shimoga news | ಶಿವಮೊಗ್ಗ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವಿಳಂಬಕ್ಕೆ ಸಂಸದರು ಗರಂ – ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್!

Shivamogga, August 29: Shivamogga Lok Sabha member B.Y. Raghavendra held a progress review meeting with officials of the National Highways Authority and various departments at the District Collector's Hall on August 29 to review the progress and implementation of various national highway works underway in the Shivamogga Lok Sabha constituency.

ಶಿವಮೊಗ್ಗ (shivamogga), ಆಗಸ್ಟ್ 29 :ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತಂತೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರು ಆಗಸ್ಟ್ 29 ರಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹಾಗೂ ಮಂಜೂರಾಗಿರುವ ವಿವಿಧ 12 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಿದರು.

ಕಾಮಗಾರಿಗಳ ಅನುಷ್ಠಾನದಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಭೂ ದಾಖಲೆಗಳ ಸರ್ವೆ ಇಲಾಖೆ, ತೋಟಗಾರಿಕೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ನಡುವೆ ನಿರೀಕ್ಷಿತ ಮಟ್ಟದಲ್ಲಿ ಸಮನ್ವಯತೆ ಇಲ್ಲದಿರುವುದರಿಂದ ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕಾದ ಕಾಮಗಾರಿಗಳು ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ಪಾವತಿ, ಜಂಟಿ ಸರ್ವೆ ವರದಿ, ಅರಣ್ಯ ಭೂಮಿ ವರ್ಗಾವಣೆ ಹಾಗೂ ಅನುಮತಿ, ಮರಗಳ ತೆರವು, ಸ್ಥಳಾಂತರಿಸಬೇಕಾದ ಕಟ್ಟಡಗಳು ಮತ್ತು ಇತರೆ ಇಲಾಖೆಗಳ ಅನುಮತಿಗಳ ಕಾರಣದಿಂದ ಸ್ಥಗಿತಗೊಳ್ಳುತ್ತಿರುವುದು ಸಭೆಯಲ್ಲಿ ಗಮನಕ್ಕೆ ಬಂದಿತು.

ಭೂಸ್ವಾದೀನ ತ್ವರಿತಕ್ಕೆ ಸೂಚನೆ : ರಾಷ್ಟ್ರೀಯ ಹೆದ್ದಾರಿ-206 ರ ತುಮಕೂರು–ಶಿವಮೊಗ್ಗ ನಾಲ್ಕು ಪಥದ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಎಂ.ಸಿ.ಹಳ್ಳಿ, ಕಾರೇಹಳ್ಳಿ ಟವರ್ ಪ್ರದೇಶ ಹಾಗೂ ಮಲವಗೊಪ್ಪ ಭಾಗದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಕಾಮಗಾರಿಗೆ ಅಡಚಣೆಯಾಗುತ್ತಿರುವ ಬಗ್ಗೆ ಚರ್ಚಿಸಲಾಯಿತು. ಈ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ ಕಾಮಗಾರಿಗೆ ಅಗತ್ಯವಿರುವ ಜಾಗವನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಶಿವಮೊಗ್ಗ–ಮಂಗಳೂರು ರಾಷ್ಟ್ರೀಯ ಹೆದ್ದಾರಿ-169 ರ ವಿವಿಧ ಭಾಗಗಳಲ್ಲಿಯೂ ಬಾಕಿ ಇರುವ ಭೂಸ್ವಾಧೀನ ಪ್ರಕರಣಗಳಿಗೆ ಪರಿಹಾರ ಪಾವತಿಸಿ ಕಾಮಗಾರಿ ಸ್ಥಳವನ್ನು ಹಸ್ತಾಂತರಿಸುವಂತೆ ಸೂಚಿಸಲಾಯಿತು. ಶಿವಮೊಗ್ಗ ನಗರ ವ್ಯಾಪ್ತಿಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಬಾಕಿ ಇರುವ ಫಲಾನುಭವಿಗಳ ಪರಿಹಾರ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಶಿಕಾರಿಪುರ ಬೈಪಾಸ್ : ರಾಷ್ಟ್ರೀಯ ಹೆದ್ದಾರಿ-766 ಸಿ ಬೈಂದೂರು–ರಾಣೇಬೆನ್ನೂರು ರಸ್ತೆಯ ಶಿಕಾರಿಪುರ ಬೈಪಾಸ್ ಕಾಮಗಾರಿಗೆ ಸಂಬಂಧಿಸಿದಂತೆ ಬಾಕಿ ಇರುವ ಭೂಸ್ವಾಧೀನ ಪ್ರಕರಣಗಳು, ಜಂಟಿ ಸರ್ವೆ ಹಾಗೂ ಪರಿಹಾರ ಪಾವತಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಸೂಚಿಸಲಾಯಿತು. ಗಬ್ಬೂರು ಗ್ರಾಮದ ಸರ್ವೆ ನಂ.58ಕ್ಕೆ ಸಂಬಂಧಿಸಿದ ಜಂಟಿ ಸರ್ವೆ ವರದಿ ಹಾಗೂ ಬಾಕಿ ಇರುವ ಪರಿಹಾರ ಪ್ರಕರಣಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಇದೇ ಹೆದ್ದಾರಿಯ ಬೈಂದೂರು–ನಿಟ್ಟೂರು ಭಾಗದ 37.85 ಕಿ.ಮೀ.ವರೆಗೆ ದ್ವಿಪಥ ರಸ್ತೆ ಕಾಮಗಾರಿಗೆ ಅರಣ್ಯೇತರ ಪ್ರದೇಶದಲ್ಲಿರುವ ಮರಗಳನ್ನು ತೆರವುಗೊಳಿಸಲು ಅಗತ್ಯ ಅನುಮತಿ, Stage-1 ಅನುಮೋದನೆಗೆ ಸಂಬಂಧಿಸಿದ ಪ್ರಮಾಣಪತ್ರ ಹಾಗೂ ಭೂಮಿ ಹಸ್ತಾಂತರ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

ಅರಣ್ಯ ಇಲಾಖೆಯ ಅನುಮತಿಗಳಿಗೆ ಆದ್ಯತೆ : ರಾಷ್ಟ್ರೀಯ ಹೆದ್ದಾರಿ-169 ಎ ಯ ತೀರ್ಥಹಳ್ಳಿ–ಮಲ್ಪೆ ರಸ್ತೆಯ ಮೇಗರವಳ್ಳಿ–ಆಗುಂಬೆ ಭಾಗದ ಕಾಮಗಾರಿಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ Stage-1 ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ, ಅರಣ್ಯ ಭೂಮಿಯಲ್ಲಿ ಮರ ತೆರವು ಸೇರಿದಂತೆ ಮುಂದಿನ ಪ್ರಕ್ರಿಯೆಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಸಂಬಂಧಪಟ್ಟ ಇಲಾಖೆಗಳು ಅಗತ್ಯ ಹಣ ಪಾವತಿ ಮತ್ತು ದಾಖಲೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂದು ಸಂಸದರು ನಿರ್ದೇಶನ ನೀಡಿದರು.

ಅದೇ ರೀತಿ ಶಿವಮೊಗ್ಗ–ಮಂಗಳೂರು ರಾಷ್ಟ್ರೀಯ ಹೆದ್ದಾರಿ-169ರ ನೆಲ್ಯಾಡಿ–ತೀರ್ಥಹಳ್ಳಿ ಹಾಗೂ ಇತರೆ ಭಾಗಗಳ ಕಾಮಗಾರಿಗಳಿಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಶಿವಮೊಗ್ಗ–ಆನಂದಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ವೇಗ : ರಾಷ್ಟ್ರೀಯ ಹೆದ್ದಾರಿ-206ರ ಶಿವಮೊಗ್ಗ–ಆನಂದಪುರ ಭಾಗದಲ್ಲಿ ಕಿ.ಮೀ. 111.50ರಿಂದ 148.088ರವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸಾಗರ ಮತ್ತು ಶಿವಮೊಗ್ಗ ಉಪವಿಭಾಗಗಳಲ್ಲಿ ಬಾಕಿ ಇರುವ ಭೂಸ್ವಾಧೀನ ಪರಿಹಾರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸೂಚಿಸಲಾಯಿತು.ಬಾಕಿ ಇರುವ ಪ್ರಕರಣಗಳಿಗೆ ಪರಿಹಾರ ಪಾವತಿ, ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಗತ್ಯ ಕ್ರಮ ಹಾಗೂ ಜಂಟಿ ಸರ್ವೆ ವರದಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೂ ತ್ವರಿತ ಕ್ರಮ : ರಾಷ್ಟ್ರೀಯ ಹೆದ್ದಾರಿ-206ರ ತುಮಕೂರು–ಹೊನ್ನಾವರ ರಸ್ತೆಯ ಎಲ್.ಸಿ.110 (ಹೊಸೂರು) ಹಾಗೂ ಎಲ್.ಸಿ.152 (ತಾಳಗುಪ್ಪ) ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕರಣಗಳ ಜಂಟಿ ಸರ್ವೆ ನಕ್ಷೆ, ಪರಿಹಾರ ಪಾವತಿ ಹಾಗೂ ಅರಣ್ಯ ಇಲಾಖೆಯ Stage-1 ಅನುಮೋದನೆ ದೊರೆತಿದ್ದು ಸಂಬಂಧಿಸಿದ ಮುಂದಿನ ಕ್ರಮಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ Stage-1 ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ, ಉಳಿದಿರುವ ಪ್ರಕ್ರಿಯೆಗಳನ್ನು ಒಂದು ದಿನವೂ ವಿಳಂಬವಾಗದಂತೆ ಪೂರ್ಣಗೊಳಿಸಿ ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ಸ್ಥಳವನ್ನು ಹಸ್ತಾಂತರಿಸುವಂತೆ ಸಂಸದರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಟ್ಟುನಿಟ್ಟಿನ ಸೂಚನೆ : ಜನರ ತೆರಿಗೆ ಹಣದಿಂದ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಕೇವಲ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ವಿಳಂಬವಾಗುವುದು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು, ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಭೂಸ್ವಾಧೀನ, ಪರಿಹಾರ ಪಾವತಿ, ಸರ್ವೆ, ಅರಣ್ಯ ಅನುಮತಿ, ಮರಗಳ ತೆರವು, ರೈಲ್ವೆ ಸಂಬಂಧಿತ ಅನುಮತಿಗಳು ಹಾಗೂ ಇತರೆ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಒಂದು ಇಲಾಖೆಯ ಕಡತ ಮತ್ತೊಂದು ಇಲಾಖೆಯಲ್ಲಿ ಬಾಕಿ ಉಳಿಯುವ ಪರಿಸ್ಥಿತಿ ಮರುಕಳಿಸಬಾರದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಇಲಾಖೆಗಳು ಪರಸ್ಪರ ಹೊಣೆಗಾರಿಕೆ ವರ್ಗಾಯಿಸದೆ, ಒಟ್ಟಾಗಿ ಕುಳಿತು ಪರಿಹರಿಸಬೇಕು. ಪ್ರತಿಯೊಂದು ಕಾಮಗಾರಿಗೂ ಸ್ಪಷ್ಟವಾದ ಕಾಲಮಿತಿ ನಿಗದಿಪಡಿಸಿಕೊಂಡು, ಆ ಅವಧಿಯೊಳಗೆ ಪ್ರಗತಿ ಸಾಧಿಸಬೇಕು. ಅಗತ್ಯವಿರುವಲ್ಲಿ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಮನ್ವಯ ಸಭೆಗಳನ್ನು ನಡೆಸಿ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬೇಕು”* ಎಂದು ಸಂಸದರು ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಾರಿಗೆ ಸಂಪರ್ಕ, ಕೈಗಾರಿಕೆ, ಪ್ರವಾಸೋದ್ಯಮ, ಕೃಷಿ ಉತ್ಪನ್ನಗಳ ಸಾಗಣೆ ಹಾಗೂ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆಯಲಿದ್ದು, ಯಾವುದೇ ಕಾರಣಕ್ಕೂ ಆಡಳಿತಾತ್ಮಕ ವಿಳಂಬದಿಂದ ಜನರಿಗೆ ತೊಂದರೆಯಾಗಬಾರದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

Shivamogga, August 29: Shivamogga Lok Sabha member B.Y. Raghavendra held a progress review meeting with officials of the National Highways Authority and various departments at the District Collector’s Hall on August 29 to review the progress and implementation of various national highway works underway in the Shivamogga Lok Sabha constituency.

 

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *