ಚಿಕ್ಕಬಳ್ಳಾಪುರ – ರಸ್ತೆ ಬದಿ ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ : 13 ಮಂದಿ ಸಾವು!

ಚಿಕ್ಕಬಳ್ಳಾಪುರ, ಅ. 26: ರಸ್ತೆ ಬದಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ಹಿಂಬದಿಯಿಂದ ಟಾಟಾ ಸುಮೋ ವಾಹನ ಡಿಕ್ಕಿ ಹೊಡೆದ ಪರಿಣಾಮ, ಟಾಟಾ ಸುಮೋದಲ್ಲಿದ್ದ 13 ಮಂದಿ ಮೃತಪಟ್ಟಿರುವ ಭೀಕರ ಘಟನೆ ಚಿಕ್ಕಬಳ್ಳಾಪುರದ ಚಿತ್ರಾವತಿ ಸಮೀಪದ ರಾಷ್ಟ್ರೀಯ ಹೆದ್ದಾರಿ  – 44 ರಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಅಪಘಾತದಲ್ಲಿ 8 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ 1 ಗಂಡು ಮಗು ಮೃತಪಟ್ಟಿದೆ. ಮೃತರ ಪೈಕಿ ದೊಡ್ಡಬಳ್ಳಾಪುರದ ಅರುಣ (40), ಇವರ ಮಗ ಹೃತ್ವಿಕ್ ಯತಿನ್ (6), ಬೆಂಗಳೂರಿನ ಬಸವೇಶ್ವರ ನಗರದ ಸುಬ್ಬಮ್ಮ, ಆಂಧ್ರಪ್ರದೇಶದ ಕೊತ್ತಚೆರಮ ನಿವಾಸಿ ಪರುಮಾಳ್, ಕಾವಲ್ ಭೈರಸಂದ್ರದ ನರಸಿಂಹಮೂರ್ತಿ, ಚಾಲಕ ನರಸಿಂಹಪ್ಪ ಎಂದು ಗುರುತಿಸಲಾಗಿದೆ. ಮೃತರಲ್ಲಿ ಹಲವರ ಹೆಸರು, ವಿಳಾಸ ಇನ್ನಷ್ಟೆ ತಿಳಿದುಬರಬೇಕಾಗಿದೆ.

ಮೃತರೆಲ್ಲರು ಕೂಲಿಕಾರ್ಮಿಕರಾಗಿದ್ದಾರೆ. ಇವರೆಲ್ಲ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದರು. ಆಂಧ್ರದ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಸುಮೋದಲ್ಲಿ ಬಾಗೇಪಲ್ಲಿ – ಚಿಕ್ಕಬಳ್ಳಾಪುರ ನಡುವಿನ ವಿವಿಧ ಪ್ರದೇಶಗಳಲ್ಲಿ ಹತ್ತಿಕೊಂಡಿದ್ದರು ಎಂದು ಹೇಳಲಾಗಿದೆ.

ಅವಘಡದಲ್ಲಿ 12 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ದಟ್ಟ ಮಂಜು ಕವಿದಿದ್ದರಿಂದ ಟಾಟಾ ಸುಮೋ ವಾಹನ ಚಾಲಕನಿಗೆ ರಸ್ತೆ ಬದಿ ನಿಂತಿದ್ದ ಲಾರಿ ಕಾಣದೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗಿದೆ.

ಪರಿಹಾರ ಘೋಷಣೆ : ಚಿಕ್ಕಬಳ್ಳಾಪುರದ ಚಿತ್ರಾವತಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ಎರಡು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಕೋರಿರುವ ಮುಖ್ಯಮಂತ್ರಿಗಳು ಘಟನೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *