ಅತ್ತಿಬೆಲೆ ಪಟಾಕಿ ದುರಂತ : ತಹಶೀಲ್ದಾರ್, ಇನ್ಸ್ ಪೆಕ್ಟರ್, ಅಗ್ನಿಶಾಮಕ ದಳದ ಅಧಿಕಾರಿ ಸಸ್ಪೆಂಡ್ ಗೆ ಮುಖ್ಯಮಂತ್ರಿ ಸೂಚನೆ!

ಬೆಂಗಳೂರು, ಅ. 10: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣದ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ತಹಶೀಲ್ದಾರ್, ಇನ್ಸ್ ಪೆಕ್ಟರ್, ಅಗ್ನಿಶಾಮಕ ದಳ ಅಧಿಕಾರಿ ಅಮಾನತ್ತುಗೊಳಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಅತ್ತಿಬೆಲೆ ಪಟಾಕಿ ದುರಂತವಾದ ಮಳಿಗೆಗೆ ಸಂಬಂಧಿಸಿದಂತೆ, ಸರ್ಕಲ್‌ ಇನ್ಸ್‌ಪೆಕ್ಟರ್‌ ಛಾಯಾಚಿತ್ರಗಳೊಂದಿಗೆ ಚಕ್ಕುಬಂದಿ ನಿಗದಿ ಮಾಡಿ ವರದಿ ಸಲ್ಲಿಸಿದ್ದಾರೆ. ಪೊಲೀಸ್‌ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಪರವಾನಗಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಹಸೀಲ್ದಾರರಿಂದಲೂ ವರದಿ ಪಡೆದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು. 

ಎಕ್ಸ್‌ಪ್ಲೋಸಿವ್‌ ಆಕ್ಟ್‌ ನಲ್ಲಿ ಲೈಸೆನ್ಸ್‌ ಕೊಡುವಾಗ ನೀವು ಎಚ್ಚರಿಕೆ ವಹಿಸಬೇಕು. ಹದಿನಾಲ್ಕು ಜನರ ಜೀವಕ್ಕೆ ಯಾರು ಹೊಣೆಗಾರರು. ಕಾಯ್ದೆ ಓದಿದ್ದೀರಾ? ಅವರು ಅದರಲ್ಲಿರುವ ಎಲ್ಲ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ನೋಡಬೇಕು. ತಳಹಂತದ ಅಧಿಕಾರಿಗಳು ಸಲ್ಲಿಸಿದ ವರದಿ ಸರಿಯಿದೆಯೇ ಎಂದು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು ಎಂದು ಸಿಎಂ ತಾಕೀತು ಮಾಡಿದ್ದಾರೆ.

ಅಲ್ಲಿರುವ ಎಲ್ಲ ಮಳಿಗೆಗಳ ಸುರಕ್ಷತೆಯನ್ನೂ ತಪಾಸಣೆ ಮಾಡಲು ಸೂಚಿಸಿದರು. ಇನ್ನು ಮುಂದೆ ಲೈಸನ್ಸ್‌ ನೀಡುವಾಗ ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧೀಕ್ಷಕರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದ ಸೂಚನೆ ನೀಡಿದರು.

ತಪಾಸಣಾ ವರದಿ ಸರಿಯಾಗಿದೆಯೇ ಎಂದು ಪರಿಶೀಲಿಸಿಯೇ ಲೈಸನ್ಸ್‌ ನೀಡುವ ಬಗ್ಗೆ ತೀರ್ಮಾನಿಸಬೇಕು. ಈ ಪ್ರಕರಣದಲ್ಲಿ ಗೋಡೌನ್‌ಗೆ ಅನುಮತಿ ನೀಡಿರಲಿಲ್ಲ. ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು ಎಂದು ಸಭೇಯ ಗಮನಕ್ಕೆ ತರಲಾಯಿತು.

ರಾಜ್ಯದೆಲ್ಲೆಡೆ, ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋಡೌನ್‌ಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

ಬೆಂಗಳೂರು ನಗರದಲ್ಲಿ ಎರಡು ರೀತಿಯ ಪರವಾನಗಿಗಳಿವೆ. ಶಾಶ್ವತ ಮಳಿಗೆಗಳು ಹಾಗೂ ತಾತ್ಕಾಲಿಕ ಮಳಿಗೆಗಳಿಗೆ ಪರವಾನಗಿ ನೀಡಲಾಗುತ್ತಿದೆ. ಬಿಬಿಎಂಪಿ, ವಿದ್ಯುತ್, ಅಗ್ನಿಶಾಮಕ, ಟ್ರಾಫಿಕ್‌ ಮತ್ತು ಕಾನೂನು-ಸುವ್ಯವಸ್ಥೇ ವಿಭಾಗದ ನಿರಾಕ್ಷೇಪಣಾ ಪತ್ರ ಪಡೆದು ಲೈಸನ್ಸ್‌ ನೀಡಲಾಗುತ್ತದೆ. ಇದು ಐದು ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. ನವೀಕರಣಕ್ಕೆ ನಿರಾಕ್ಷೇಪಣಾ ಪತ್ರದ ಅಗತ್ಯವಿರುವುದಿಲ್ಲ. ಸ್ಫೋಟಕಗಳ ನಿಯಂತ್ರಕರು ನವೀಕರಿಸುತ್ತಾರೆ. ಈ ಕುರಿತು ನಿಯಮಾವಳಿಗಳ ತಿದ್ದುಪಡಿ ಅಗತ್ಯವಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಿದರು. ರಾಜ್ಯಕ್ಕೆ ಅನ್ವಯಿಸುವ ನಿಯಮ ಬದಲಿಸಲು ಸೂಚಿಸಿದರು.

ಅತ್ತಿಬೆಲೆ- ಹೊಸೂರು ಗಡಿ ಭಾಗದಲ್ಲಿ ಬರುವ ಪಟಾಕಿಗಳ ಕುರಿತು ತೀವ್ರ ನಿಗಾ ವಹಿಸಲು ಸೂಚಿಸಿದರು. ಈ ಕುರಿತು ನ್ಯಾಯಾಲಯಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸೂಚಿಸಿದರು. ಹಸಿರು ಪಟಾಕಿಗಳ ಮಾರಾಟವನ್ನೂ ಖಾತರಿಪಡಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿ, ರಾಜಕೀಯ ಸಮಾವೇಶಗಳಲ್ಲಿ ಹಾಗೂ ವಿವಾಹ ಸಮಾರಂಭಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಬಳಕೆಯನ್ನು ನಿಷೇಧಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಡಿಜಿಪಿ ಅಲೋಕ್‌ ಮೋಹನ್‌, ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ಬೆಂಗಳೂರು ನಗರ ಜಿಲ್ಲಾಧೀಕಾರಿ ಕೆ.ಎ. ದಯಾನಂದ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ್‌ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *