (bengaluru), ಆಗಸ್ಟ್ 11: “ನಾನು ಸೇರಿದಂತೆ ನನ್ನ ಮಂತ್ರಿ ಮಂಡಲ, ಅಧಿಕಾರಿಗಳು ಎಲ್ಲರೂ ಸರ್ಕಾರಿ ನೌಕರರು. ನಮ್ಮದು ಟೀಮ್ ಕರ್ನಾಟಕ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕಲ್ಯಾಣ ಮಾಡುವುದೇ ನಮ್ಮ ಗುರಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ಕೊಟ್ಟರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ನಡೆದ ಸರ್ಕಾರಿ ನೌಕರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ನೌಕರರನ್ನು ಉದ್ದೇಶಿಸಿ ಮಾತನಾಡಿದರು.

“ನಮ್ಮನ್ನು ಸೇರಿದಂತೆ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು 5.50 ಲಕ್ಷ ಸರ್ಕಾರಿ ನೌಕರರಿಗೆ ಮಾತ್ರ. ನಾವು ನಮಗೆ ಸಿಕ್ಕ ಅವಕಾಶ ಬಳಸಿಕೊಳ್ಳಬೇಕು. ಕೆಂಗಲ್ ಹನುಮಂತಯ್ಯ ಅವರ ಕಾಲದಿಂದ ಇಲ್ಲಿಯವರೆಗೆ ಎಲ್ಲ ಸಿಎಂಗಳು ತಮ್ಮದೇ ರೀತಿಯಲ್ಲಿ, ತಮ್ಮದೇ ಅನುಭವ ಸಿದ್ಧಾಂತದ ಮೇಲೆ ಆಡಳಿತ ಮಾಡಿದ್ದಾರೆ. ಕೆಂಗಲ್ ಹನುಮಂತಯ್ಯ ಅವರು ಜೈಲಿನ ಖೈದಿಗಳಿಂದ ವಿಧಾನಸೌಧ ಕಟ್ಟಿಸಿದರು. ಆಗ ಕೆಲವು ಖೈದಿಗಳು ಹನುಮಂತಯ್ಯ ಅವರ ಮೇಲೆ ಚಪ್ಪಲಿ ಎಸೆದಿದ್ದರು. ವಿಶ್ವೇಶ್ವರಯ್ಯ ಅವರು ₹1 ಗೆ ಕೆಲಸ ಮಾಡುತ್ತಿದ್ದರು ಎಂಬ ಇತಿಹಾಸ ಇದೆ. ನಾನು ಈ ಹಿಂದಿನವರ ಕೆಲಸಗಳನ್ನು ಟೀಕೆ ಮಾಡುವುದಿಲ್ಲ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ” ಎಂದು ತಿಳಿಸಿದರು.

“ಅಂಬೇಡ್ಕರ್ ಅವರು ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂದು ಹೇಳಿದ್ದಾರೆ. ನೀವು ಸಾಕಷ್ಟು ವಿದ್ಯೆ, ಅನುಭವ ಹೊಂದಿದ್ದೀರಿ. ನಾನು ಹೆಚ್ಚು ಓದಿಲ್ಲ, ಆದರೆ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ, ಶಾಸಕ, ಮಂತ್ರಿ, ಉಪಮುಖ್ಯಮಂತ್ರಿಯಾಗಿ ಅನುಭವ ಇದೆ. ನೀವು ಶ್ರಮಜೀವಿ, ಸರ್ಕಾರದ ನಾಡಿ ಮಿಡಿತ ಇಟ್ಟುಕೊಂಡು, ಜನ ಮತ್ತು ಸರ್ಕಾರದ ಸೇತುವೆಯಾಗಿದ್ದೀರಿ. ನಾವು ಅಧಿಕಾರದಲ್ಲಿ ಇದ್ದಾಗ ಯಾವ ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತೇವೆ ಎಂಬುದು ಮುಖ್ಯ” ಎಂದು ಕರೆ ಕೊಟ್ಟರು.

“ನಮ್ಮ ನಿಮ್ಮ ಮೇಲೆ ಜನರ ಬದುಕಿನಲ್ಲಿ, ಬದಲಾವಣೆ ತರುವ ಜವಾಬ್ದಾರಿ ಇದೆ. ನಾನು ಇತಿಹಾಸ ಓದಲು ಬರೆಯಲು ಇಚ್ಚಿಸುವುದಿಲ್ಲ. ಇತಿಹಾಸ ಸೃಷ್ಟಿಸಲು ಬಯಸುತ್ತೇನೆ. ಸರ್ಕಾರಿ ನೌಕರರ ಸೇವೆಯಿಂದಲೇ ನಮ್ಮ ರಾಜ್ಯ ಈ ಹಂತಕ್ಕೆ ಬೆಳೆದಿದೆ” ಎಂದರು.

ರಾಜ್ಯದ ಪ್ರಗತಿ : “ಮೈಸೂರಿನ ಕಾರ್ಯಕ್ರಮದಲ್ಲಿ ನಾನು ಪ್ರಧಾನಮಂತ್ರಿಗಳ ಬಳಿ ಒಂದು ಮಾತು ಹೇಳಿದ್ದೆ. ಅಟಲ್ ಬಿಹಾರಿ ವಾಜಪೇಯಿ ಅವರು ಇದೆ ಹಾಲ್ ನಲ್ಲಿ, ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದಲ್ಲಿ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಮೊದಲು ಬೆಂಗಳೂರಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದರು. ಇದು ಕೇವಲ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ನಾನು ಹೇಳಲ್ಲ. ರಾಜ ಮಹಾರಾಜರ ಕಾಲದಿಂದ ಪರಿಶುದ್ಧ ಆಡಳಿತದ ಪರಿಣಾಮ, ನಮ್ಮ ವಿದ್ಯಾರ್ಥಿಗಳ ಜ್ಞಾನ, ಪ್ರತಿಭಾನ್ವಿತ ಮಾನವ ಸಂಪನ್ಮೂಲಗಳ ಕಾರಣ.ಮಹಾರಾಜರು ಬೆಂಗಳೂರಿನಲ್ಲೇ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್ ಆರಂಭಿಸಿದರು” ಎಂದರು.

“ಪೋಲೆಂಡ್ ಪ್ರಧಾನಿಯನ್ನು ಭೇಟಿ ಮಾಡಿದಾಗ, ಸಿಲಿಕಾನ್ ವ್ಯಾಲಿಯಲ್ಲಿ 3ರಲ್ಲಿ ಇಬ್ಬರು ಭಾರತದವರು. ಹೀಗಾಗಿ ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದೇವೆ ನಮಗೆ 60% ಉಳಿತಾಯವಾಗಿದೆ ಎಂದರು. ಗ್ಯಾರಂಟಿ ಯೋಜನೆಯಲ್ಲಿ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ನಮ್ಮ ರಾಜ್ಯದವರಿಗೆ ನಾವು ಯೋಜನೆ ನೀಡಬೇಕು. ಬೇರೆಯವರಿಗೆ ನೀಡುವ ಅಗತ್ಯವಿಲ್ಲ” ಎಂದರು.

ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಿ : “ನಮ್ಮಲ್ಲಿರುವ ಶಿಕ್ಷಣ, ಆರೋಗ್ಯ ಸೌಲಭ್ಯ ಬೇರೆ ಎಲ್ಲೂ ಇಲ್ಲ. ನಾನು ನನ್ನ ಮೇಲೆ ಕಣ್ಣು ಇಟ್ಟುಕೊಂಡಿದ್ದೇನೆ. ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಶಾಸಕರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಪರಿಶೀಲನೆ ಮಾಡುತ್ತೇವೆ. ನಾವು ಕೆಲಸ ಮಾಡುವುದೇ ಜನರಿಗಾಗಿ. ಬೇರೆಯವರಿಗೆ ಒಪ್ಪಿಸದಿದ್ದರೂ ನಿಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಿ” ಎಂದರು.

“ಅಧಿಕಾರ ಜವಾಬ್ದಾರಿ ಸಂಕೇತ. ಇದು ಸಿಂಹಾಸನ ಅಲ್ಲ, ಅವಕಾಶ. ಮೂರ್ತಿಗೆ ಬೆಲೆ ಕಟ್ಟಿದರೂ ಭಗವಂತನಿಗೆ ಬೆಲೆ ಕಟ್ಟಲು ಆಗಲ್ಲ. ಜನರಲ್ಲೇ ದೇವರನ್ನು ಕಾಣಬಹುದು. ಗ್ಯಾರಂಟಿ ಬಗ್ಗೆ ಶಾಸಕರು, ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಪ್ರಧಾನಮಂತ್ರಿಗಳು ಟೀಕಿಸಿದರೂ ನಂತರ ಅವರೇ ಪಾಲಿಸುವಂತಾಗಿದೆ. ನಮ್ಮ ಮಾದರಿ ದೇಶಕ್ಕೆ ಮಾದರಿಯಾಗಿದೆ” ಎಂದು ಹೇಳಿದರು.

ಸಮಸ್ಯೆಗೆ ಸ್ಪಂದಿಸಿ : ಸರ್ಕಾರ ನೌಕರರ ಸಂಘದವರು ಗ್ಯಾರಂಟಿ ಯೋಜನೆ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅವರಿಗೆ ಅಭಿನಂದನೆಗಳು. ಕೇಂದ್ರ ಕಚೇರಿಯಲ್ಲಿ ಇದ್ದು ಕೆಲಸ ಮಾಡದಿದ್ದರೆ ಮತ್ತೆ ನಿಮಗೆ ಈ ಜವಾಬ್ದಾರಿ ಯಾಕೆ? ಪ್ರತಿ ತಾಲ್ಲೂಕಿನಲ್ಲಿ ಎಲ್ಲಾ ಅಧಿಕಾರಿಗಳು ಅಲ್ಲೇ ವಾಸ ಇರಬೇಕು. ಇಂದು 750 ಕಡೆ ಸಭೆ ಈ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ ಪ್ರಮುಖ ನೌಕರನಾಗಿ ಸರ್ಕಾರದ ಚಿಂತನೆ, ಮುಂದಿನ ದಿನಗಳಲ್ಲಿ ಸಾಗಬೇಕಾದ ದಾರಿ ಬಗ್ಗೆ ಮಾರ್ಗದರ್ಶನ ನೀಡಲು ಬಂದಿರುವೆ. ಮನಸ್ಸು ಶುದ್ಧವಾಗಿ, ಪಾರದರ್ಶಕವಾಗಿ ಕೆಲಸ ಮಾಡಿದರೆ ಸಮಸ್ಯೆಗೆ ಪರಿಹಾರ ನೀಡಬಹುದು” ಎಂದು ಕಿವಿಮಾತು ಹೇಳಿದರು.

“ಪ್ರಜಾಸೇವೆ ಇಲಾಖೆ ಮೂಲಕ ಜಿಲ್ಲಾ ಮಂತ್ರಿ, ಶಾಸಕರು 2 ವಾರಕ್ಕೆ ಒಮ್ಮೆ ತಾಲ್ಲೂಕಿಗೆ ಹೋಗಿ ಪ್ರಜಾಸೇವೆ ಕೆಲಸ ಮಾಡಬೇಕು. ತಿಂಗಳ ಮೊದಲ ಹಾಗೂ ಮೂರನೇ ಶನಿವಾರ. ನಂತರ ಪಂಚಾಯ್ತಿ ಮಟ್ಟದಲ್ಲಿ ಮಾಡಬೇಕು. ಶಾಸಕರು ಹೋಬಳಿ ಮಟ್ಟದಲ್ಲಿ ಮಾಡಬೇಕು. ಜನರ ಸಂಕಷ್ಟಕ್ಕೆ ಕಾನೂನು ಚೌಕಟ್ಟಿನಲ್ಲಿ ಸಹಾಯ ಮಾಡಿ. ನೀವು ಕೇಂದ್ರ ಸ್ಥಳದಲ್ಲಿದ್ದು, ಅಲ್ಲಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಆಗ ವಾಸ್ತವ ಪರಿಸ್ಥಿತಿ ಅರಿಯಬಹುದು. ಬೆಂಗಳೂರಿನಲ್ಲಿ 25 ಲಕ್ಷ ಇ ಖಾತೆ, ಗ್ರಾಮೀಣ ಭಾಗದ ಜನರಿಗೆ ಪಟ್ಟಾ ದಾಖಲೆ ಉಚಿತವಾಗಿ ನೀಡಲಾಗಿದೆ. ಲಂಚ ಇಲ್ಲದೆ ಮನೆ ಬಾಗಿಲಿಗೆ ಆಸ್ತಿ ದಾಖಲೆ ನೀಡುತ್ತಿರುವುದು ನಿಮ್ಮ ಸರ್ಕಾರದಿಂದ ಸಾಕಾರವಾಗಿದೆ. ಇದು ನಮ್ಮ ಸರ್ಕಾರದ 6ನೇ ಗ್ಯಾರಂಟಿ. ಮುಂದಿನ 6-7 ತಿಂಗಳಲ್ಲಿ ಇದನ್ನು ರಾಜ್ಯದ ಎಲ್ಲೆಡೆ ವಿಸ್ತರಣೆ ಮಾಡಿ” ಎಂದು ಸೂಚಿಸಿದರು.

Sharing and caring ಮಂತ್ರ ಅನುಸರಿಸಿ : “ಬಡವರಿಗೆ ಸೂರಿನ ಆಧಾರ ನೀಡುತ್ತಿದ್ದೇವೆ. ಅವರು ಕಷ್ಟ ಪಟ್ಟು ಸಂಪಾದಿಸಿದ ಆಸ್ತಿಗೆ ಭದ್ರತೆ ನೀಡುತ್ತಿದ್ದೇವೆ. ಜನ ಸೇವೆ ನಮ್ಮ ನಿಮ್ಮ ಮೂಲ ಉದ್ದೇಶವಾಗಿರಬೇಕು. Sharing and caring ಮಂತ್ರ ಅನುಸರಿಸಿ. ಸ್ಥಳೀಯ ಮಟ್ಟದ ಸಮಸ್ಯೆಗೆ ಅಲ್ಲೇ ಪ್ರಜಾಸೇವೆ ಮೂಲಕ ಬಗೆಹರಿಸಿ. ಸಮಸ್ಯೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಡ. ಭಾರತ ಜೋಡೋ ಯುವ ಸಂಘ ಕ್ರಾಂತಿಕಾರಿ ಯೋಜನೆ. ಯುವಕರಿಗೆ ಶಕ್ತಿ ತುಂಬಬೇಕು, ದೇಶ ಸೇವೆ ಬಗ್ಗೆ ಅರಿವು ಮೂಡಿಸಬೇಕು. ಅವರಲ್ಲಿ ಪ್ರತಿಭೆಗೆ ವೇದಿಕೆ ಕಲ್ಪಿಸುವುದು ಇದರ ಉದ್ದೇಶ.

ಬಡಿದು ಹಾಕುವೆ : “ಭ್ರಷ್ಟಾಚಾರ ವಿಚಾರದಲ್ಲಿ ನಾನು ರಾಜಿ ಇಲ್ಲ. ಅಧಿಕಾರಿಗಳ ಪ್ರತಿ ಹೆಜ್ಜೆ ಪರಿಶೀಲಿಸುತ್ತೇನೆ. ಪ್ರತಿ ಫಲಾನುಭವಿ ಮಾಹಿತಿ ಇಟ್ಟುಕೊಳ್ಳಬೇಕು. ಅವರು ಅದನ್ನು ಹೇಗೆ ಬಳಸುತ್ತಿದ್ದಾರೆ ಎಂದು ನೋಡಬೇಕು. ನಮ್ಮಲ್ಲಿ ಡಬಲ್ ಬಿಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾನು ಅಂತಹವರನ್ನು ಬಡಿದು ಹಾಕುತ್ತೇನೆ. ನಕಲಿ ಬಿಲ್ ಗಳಿಗೆ ಅವಕಾಶ ಇಲ್ಲ. ದಾಖಲೆ ತಿದ್ದುವುದಕ್ಕೆ ಬ್ರೇಕ್ ಹಾಕಲು ಆಸ್ತಿ ದಾಖಲೆ ಡಿಜಿಟಲೀಕರಣ ಮಾಡಲಾಗುತ್ತಿದೆ” ಎಂದರು.

“ಪ್ರತಿ ತಾಲ್ಲೂಕು ಅಧಿಕಾರಿಗಳು ತಮ್ಮ ದಿನದ ಕಾರ್ಯಕ್ರಮದ ವಿವರ ಹಿರಿಯ ಅಧಿಕಾರಿಗಳಿಗೆ ನೀಡಬೇಕು. ಸಹಕಾರ, ಕಂದಾಯ ಅಧಿಕಾರಿಗಳಿಗೆ ನ್ಯಾಯ ನೀಡುವ ಅಧಿಕಾರ ಇರುತ್ತದೆ. ನ್ಯಾಯ ಪೀಠದಿಂದ ಅನ್ಯಾಯ ಆಗಬಾರದು. ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಿ. ವಿಧಾನಸಭೆ ಆದ ಮೇಲೆ ಪ್ರತಿ ತಾಲ್ಲೂಕಿಗೂ ನಾನು ಭೇಟಿ ನೀಡುತ್ತೇನೆ. ಖಾಸಗಿ ಶಾಲೆಗಳು ಸೇರಿ ಎಲ್ಲಾ ಶಾಲೆಗಳು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಿ” ಎಂದು ಸೂಚಿಸಿದರು.

#bengaluru #news #DKShivakumar #CM #newsfeed #NewsUpdate

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *