ಶಿವಮೊಗ್ಗ (shivamogga), ಅಕ್ಟೋಬರ್ 14: ಶಿವಮೊಗ್ಗ ನಗರದ ಕಾಶೀಪುರ ಫ್ಲೈ ಓವರ್ ಸಮೀಪದ ಹುಚ್ಚರಾಯ ಕಾಲೋನಿ ಬಳಿ, ಬೆಂಗಳೂರು – ತಾಳಗುಪ್ಪ ಇಂಟರ್ ಸಿಟಿ ರೈಲಿಗೆ ಆಕಳುಗಳು ಸಿಲುಕಿ ಬಿದ್ದ ಪರಿಣಾಮ, ಸುಮಾರು ಒಂದು ಗಂಟೆ ಕಾಲ ರೈಲು ಸಂಚಾರ ಸ್ಥಗಿತಗೊಂಡ ಘಟನೆ ಅಕ್ಟೋಬರ್ 14 ರ ಸಂಜೆ ನಡೆದಿದೆ.
ಲಭ್ಯ ಮಾಹಿತಿ ಅನುಸಾರ, ಸದರಿ ರೈಲು ಶಿವಮೊಗ್ಗ ಮುಖ್ಯ ರೈಲ್ವೆ ನಿಲ್ದಾಣದಿಂದ ತಾಳಗುಪ್ಪಕ್ಕೆ ತೆರಳುತ್ತಿದ್ದ ವೇಳೆ ಸಂಜೆ 7.25 ಗಂಟೆ ವೇಳೆಗೆ ಹುಚ್ಚರಾಯ ಕಾಲೋನಿ ಬಳಿ ಸುಮಾರು 3-4 ಆಕಳುಗಳಿಗೆ ರೈಲು ಡಿಕ್ಕಿ ಹೊಡೆದಿತ್ತು. ಇದರಲ್ಲಿ ಕೆಲ ಆಕಳುಗಳ ಮೃತದೇಹ ರೈಲು ಚಕ್ರಕ್ಕೆ ಸಿಲುಕಿ ಬಿದ್ದಿದ್ದವು.
ಈ ಕಾರಣದಿಂದ ರೈಲು ಸಂಚಾರವನ್ನು ಕೆಲ ಸಮಯ ಸ್ಥಗಿತಗೊಳಿಸಲಾಗಿತ್ತು. ಚಕ್ರಕ್ಕೆ ಸಿಲುಕಿದ್ದ ಆಕಳುಗಳ ಮೃತದೇಹವನ್ನು ಹೊರ ತೆಗೆಯಲು ರೈಲ್ವೆ ಸಿಬ್ಬಂದಿಗಳು ಹರಸಾಹಸ ಪಡುವಂತಾಯಿತು.
ಕತ್ತಲೆ ಕವಿದಿದ್ದ ಕಾರಣದಿಂದ ಆಕಳುಗಳ ಮೃತ ದೇಹವನ್ನು ರೈಲ್ವೆ ಅಳಿಯಿಂದ ಹೊರಹಾಕಲು ಸಿಬ್ಬಂದಿಗಳು ಸಾಕಷ್ಟು ಶ್ರಮ ಪಡುವಂತಾಯಿತು. ಸ್ಥಳಕ್ಕೆ ರೈಲ್ವೆ ಪೊಲೀಸ್ ಠಾಣೆ ಸಿಬ್ಬಂದಿಗಳು ಕೂಡ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಅಂತಿಮವಾಗಿ ರೈಲ್ವೆ ಚಕ್ರಕ್ಕೆ ಸಿಲುಕಿದ್ದ ಆಕಳುಗಳ ಮೃತ ದೇಹಗಳನ್ನು ಹೊರ ತೆಗೆದು, ಸಂಜೆ ಸರಿಸುಮಾರು 8.25 ರ ಸುಮಾರಿಗೆ ರೈಲು ಸಂಚಾರ ಪುನಾರಾರಂಭಗೊಂಡಿತು.
Cows hit by a train near Huchcharaya Colony, Shivamogga: Train services halted for over half an hour!

