kuvempu university news | ಡಿಜಿಟಲ್ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿಲ್ಲ : ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ

Kuvempu University

ಶಿವಮೊಗ್ಗ (ಶಂಕರಘಟ್ಟ), ನವೆಂಬರ್ 28: ಡಿಜಿಟಲ್ ಮೌಲ್ಯಮಾಪನ ಮತ್ತು ಪರೀಕ್ಷಾ ಪ್ರಕ್ರಿಯೆ ಕುರಿತು ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಕೆಲವು ಗೊಂದಲಗಳಿಗೆ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ ಪ್ರತಿಕ್ರಿಯಿಸಿದ್ದು, ಸರ್ಕಾರದ ನಿರ್ದೇಶನದಂತೆಯೇ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಕೆಪಿಪಿಪಿ ಪೋರ್ಟಲ್ ಮೂಲಕ ನಿಗದಿತ ಎಲ್ಲ ಟೆಂಡರ್ ಪ್ರಕ್ರಿಯೆಗಳನ್ನು ಪಾಲಿಸಿ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, ಇತರೆ ವಿಶ್ವವಿದ್ಯಾಲಯಗಳ ಸಮಾನ ಸೇವೆಗಳ ದರಗಳಿಗೆ ಹೋಲಿಸಿದರೆ, ಟೆಂಡರ್ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಕುವೆಂಪು ವಿವಿಯ ದರ ಬಹಳ ಕಡಿಮೆಯಾಗಿದೆ. ಈ ದರದಲ್ಲಿಯೇ ಮೌಲ್ಯಮಾಪನಕ್ಕೆ ಅಗತ್ಯವಾದ ಕಂಪ್ಯೂಟರ್ ಗಳು ಮತ್ತು ಪೂರಕ ವ್ಯವಸ್ಥೆಗಳನ್ನು ಒದಗಿಸುವ ಜವಾಬ್ದಾರಿಯೂ ಸೇವಾ ಪೂರೈಕೆದಾರರದ್ದಾಗಿದೆ.

“ಡಿಜಿಟಲ್ ವ್ಯವ್ಥೆಯಲ್ಲಿಯೇ ಈಗಾಗಲೇ ಸ್ನಾತಕ ಪದವಿಗಳ ನಾಲ್ಕು ಪರೀಕ್ಷೆಗಳ ಮೌಲ್ಯಮಾಪನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಇತ್ತೀಚೆಗೆ ಸತತ ಎರಡನೆಯ ಬಾರಿಗೆ ವಿಶ್ವವಿದ್ಯಾಲಯವು ನ್ಯಾಕ್ ‘ಎ’ ಶ್ರೇಣಿ ಪಡೆಯುವಲ್ಲಿಯೂ ಡಿಜಿಟಲ್ ಮೌಲ್ಯಮಾಪನ  ಸಹಕಾರಿಯಾಗಿದೆ. ಡಿಜಿಟಲ್ ಮೌಲ್ಯಮಾಪನ ಒಂದು ಪಾರದರ್ಶಕ ಮತ್ತು ಸಮರ್ಥವಾದ ವ್ಯವಸ್ಥೆಯಾಗಿದ್ದು, ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳು ನಡೆದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಆದರೂ ಸಾರ್ವಜನಿಕ ವಲಯದಲ್ಲಿ ಕೆಲವು ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಹೊರೆ ಉಂಟಾಗಿದೆಯೇ ಎಂಬುದನ್ನು ಪರಿಶೀಲಿಸಲು ಸಿಂಡಿಕೇಟ್ ನಿರ್ಣಯದಂತೆ ಸರ್ಕಾರಿ ಲೆಕ್ಕಪರಿಶೋಧನಾ ಕಾರ್ಯ ನಿರ್ವಹಿಸುವ ಚಾರ್ಟರ್ಡ್ ಅಕೌಂಟೆಂಟ್ ರನ್ನು  ನೇಮಿಸಲಾಗಿದೆ. ಸಂಬಂಧಿತ ಆದಾಯ ಮತ್ತು ವೆಚ್ಚಗಳ ಲೆಕ್ಕಪರಿಶೋಧನೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಯುಯುಸಿಎಂಎಸ್ ಮತ್ತು ಫಲಿತಾಂಶದ ಸಮಸ್ಯೆಗಳ ಪರಿಹಾರ: ಸರ್ಕಾರದ ನಿರ್ದೇಶನದಂತೆ ರಾಜ್ಯದ ಇತರೆ  ವಿಶ್ವವಿದ್ಯಾಲಯಗಳಲ್ಲಿ ಜಾರಿಯಲ್ಲಿರುವ ಹಾಗೆ ಕುವೆಂಪು ವಿವಿಯಲ್ಲಿಯೂ ಕೂಡ ಯುಯುಸಿಎಂಎಸ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಅರ್ಜಿ, ಪಠ್ಯಕ್ರಮದ ಸಂಕೇತಗಳ ನಮೂದು, ಪರೀಕ್ಷೆ ಮತ್ತು ಹಾಜರಾತಿ, ದಾಖಲಾತಿ ಹಾಗೂ ಆಂತರಿಕ ಅಂಕಗಳ ಅಪ್‌ಲೋಡ್ ಸಂಬಂಧಿತ ಕಾಲೇಜುಗಳ ಹಂತದಲ್ಲಿಯೇ ನಡೆಯುತ್ತವೆ. ಮಾಹಿತಿ ನಮೂದು ಅಥವಾ ಅಪ್‌ಲೋಡ್ ದೋಷಗಳಿಂದ ಫಲಿತಾಂಶದಲ್ಲಿ ಕಂಡುಬರುವ ಸಮಸ್ಯೆಗಳನ್ನು ರಾಜ್ಯ ಯುಯುಸಿಎಂಎಸ್ ಕೇಂದ್ರದ ಸಹಯೋಗದಲ್ಲಿ ಆದ್ಯತೆಯ ಮೇರೆಗೆ ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪಿ.ಜಿ., ಪಿಎಚ್.ಡಿ. ಪ್ರವೇಶಾತಿ ಮತ್ತು ಶುಲ್ಕ: ಪಿ.ಜಿ. ಮತ್ತು ಪಿಎಚ್.ಡಿ. ಪ್ರವೇಶಾತಿಯನ್ನು ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಪ್ರವೇಶಾತಿ, ಪರೀಕ್ಷೆ ಮತ್ತು ಮೌಲ್ಯಮಾಪನ ಶುಲ್ಕಗಳನ್ನು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಸಂಬಂಧಿತ ಆದೇಶಗಳ ಅನುಸಾರ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

No Irregularities in Digital Evaluation: Prof. R. Thimmarayappa, Registrar (Evaluation), Kuvempu University | Shankaraghatta, November 28: Addressing concerns raised in the public domain regarding the digital evaluation and examination process, Prof. R. Thimmarayappa, Registrar (Evaluation) of Kuvempu University, clarified that the digital evaluation system was implemented in accordance with government directives. He further stated that the service provider was selected by adhering to all prescribed tender procedures through the KPPP (Karnataka Public Procurement Portal).

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *