‘ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ’ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಡ್ಯ, ಅ 31: ನಾವು ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ಅಧಿಕಾರಕ್ಕಿಂತ ರೈತರ ಹಿತಾಸಕ್ತಿ ಕಾಪಾಡುವುದು ನಮಗೆ ಮುಖ್ಯ. ಎಂಥಾದ್ದೇ ಪರಿಸ್ಥಿತಿ ಬಂದರೂ ರೈತರ ಹಿತ ಕಾಯುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದರು.

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಹಲವು ಸಂಘಟನೆಗಳ ಒಕ್ಕೂಟ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪ್ರತಿಭಟನಾಕಾರರ ಮನವಿ ಪತ್ರ ಸ್ವೀಕರಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಿ ಮಾತನಾಡಿದರು.‌

ನಾವು ಈ ವರ್ಷ ಭೀಕರ ಬರಗಾಲ ಎದುರಿಸುತ್ತಿದ್ದೇವೆ. ಮಳೆ ಪೂರ್ತಿ ಕೈಕೊಟ್ಟಿದೆ. ಇದರಿಂದ ಜಲಾಶಯಗಳು ತುಂಬದೆ ನಾವು ಸಂಕಷ್ಟದ ವರ್ಷದಲ್ಲಿ ಇದ್ದೇವೆ. ನಾವು ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕು ಎನ್ನುವ ಆದೇಶ ಹೊರಬಿದ್ದಿದೆ. ಪ್ರತಿ ತಿಂಗಳು ಇಷ್ಟಿಷ್ಟು ನೀರು ಬಿಡಬೇಕು ಎನ್ನುವ ಆದೇಶ ಇದೆ. ನಾವು ಕಾವೇರಿ ಪ್ರಾಧಿಕಾರ ಮತ್ತು ಸಮಿತಿ ಎದುರು ನೀರಿಲ್ಲ, ಆದ್ದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ನಮ್ಮ ವಾದವನ್ನು ಬಲವಾಗಿ ಮಂಡಿಸಿದ್ದೇವೆ.

ಆದರೂ ಮೊದಲು 5000 ಕ್ಯೂಸೆಕ್ಸ್ ನೀರು ಬಿಡಲು ಹೇಳಿದರು, ಬಳಿಕ 3000 ಕ್ಯೂಸೆಕ್ಸ್ ನೀರು ಬಿಡಲು ಆದೇಶ ಬಂತು. ಅದಕ್ಕೂ ನಾವು ಒಪ್ಪಲಿಲ್ಲ. ಈಗ ನೆನ್ನೆ ದಿನ 2600 ಕ್ಯೂಸೆಕ್ಸ್ ನೀರು ಬಿಡಲು ಆದೇಶವಾಗಿದೆ. ಆದರೆ ನಾವು ಕುಡಿಯುವ ನೀರಿಗೆ ಮತ್ತು ಬೆಳೆ ಉಳಿಸಿಕೊಳ್ಳಲು ಮೊದಲ ಆದ್ಯತೆ ನೀಡುತ್ತೇವೆ. ಮುಂಗಾರು ಬೆಳೆಯನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತೇವೆ.

ನಾನೂ ರೈತ ಹೋರಾಟದಲ್ಲಿ ಬಂದಿರುವ ರೈತರ ಮಗ. ನಾವೂ ಅಚ್ಚುಕಟ್ಟೆ ಪ್ರದೇಶದಲ್ಲೇ ಇದ್ದೇವೆ. ಆದ್ದರಿಂದ ರೈತರ ಸಂಕಷ್ಟ ನನಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ನಿಮ್ಮ ಹಿತ ಕಾಯಲು ಹಿಂದೆ ಬೀಳುವುದಿಲ್ಲ. ಅಧಿಕಾರಕ್ಕಾಗಿ ರೈತರನ್ನು ಬಲಿ ಕೊಡುವುದಿಲ್ಲ. ನಾವು ಕೇವಲ ಅಧಿಕಾರಕ್ಕಾಗಿ ಅಂಟಿಕೊಂಡು ಕೂರುವವರಲ್ಲ ಎಂದು ಸ್ಪಷ್ಟವಾಗಿ ನುಡಿದರು.

ರೈತರ ಹಿತ ಕಾಯಲು ಗಂಭೀರವಾದ, ಪ್ರಾಯೋಗಿಕವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಕಬ್ಬು ಬೆಳೆಗಾರರ ಹಿತಕ್ಕಾಗಿ ಮೈಶುಗರ್ ಸಕ್ಕರೆ ಕಾರ್ಖಾನೆಗೆ 50 ರೂ ಬಿಡುಗಡೆ ಮಾಡಿದ್ದೇವೆ. ನಾವು ನಿಮ್ಮ ಪರವಾಗಿ ಇರುವವರು. ಅನುಮಾನ ಬೇಡವೇ ಬೇಡ ಎಂದರು.

ಕೃಷಿ ಸಚಿವರಾದ ಚಲುವರಾಯಸ್ವಾಮಿ, ಶಾಸಕರಾದ ರವಿ ಗಣಿಗ, ದಿನೇಶ್ ಗೂಳಿಗೌಡ, ನರೇಂದ್ರಸ್ವಾಮಿ ಸೇರಿದಂತೆ ಹಲವು ಮಂದಿ ನಾಯಕರು ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *