ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೆ. 25 ರಂದು ರಾಜ್ಯಾದ್ಯಂತ ಏಕಕಾಲಕ್ಕೆ ‘ಜನತಾ ದರ್ಶನ..’

ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೆ. 25 ರಂದು ರಾಜ್ಯಾದ್ಯಂತ ಏಕಕಾಲಕ್ಕೆ ‘ಜನತಾ ದರ್ಶನ..’

ಬೆಂಗಳೂರು, ಸೆ. 24: ರಾಜ್ಯದ ಇತಿಹಾದಲ್ಲೇ ಮೊದಲ ಬಾರಿಗೆ ಇಡಿ ರಾಜ್ಯದಾದ್ಯಂತ ಏಕ ಕಾಲಕ್ಕೆ “ಜನತಾ ದರ್ಶನ”ಕ್ಕೆ ನಾಡು ನಾಳೆ ಸಾಕ್ಷಿಯಾಗಲಿದೆ.

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಡೆಯಲಿರುವ ಈ ಅರ್ಥಪೂರ್ಣ ಕಾರ್ಯಕ್ರಮದ ಹೊಣೆಗಾರಿಕೆ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಮೇಲಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳ ಸಮ್ಮುಖದಲ್ಲೇ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಮತ್ತು ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಕಾಳಜಿ ಈ ಜನತಾ ದರ್ಶನದ ಹಿಂದಿದೆ.

ಮುಖ್ಯಮಂತ್ರಿಗಳ ಸೂಚನೆ ಏನು?

ಆಡಳಿತಕ್ಕೆ ಚುರುಕು ಮುಟ್ಟಿಸಿ, ಸರ್ಕಾರಿ ಯಂತ್ರಾಂಗವನ್ನು ಕ್ರಿಯಾಶೀಲಗೊಳಿಸುವ ಪ್ರಯತ್ನವಾಗಿ ನಡೆಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ತು ದಿನಗಳ ಹಿಂದೆ ಒಂದು ಸೂಚನೆ ನೀಡಿದ್ದರು.

“ಜಾತಿ ಪ್ರಮಾಣಪತ್ರ, ಖಾತೆ ಬದಲಾವಣೆ, ಟ್ರಾನ್ಸ್ ಫಾರ್ಮರ್ ರಿಪೇರಿ, ವಿದ್ಯುತ್ ಕಂಬ ಅಳವಡಿಕೆಯಂತಹ ಸಣ್ಣ ಪುಟ್ಟ ಕೆಲಸಗಳಿಗೂ ಜನ ನನ್ನ ಬಳಿಗೆ ಬರುತ್ತಿದ್ದಾರೆ. ನಾನು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಜನರು ಇಷ್ಟು ಸಣ್ಣ ಪುಟ್ಟ ಕೆಲಸಗಳಿಗೂ ನನ್ನನ್ನು ಹುಡುಕಿಕೊಂಡು ಬರುವಂತಾಗಿದೆ ಎಂದರೆ ನೀವುಗಳಿದ್ದೂ ಏನು ಪ್ರಯೋಜನ ಎಂದು ಸಭೆಯಲ್ಲಿ ಪ್ರಶ್ನಿಸಿದ್ದರು. ಬಳಿಕ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲೂ ಜನತಾ ದರ್ಶನ ನಡೆಸಬೇಕು ಎನ್ನುವ ಸೂಚನೆಯನ್ನೂ ನೀಡಿದ್ದರು. ಈ ಸೂಚನೆಯ ಫಲವೇ ಸೆ.25ರ ನಾಳೆ ರಾಜ್ಯದಾದ್ಯಂತ ಏಕ ಕಾಲಕ್ಕೆ ನಡೆಯಲಿರುವ “ಜನತಾ ದರ್ಶನ” ಕಾರ್ಯಕ್ರಮ. ಇದು ನಿಗದಿತವಾಗಿ ನಡೆಯಲಿದೆ.

ಸ್ವರೂಪ ಏನು?

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಜನತಾ ದರ್ಶನ ನಡೆಸುತ್ತಾರೆ. ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿರುತ್ತಾರೆ. ಇವರೆಲ್ಲರ ನಡುವೆ ಸಮನ್ವಯ ಸಾಧಿಸಿ ಜನತಾ ದರ್ಶನ ಅರ್ಥಪೂರ್ಣವಾಗಿ ಮತ್ತು ಫಲಪ್ರದವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಹಿರಿಯ ಐಎಎಸ್ ಅಧಿಕಾರಿಗಳ ಮೇಲೆ ಇರುತ್ತದೆ.

ಪ್ರತಿ ಜಿಲ್ಲೆಯಲ್ಲೂ ಜನತಾ ದರ್ಶನ ನಡೆಯುವ, ನಡೆಸುವ ಬಗ್ಗೆ ಸಾರ್ವಜನಿಕರಿಗೆ ಈಗಾಗಲೇ ತಿಳಿವಳಿಕೆ ನೀಡಲಾಗಿದೆ. ನಿಗದಿತ ಸ್ಥಳದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಜನತಾ ದರ್ಶನ ಆರಂಭವಾಗಬೇಕು ಎನ್ನುವ ಸೂಚನೆ ಸರ್ಕಾರದ ಕಡೆಯಿಂದ ಹೋಗಿದೆ. ಇಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ಈ ಅಹವಾಲುಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಒದಗಿಸುವುದು ಪ್ರಥಮ ಆಧ್ಯತೆಯಾಗಿರುತ್ತದೆ. ತಾಂತ್ರಿಕ ಕಾರಣಗಳಿಂದ ಇದು ಸಾಧ್ಯವಾಗದಿದ್ದರೆ ಸಾರ್ವಜನಿಕರ ಅಹವಾಲುಗಳು ಸ್ಥಳದಲ್ಲೇ ದಾಖಲಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ವರ್ಗಾವಣೆಗೊಳ್ಳುತ್ತವೆ. ಎಲ್ಲದಕ್ಕೂ ಕಾಲ ಮಿತಿಯಲ್ಲಿ ಪರಿಹಾರ ಒದಗಿಸುವ ಮತ್ತು ಸಾರ್ವಜನಿಕರು ನೀಡಿದ ಅಹವಾಲಿನ ಸ್ಥಿತಿಗತಿಯನ್ನು ಅರ್ಜಿದಾರರಿಗೆ ಮನವರಿಕೆ ಮಾಡಿಸುವ ಜವಾಬ್ದಾರಿ ಕೂಡ ಜಿಲ್ಲಾಡಳಿತದ ಮೇಲೆ ಇರುತ್ತದೆ.

 ಸಾರ್ವಜನಿಕರ ಅಹವಾಲು ಎಲ್ಲಿ ದಾಖಲಾಗುತ್ತವೆ?

ಜನತಾ ದರ್ಶನದಲ್ಲಿ ಸಲ್ಲಿಕೆಯಾಗುವ ಸಾರ್ವಜನಿಕರ ಅಹವಾಲುಗಳು ಈಗಾಗಲೇ ಚಾಲ್ತಿಯಲ್ಲಿರುವ “ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಐಪಿಜಿಆರ್‌ಎಸ್-ಇಂಟೆಗ್ರೇಟೆಡ್ ಪಬ್ಲಿಕ್ ಗ್ರಿವಿಯೆನ್ಸ್ ರಿಡ್ರೆಸಲ್ ಸಿಸ್ಟಂ) ತಂತ್ರಾಂಶದಲ್ಲಿ ದಾಖಲಾಗುತ್ತದೆ ಮತ್ತು ಇಲ್ಲಿಂದಲೇ ಸಂಬಂಧಪಟ್ಟ ಇಲಾಖೆಯ ಟೇಬಲ್ಲಿಗೆ ಅರ್ಜಿಗಳ ವಿಲೇವಾರಿಯೂ ನಡೆಯುತ್ತದೆ. ಬಳಿಕ ಕಾಳಜಿ ವಹಿಸಿ ಕಾಲಮಿತಿಯಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎನ್ನುವ ಸೂಚನೆ ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ರವಾನೆಯಾಗಿದೆ.

ತಾಲ್ಲೂಕು ಮಟ್ಟದ ಜನತಾ ದರ್ಶನ

ನಾಳೆ ಇಡಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದ ಜನತಾ ದರ್ಶನ ಸಭೆ ನಡೆದ ಬೆನ್ನಲ್ಲೇ ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಜಿಲ್ಲಾಧಿಕಾರಿಗಳು ಒಂದು ತಾಲ್ಲೂಕನ್ನು ಆರಿಸಿಕೊಂಡು ತಾಲ್ಲೂಕು ಮಟ್ಟದ ಜನತಾ ದರ್ಶನ ಸಭೆ ನಡೆಸಬೇಕು ಎನ್ನುವ ಆದೇಶವನ್ನೂ ಈಗಾಗಲೇ ಮುಖ್ಯಮಂತ್ರಿಗಳ ಸೂಚನೆಯಂತೆ, ಅಪರ ಮುಖ್ಯ ಕಾರ್ಯದರ್ಶಿ ಆಗಿರುವ ರಜನೀಶ್ ಗೋಯಲ್ ಅವರು ಹೊರಡಿಸಿದ್ದಾರೆ.

ಪರಿಣಾಮ

ಸಾರ್ವಜನಿಕರು ಪದೇ ಪದೇ ಸಣ್ಣ ಪುಟ್ಟ ಕೆಲಸಗಳಿಗೂ ಸರ್ಕಾರಿ ಕಚೇರಿಗಳಿಗೆ, ಶಾಸಕರ, ಜಿಲ್ಲಾ ಮಂತ್ರಿಗಳ, ಮುಖ್ಯಮಂತ್ರಿಗಳ ಬಳಿಗೆ ಅಲೆಯುವುದು ತಪ್ಪುತ್ತದೆ. ಅರ್ಜಿದಾರರ ದೂರು ಸತ್ಯವಾಗಿದ್ದು, ಯಾವುದೇ ದುರುದ್ದೇಶದಿಂದ ಕೂಡಿರದಿದ್ದರೆ ಅಂತಹ ಅರ್ಜಿಗಳಿಗೆ ಸೂಕ್ತ ಪರಿಹಾರ ಒದಗಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಯನ್ನು ಇದಕ್ಕೆ ಹೊಣೆಗಾರರನ್ನಾಗಿಸಿ ಸರ್ಕಾರ ಕ್ರಮ ಜರುಗಿಸಲಿದೆ. ಹೀಗೆ… ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಇಡಿ ರಾಜ್ಯದಾದ್ಯಂತ ಏಕ ಕಾಲಕ್ಕೆ ಒಂದೇ ದಿನ ಜನತಾ ದರ್ಶನ ದಾಖಲಾಗುತ್ತಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *