ಶಿವಮೊಗ್ಗ (shivamogga), ಸೆಪ್ಟೆಂಬರ್ 09: ಶಿವಮೊಗ್ಗ ಜಿಲ್ಲೆಯಲ್ಲಿ ಗಣೇಶ ಹಬ್ಬದ ಆಚರಣೆ ಮತ್ತು ಮೆರವಣಿಗೆಯ ಹಿನ್ನೆಲೆಯಲ್ಲಿ, ಸಾರ್ವಜನಿಕರ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ 14/09/2026 ರಿಂದ 13/10/2026 ರವರೆಗೆ 30 ದಿನಗಳ ಕಾಲ ಡಿಜೆ ಸಿಸ್ಟಂ, ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದು ಸಿಡಿಸುವುದನ್ನು ಮತ್ತು ಬೈಕ್ ರ‍್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಸೆಪ್ಟೆಂಬರ್ 14 ರಂದು ಜಿಲ್ಲಾದ್ಯಂತ ಗಣೇಶ ಹಬ್ಬ ನಡೆಯಲಿದ್ದು, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುವುದರೊಂದಿಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆಗಳಿರುತ್ತವೆ.
ಈ ಹಿನ್ನೆಲೆಯಲ್ಲಿ, ಪೊಲೀಸ್ ಅಧೀಕ್ಷಕರ ಶಿಫಾರಸಿನಂತೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಪೊಲೀಸ್ ಕಾಯ್ದೆ-1963 ರ ಕಲಂ 35, 36 ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲಾದ್ಯಂತ ಸೆ. 14 ರಿಂದ ಅ.13 ರವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.
ಗಣೇಶ ವಿಸರ್ಜನೆಗೆ ತೆಪ್ಪ ಬಳಕೆ : ಕಟ್ಟುನಿಟ್ಟಿನ ನಿಯಮ ಜಾರಿ
ಶಿವಮೊಗ್ಗ (shivamogga), ಸೆಪ್ಟೆಂಬರ್ 09: ಜಿಲ್ಲೆಯಲ್ಲಿ ಮುಂಬರುವ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿ ಮೂರ್ತಿಗಳ ವಿಸರ್ಜನೆ ವೇಳೆ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಹಾಗೂ ಸಾರ್ವಜನಿಕ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ದಿನಾಂಕ 14-09-2026 ರಿಂದ ಆರಂಭವಾಗುವ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹೊಳೆ, ನದಿ, ಕೆರೆ ಹಾಗೂ ಹಿನ್ನೀರು ಪ್ರದೇಶಗಳಲ್ಲಿ ತೆಪ್ಪದ ಮೂಲಕ ಮೂರ್ತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿದೆ. ಈ ಹಿಂದೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ತೆಪ್ಪ ಮುಳುಗಿ 12 ಜನರು ಸಾವನ್ನಪ್ಪಿದ್ದ ದುರಂತ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಅಂತಹ ಅನಾಹುತಗಳು ಮರುಕಳಿಸದಂತೆ ತಡೆಯಲು ಈ ಸುರಕ್ಷತಾ ಮಾರ್ಗಸೂಚಿಗಳನ್ನು ವಿಧಿಸಲಾಗಿದೆ.
ಪ್ರಮುಖ ನಿಯಮಗಳು ಹಾಗೂ ನಿರ್ದೇಶನಗಳು: ತೆಪ್ಪದ ಮೂಲಕ ವಿಸರ್ಜನೆ ಮಾಡುವಾಗ ತೆಪ್ಪದಲ್ಲಿ ಕೇವಲ 2 ರಿಂದ 3 ಜನರಿಗೆ ಮಾತ್ರ ಹೋಗಲು ಅವಕಾಶವಿರುತ್ತದೆ. ಲೈಫ್ ಜ್ಯಾಕೆಟ್ ಕಡ್ಡಾಯ: ತೆಪ್ಪದಲ್ಲಿ ತೆರಳುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್ ಜ್ಯಾಕೆಟ್ ಧರಿಸಿರಬೇಕು.ನುರಿತ ಈಜುಗಾರರ ಸಮಕ್ಷಮದಲ್ಲೇ ಗಣಪತಿ ಮೂರ್ತಿ ವಿಸರ್ಜನೆ ಪ್ರಕ್ರಿಯೆಯನ್ನು ನಡೆಸತಕ್ಕದ್ದು.
ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 35 ಮತ್ತು 36ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರ ಶಿಫಾರಸ್ಸಿನ ಮೇರೆಗೆ ಜಿಲ್ಲೆಯಾದ್ಯಂತ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗಳು ಸಂಪೂರ್ಣವಾಗಿ ಮುಕ್ತಾಯಗೊಳ್ಳುವವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Shivamogga, September 09: In view of Ganesh festival celebrations and processions across Shivamogga district Deputy Commissioner Prabhuling Kavalikatti has issued an order prohibiting DJ systems – color paper blasting – bursting of firecrackers and bike rallies for 30 days — from September 14 2026 to October 13 2026. The directive aims to maintain public peace and harmony during the festive period.

