ಹಿಂದಿನ ವರ್ಷಗಳ ಅನುಭವದಿಂದ ಜೀವಹಾನಿ ತಪ್ಪಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಹಿಂದಿನ ವರ್ಷಗಳ ಅನುಭವದಿಂದ ಜೀವಹಾನಿ ತಪ್ಪಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜು. 26: ಹಿಂದಿನ ಪ್ರವಾಹದ  ಅನುಭವದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಜೀವಹಾನಿ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. 

ಅವರು ಇಂದು  ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿ ಚಟುವಟಿಕೆಗಳಿಗೆ  ಸಂಬಂಧಿಸಿದಂತೆ   ಪರಿಶೀಲಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದರು.

ಹಿಂದಿನ ವರ್ಷಗಳ ಅನುಭವದಿಂದ ಜೀವಹಾನಿ ತಪ್ಪಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರವಾಹ ಬಂದಾಗ ಬಹಳ ರೈತರನ್ನು ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಅದಕ್ಕೆ ಪ್ರವಾಹದ ಮುನ್ಸೂಚನೆ ಬಂದ ಕೂಡಲೇ ಸ್ಥಳಾಂತರಕ್ಕೆ ಕ್ರಮ ವಹಿಸಿ.  ಹಿಂದಿನ ಸರ್ಕಾರದ ವತಿಯಿಂದ ಪರ್ಯಾಯವಾಗಿ ಕಟ್ಟಲಾಗಿರುವ ಮನೆಗಳು ಯಾರೂ ವಾಸ ಮಾಡಲು ಕೂಡ ಯೋಗ್ಯವಲ್ಲ ಎನ್ನುವ ದೂರುಗಳು ಜನರಿಂದ ವ್ಯಾಪಕವಾಗಿ ಬರುತ್ತಿವೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳ ಕಡೆಗೆ ಹೆಚ್ಚು ಒತ್ತು ನೀಡಿ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು. 

ಅನಾಹುತಗಳನ್ನು ತಪ್ಪಿಸಲು ಹೆಚ್ಚಿನ ಗಮನ ನೀಡಬೇಕು.  ಜಿಲ್ಲಾಧಿಕಾರಿಗಳು ಪದೇ ಪದೇ ಪ್ರವಾಹವಾಗುವ ಸ್ಥಳಗಳಲ್ಲಿ ಜನರಿಗೆ ಮನವರಿಕೆ ಮಾಡಿ ಸ್ಥಳಾಂತರ ಮಾಡಿ ಜೀವಹಾನಿ ತಪ್ಪಿಸಬೇಕು ಎಂದು ಸೂಚಿಸಿದರು. 

ನೆರೆ ಬಂದು ನೀರು ಹೆಚ್ಚಾದರೆ ಅದರ ಬಳಿ ಜನರು ಹೋಗದಂತೆ ಜಿಲ್ಲಾಡಳಿತ ಕ್ರಮ ವಹಿಸಲು ಸೂಚಿಸಿದರು.  ಜನರಿಗೆ ಈ ಬಗ್ಗೆ  ಎಚ್ಚರಿಕೆ ನೀಡುವುದು  ಹಾಗೂ ಅರಿವು ಮೂಡಿಸುವ ಕೆಲಸ ಮಾಡಿ ಪ್ರಾಣಹಾನಿಯನ್ನು ತಪ್ಪಿಸಬೇಕು ಎಂದರು. 

ಭೂ ಕುಸಿತದ ಸಾಧ್ಯತೆ ಮೊದಲೇ ಗೊತ್ತಿರುತ್ತದೆ

ಭೂ ಕುಸಿತ ಆಗಬಹುದಾದ ಸ್ಥಳಗಳ ಬಗ್ಗೆ ಒಂದು ಹಂತಕ್ಕೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇರುತ್ತದೆ. ಪೊಲೀಸ್, ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮಧ್ಯೆ ಸಮನ್ವಯವಿದ್ದರೆ ಸಾಕಷ್ಟು ಜೀವಹಾನಿ ತಪ್ಪಿಸಬಹುದು. ಮಣ್ಣು ಕುಸಿತವಾಗುವ ಸ್ಥಳಗಳ ಬಗ್ಗೆ ಇಲಾಖೆಗಳಿಗೆ ಮಾಹಿತಿ ಇರುತ್ತದೆ. ಕಾಳಜಿಯಿಂದ ವರ್ತಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಹಿಂದಿನ ವರ್ಷಗಳ ಅನುಭವದಿಂದ ಜೀವಹಾನಿ ತಪ್ಪಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಉಡುಪಿ ಜಿಲ್ಲೆಯಲ್ಲಿ ಬಹಳ ಮೊದಲೇ ವಾರ್ ರೂಂಗಳನ್ನು ತೆಗೆಯಲಾಗಿತ್ತು. ಇದರಿಂದ ಸಾಕಷ್ಟು ಅನಾಹುತಗಳನ್ನು ತಪ್ಪಿಸಿದ್ದೇವೆ. ಆದರೆ ಕೈ ಸಂಕದಿಂದ ಹಾಗೂ ಇತರೆ ಮಳೆ ಅಪಘಾತಗಳಿಂದ 9 ಸಾವು ಸಂಭವಿಸಿದೆ ಎಂದು ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ವೇಳೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಮುಂಜಾಗ್ರತಾ ಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿಗಳು ಇದೇ ಕ್ರಮ ಎಲ್ಲಾ ಜಿಲ್ಲೆಗಳಲ್ಲೂ ಅಗತ್ಯ ಎಂದರು. 

ಜನವರಿ ಒಂದರಿಂದ ಜುಲೈ 25 ರವರೆಗೆ 64 ಜನ ಮರಣಹೊಂದಿದ್ದಾರೆ. ಇವರಿಗೆ ತುರ್ತಾಗಿ ಪರಿಹಾರ ಒದಗಿಸಲಾಗಿದೆ. ಆದರೆ ಜಿಲ್ಲಾಡಳಿತ ಅಲರ್ಟ್ ಆಗಿದ್ದರೆ ಈ ಅನಾಹುತಗಳಲ್ಲಿ ಸಾಕಷ್ಟನ್ನು ತಪ್ಪಿಸಬಹುದಿತ್ತಲ್ಲವೇ ಎಂದು ಜಿಲ್ಕಾಧಿಕಾರಿಗಳಿಗೆ ಪ್ರಶ್ನಿಸಿದರು.        

ಸಂಬಂಧಪಟ್ಟ ಅಧಿಕಾರಿಗಳು ಮಳೆ ಸಾಧ್ಯತೆ, ಮಳೆಯ ಬಿರುಸಿನ ಬಗ್ಗೆ ಪ್ರತಿದಿನ ಪತ್ರಿಕಾ ಗೋಷ್ಠಿ ನಡೆಸಬೇಕು. ಕಾಲು ಜಾರುವ ಕಡೆಗಳಲ್ಲಿ ಹೋಗಬಾರದು, ತುಂಬಿ ಹರಿವ ನದಿಗಳನ್ನು ಹಾಯಬಾರದು  ಎಂದು ಸೂಚಿಸಬೇಕು.  ಸಾವು ತಡೆಗಟ್ಟಲು ಹೆಚ್ಚಿನ ಶ್ರಮವಹಿಸಬೇಕು ಎಂದರು.

ಅಂಗನವಾಡಿ, ಶಾಲಾ ಕಟ್ಟಡಗಳು, ಆಸ್ಪತ್ರೆಗಳ ಕಟ್ಟಡ ಶಿಥಿಲ ಆಗಿವೆ ಎನ್ನುವ ಮಾಹಿತಿ ಮೊದಲೇ ಗೊತ್ತಿರುತ್ತದೆ. ಯಾವ ಕಟ್ಟಡಗಳಲ್ಲಿ ಸೋರಿಕೆ ಆಗುತ್ತಿದೆ ಎನ್ನುವ ಮಾಹಿತಿಯೂ ಮೊದಲೇ ಗೊತ್ತಿರುತ್ತದೆ. ದುರಸ್ತಿ, ಸ್ಥಳಾಂತರ, ರಿಪೇರಿಗೆ ಸಾಕಷ್ಟು ಹಣ ಮೀಸಲಿಟ್ಟಿದ್ದರೂ ಈ ಬಗ್ಗೆ ಮೊದಲೇ ಕ್ರಮ ಏಕೆ ಕೈಗೊಳ್ಳುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿಗಳು ಇಂತಹ ಉದಾಸೀನ ಮತ್ತು ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಎಚ್ಚರಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ  ಜಿ.ಪರಮೇಶ್ವರ್, ಚೆಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಎಂ.ಸಿ.ಸುಧಾಕರ್, ಲಕ್ಷ್ಮಿ ಹೆಬ್ಬಾಳ್ಕರ್, ಪ್ರಿಯಾಂಕ ಖರ್ಗೆ,ಈಶ್ವರ್ ಖಂಡ್ರೆ,  ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ,  ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ , ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿವಮೊಗ್ಗ ಡಿಸಿ – ಸಿಇಓ ಮಾಹಿತಿ

ವೀಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಮಾಲೋಚನೆ ವೇಳೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ವರ್ಷಗಳ ಅನುಭವದಿಂದ ಜೀವಹಾನಿ ತಪ್ಪಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಅಪಾಯ ಮಟ್ಟದಲ್ಲಿ ನದಿ ಹಾಗೂ ಜಲಾಶಯದ ಹರಿವು ಇರುವುದಿಲ್ಲ. ಲಿಂಗನಮಕ್ಕಿ ಜಲಾಶಯದಲ್ಲಿ 1778.9 ಅಡಿ ನೀರು ಸಂಗ್ರಹವಾಗಿದೆ. ಭದ್ರಾ ಜಲಾಶಯದಲ್ಲಿ 152.9 ಅಡಿ ನೀರು ಇದೆ. ಮನೆ ಹಾನಿ ಮತ್ತು ಜಾನುವಾರು ಹಾನಿಗೆ ಸಂಬಂಧಿದಂತೆ ಪರಿಹಾರ ನೀಡಲಾಗಿದೆ. ಹಾಗೂ ಮಳೆ ಹಾನಿ/ಅವಘಡಗಳ ಕುರಿತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತ್ತೀಚೆಗೆ ತುಂಗಾ ನದಿಯಲ್ಲಿ ಈಜುತ್ತಿದ್ದ ವ್ಯಕ್ತಿಯನ್ನು ಹಿಡಿದು ಸೂಕ್ತ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಇದೇ ವೇಳೆ ಶರಾವತಿ ಹಿನ್ನೀರು ಸಂತ್ರಸ್ತರ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು. ಈ ಕುರಿತು ತಾವು ಕಂದಾಯ, ನೀರಾವರಿ, ಅರಣ್ಯ ಇತರೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ವಹಿಸುವುದಾಗಿ ಸಿಎಂ ತಿಳಿಸಿದ್ದಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →