
bengaluru | mla munirathna | ಬೆಂಗಳೂರು : ಶಾಸಕ ಮುನಿರತ್ನ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ!
ಬೆಂಗಳೂರು (bengaluru), ಸೆ. 15: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ (bjp mla munirathna) ಅವರನ್ನು ಎರಡು ದಿನಗಳ ಕಾಲ ಪೊಲೀಸ್ ವಶ (police custody) ಕ್ಕೊಪ್ಪಿಸಿ 82 ನೇ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೆದರಿಕೆ, ಹಲ್ಲೆ, ಕಿರುಕುಳ ಹಾಗೂ ಜಾತಿ ನಿಂದನೆ ಮಾಡಿರುವ ಆರೋಪದಡಿ, ಶಾಸಕ ಮುನಿರತ್ನ ಅವರ ವಿರುದ್ದ ಎರಡು ಪ್ರತ್ಯೇಕ ದೂರುಗಳು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು.
ಕೇಸ್ ದಾಖಲಾದ ಬೆನ್ನಲ್ಲೇ, ಬೆಂಗಳೂರು ಪೊಲೀಸರು (bengaluru police) ಸೆ. 14 ರ ಶನಿವಾರ ಕೋಲಾರ (kolar) ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಬಳಿ ಮುನಿರತ್ನ ಅವರನ್ನು ಬಂಧಿಸಿದ್ದರು.
ನಿಯಮಾನುಸಾರ ಮುನಿರತ್ನ ಅವರನ್ನು ಶನಿವಾರ ರಾತ್ರಿಯೇ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿದ್ದರು. ಬಳಿಕ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಒಂದು ವಾರಗಳ ಕಾಲ ಮುನಿರತ್ನ ಅವರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಬಿಬಿಎಂಪಿ ಗುತ್ತಿಗೆದಾರ ಚಲುವರಾಜು (bbmp contractor chaluvaraju) ಅವರಿಗೆ ಮುನಿರತ್ನ ಅವರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋ ವೈರಲ್ (viral audio) ಆಗಿತ್ತು. ಇದರ ಬೆನ್ನಲ್ಲೇ, ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಮುನಿರತ್ನ ವಿರುದ್ದ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಎರಡು ಪ್ರತ್ಯೇಕ ಎಫ್.ಐ.ಆರ್ (FIR) ಗಳು ದಾಖಲಾಗಿದ್ದವು.
ಬಿಬಿಎಂಪಿ ಗುತ್ತಿಗೆದಾರ ಚಲುವರಾಜ ಅವರು ಪೊಲೀಸರಿಗೆ ದಾಖಲಿಸಿದ ದೂರಿನಲ್ಲಿ, ಮುನಿರತ್ನ ಅವರು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಹಣ ಕೊಡದಿದ್ದರೆ ಗುತ್ತಿಗೆ ರದ್ದುಪಡಿಸುವ ಬೆದರಿಕೆ ಹಾಕಿದ್ದರು. ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಅವ್ಯಾಚ್ಯವಾಗಿ ನಿಂದಿಸಿ, ದೈಹಿಕ ಹಲ್ಲೆ ಕೂಡ ನಡೆಸಿದ್ದಾರೆ ಎಂಬಿತ್ಯಾದಿಯಾಗಿ ಆರೋಪಿಸಿದ್ದಾರೆ. ಮತ್ತೊಂದೆಡೆ, ಬಿಬಿಎಂಪಿ ಕಾರ್ಪೋರೇಟರ್ ಓರ್ವರು ನೀಡಿದ ದೂರಿನ ಆಧಾರದ ಮೇಲೆ ಜಾತಿ ನಿಂದನೆಯ ಪ್ರಕರಣ ಕೂಡ ಮುನಿರತ್ನ ವಿರುದ್ದ ದಾಖಲಾಗಿತ್ತು.