‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜು.20 ರೊಳಗೆ ಸಕಲ ಸೌಲಭ್ಯ – ಆ.11 ರಿಂದ ವಿಮಾನ ಹಾರಾಟ’ : ಸಚಿವ ಎಂ.ಬಿ.ಪಾಟೀಲ್

‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜು. 20 ರೊಳಗೆ ಸಕಲ ಸೌಲಭ್ಯ - ಆ. 11 ರಿಂದ ವಿಮಾನ ಹಾರಾಟ’ : ಸಚಿವ ಎಂ.ಬಿ.ಪಾಟೀಲ್ ರಾಜ್ಯ ಸರ್ಕಾರದಿಂದ ಕಾರ್ಯಾಚರಣೆ – ನಿರ್ವಹಣೆಗೊಳ್ಳಲಿರುವ ಮೊದಲ ಏರ್ ಪೋರ್ಟ್

ರಾಜ್ಯ ಸರ್ಕಾರದಿಂದ ಕಾರ್ಯಾಚರಣೆ – ನಿರ್ವಹಣೆಗೊಳ್ಳಲಿರುವ ಮೊದಲ ಏರ್ ಪೋರ್ಟ್

ಬೆಂಗಳೂರು, ಜು. 13: ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 11 ರಿಂದ ಕಾರ್ಯಾಚರಣೆಗೊಳ್ಳುವ ಸಾಧ್ಯತೆ ಇದ್ದು, ಇದಕ್ಕೆ ಮುಂಚಿತವಾಗಿ ಜು. 20 ರೊಳಗೆ ಬೇಕಿರುವ ಎಲ್ಲಾ ವ್ಯವಸ್ಥೆಗಳನ್ನು  ಮಾಡಲಾಗುವುದು ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ರಾಜ್ಯದ ಹೊಸ ವಿಮಾನ ನಿಲ್ದಾಣಗಳ ಕಾಮಗಾರಿ ಪ್ರಗತಿ ಮತ್ತಿತರ ವಿಷಯಗಳ ಬಗ್ಗೆ ಸಭೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಂಬುಲೆನ್ಸ್ ಮತ್ತು ಇತರೆ ಅಗತ್ಯ ವಾಹನಗಳನ್ನು ನಿಯೋಜಿಸುವ ಕೆಲಸ ಆಗಬೇಕಾಗಿದೆ. ಕಾಫಿ ಕೆಫೆ ಆರಂಭಿಸುವ ಸಂಬಂಧದ ಕೆಲಸವೂ ನಡೆಯಬೇಕಾಗಿದೆ. ಜೊತೆಗೆ, ಕೆಲವು ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ನೇಮಕವಾಗಬೇಕಾಗಿದೆ. ಇವೆಲ್ಲವನ್ನೂ ಜುಲೈ 20 ರ ಹೊತ್ತಿಗೆ ಪೂರೈಸಿ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗುವುದು ಎಂದು ವಿವರಿಸಿದರು.

ಕೇಂದ್ರ ನಾಗರಿಕ ವಿಮಾನ ನಿರ್ದೇಶನಾಲಯವು ಇಲ್ಲಿನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್ಐಐಡಿಸಿ) ವಹಿಸಿದೆ. ಇದರೊಂದಿಗೆ ಶಿವಮೊಗ್ಗ ನಿಲ್ದಾಣವು ರಾಜ್ಯ ಸರ್ಕಾರದ ಸಂಸ್ಥೆಯವತಿಯಿಂದ ನಡೆಯಲಿರುವ ಕರ್ನಾಟಕದ ಮೊದಲನೇ ವಿಮಾನ ನಿಲ್ದಾಣವಾಗಲಿದೆ ಎಂದು ಪಾಟೀಲ ಹೇಳಿದರು.

ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಶಿವಮೊಗ್ಗ ಏರ್ ಪೋರ್ಟ್ ನಲ್ಲಿ 20 ವಿಮಾನಗಳು ಬಂದಿಳಿದಿವೆ. ಇದರಿಂದಾಗಿ 12 ಲಕ್ಷ ರೂ. ಆದಾಯ ಬಂದಿದೆ ಎಂದರು.

ಆ.11 ರಂದು ನಿಲ್ದಾಣ ಕಾರ್ಯಾರಂಭಗೊಳಲಿದ್ದು, ಅಂದು ಮೊದಲ ವಿಮಾನ‌ ಹಾರಾಟ ನಡೆಸಲಿದೆ. ಈ ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಗಲು ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಜನಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಯೋಜನೆಯಂತೆ ನಡೆದರೆ ಆ.11ರಂದು ಬೆಂಗಳೂರಿನಿಂದ ಹೊರಡುವ ವಿಮಾನವು ಶಿವಮೊಗ್ಗ ನಿಲ್ದಾಣದಲ್ಲಿ ಇಳಿಯಲಿದೆ ಎಂದರು.

ವಿಜಯಪುರ ಏರ್ ಪೋರ್ಟ್ : ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆಗೆ ಸೂಚನೆ

*** ನಿರ್ಮಾಣ ಹಂತದ ವಿಜಯಪುರ ವಿಮಾನ ನಿಲ್ದಾಣದಲ್ಲಿ ರಾತ್ರಿ  ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸದಿರುವ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಅವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಆ ಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ನಿಲ್ದಾಣದ ಮೂಲಯೋಜನೆಯಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯ ಸೇರಿರಲಿಲ್ಲ. ಈ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲು 12 ಕೋಟಿ ರೂ. ಹೆಚ್ಚುವರಿಯಾಗಿ ಬೇಕಾಗುತ್ತದೆ. ಇದುವರೆಗೆ ಸುಮಾರು 350 ಕೋಟಿ ರೂ. ಖರ್ಚಾಗಿದೆ.

ರನ್ ವೇ ಪೂರ್ಣಗೊಂಡಿದ್ದು ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಕೆಲಸಗಳೆಲ್ಲ ಮೂರು ತಿಂಗಳಲ್ಲಿ ಮುಗಿಯಲಿವೆ. ಕೆಲವು ಉಪಕರಣಗಳ ಅಳವಡಿಕೆ ಮಾತ್ರ ಬಾಕಿ ಇದೆ ಎಂದರು. ನಿರ್ಮಾಣ ಹಂತದಲ್ಲಿರುವ ಹಾಸನ, ರಾಯಚೂರು ಮತ್ತು ಕಾರವಾರ ವಿಮಾನ ನಿಲ್ದಾಣಗಳ ಕಾರ್ಯ ಪ್ರಗತಿ ಪರಿಶೀಲಿಸಿದರು. ರಾಜ್ಯ ಬಜೆಟ್ ನಲ್ಲಿ ಘೋಷಣೆಗೊಂಡ ಧರ್ಮಸ್ಥಳ, ಕೊಡಗು ಮತ್ತು ಚಿಕ್ಕಮಗಳೂರು  ಏರ್ ಸ್ಟ್ರಿಪ್ ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆಯೂ ಚರ್ಚೆ ನಡೆಸಿದರು. ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ ಗುಪ್ತ, ಕೆಎಸ್ಐಐಡಿಸಿ  ವ್ಮವಸ್ಥಾಪಕ ನಿರ್ದೇಶಕ ಎಂ.ಆರ್.ರವಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಈ ಸಂದರ್ಭದಲ್ಲಿ ಇದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *