‘ಜನರ ಸಮಸ್ಯೆಗಳಿಗೆ ಸ್ಪಂದಿಸಿ’ : KAS ಅಧಿಕಾರಿಗಳಿಗೆ ಸಿಎಂ ಕಿವಿ ಮಾತು 

'Respond to people's problems': CM's speech to KAS officials ‘ತಹಶೀಲ್ದಾರ್ ಕಚೇರಿಗೆ ಬರುವವರ ಕಣ್ಣೀರು ಒರೆಸುವುದಕ್ಕಿಂತ ಪುಣ್ಯದ ಕೆಲಸ ಬೇರೆ ಇಲ್ಲ: ಕೆಎಎಸ್ ಅಧಿಕಾರಿಗಳಿಗೆ ಸಿಎಂ ಕಿವಿ ಮಾತು

ಬೆಂಗಳೂರು ಜ. 3: ತಹಶೀಲ್ದಾರ್ ಕಚೇರಿಗೆ ಬರುವವರ ಕಣ್ಣೀರು ಒರೆಸುವುದಕ್ಕಿಂತ ಪುಣ್ಯದ ಕೆಲಸ ಬೇರೆ ಇಲ್ಲ. ಮಾಸಲು ಬಟ್ಟೆಯಲ್ಲಿ ಚಡ್ಡಿಯಲ್ಲಿ ಬರುವ ಬಡವರ ಕಣ್ಣೀರು ಒರೆಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. 

ಕರ್ನಾಟಕ ಆಡಳಿತಾ ಸೇವಾ ಅಧಿಕಾರಿಗಳ ಸಂಘದ 2024ನೇ ಸಾಲಿನ ದಿನಚರಿ ಮತ್ತು ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. 

ಸವೆದ ಚಪ್ಪಲಿ, ಹರಕಲು ಚೆಡ್ಡಿ, ಮಾಸಿದ ಬಟ್ಟೆ, ಅವಿದ್ಯಾವಂತರ ಪರವಾಗಿ ನಿಮ್ಮಗಳ ಹೃದಯ ಮಿಡಿಯಬೇಕು. ನೀವು ಒಳ್ಳೆ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಈ ಜವಾಬ್ದಾರಿಯನ್ನು ನಿರ್ವಹಿಸಿ, ಮಧ್ಯವರ್ತಿಗಳನ್ನು ನಿಮ್ಮ ಕಚೇರಿ ಬಳಿ ಸೇರಿಸದೆ ಜನರ ಸೇವೆ ಮಾಡಿ ಎಂದರು.

ನಾವು ನೀವು ರಾಜ್ಯದ 7 ಕೋಟಿ ಜನರ ಹಿತ ಕಾಯುವುದಕ್ಕಾಗಿ ಇದ್ದೇವೆ. ರಾಜಕಾರಣಿಗಳು ಜನರಿಂದ ರಿನೀವಲ್ ಆದರೆ ಮಾತ್ರ ಐದು ವರ್ಷದ ಬಳಿಕವೂ ಜನ ಸೇವೆಯಲ್ಲಿ ಇರ್ತಾರೆ. ಆದರೆ ಕೆಎಎಸ್ ಅಧಿಕಾರಿಗಳು 30 ವರ್ಷಗಳ‌ ಕಾಲ ನಿರಂತರ ಜನ ಸೇವೆಯಲ್ಲಿ ಇರುತ್ತೀರಿ. ಆದ್ದರಿಂದ ಹೆಚ್ಚು ಜನಪರವಾಗಿ ಇದ್ದು ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಎಂದು ಕರೆ ನೀಡಿದರು. 

ರಾಜಕಾರಣಗಳಿಗೆ, ಅಧಿಕಾರಿಗಳಿಗೆ ಜನರು ಸವಲತ್ತುಗಳನ್ನು ಒದಗಿಸಿದ್ದಾರೆ. ಜನರ ತೆರಿಗೆ ಹಣದಲ್ಲಿ ನಮಗೆ ಸವಲತ್ತುಗಳು ಸಿಕ್ಕಿವೆ. ಸುಗಮ ಜನಪರ ಆಡಳಿತ ಕೊಡಲಿ ಎನ್ನುವ ಕಾರಣದಿಂದ ಜನರಿಂದ ನಮಗೆ ಸವಲತ್ತು ಸಿಕ್ಕಿವೆ. ಜನರ ಅಭ್ಯದಯ ನಮ್ಮ ಗುರಿ ಆಗಬೇಕು ಎಂದರು. 

ಬಲಾಡ್ಯರು ದುರ್ಬಲರ ಮೇಲೆ ದೌರ್ಜನ್ಯ ನಡೆಸದಂತೆ ಎಚ್ಚರಿಕೆ ವಹಿಸಿ. ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿಸಿ ಎಂದು ಕರೆ ನೀಡಿದರು. 

ಸಣ್ಣ ಪುಟ್ಟ ರೆವಿನ್ಯೂ ಸಮಸ್ಯೆಗಳಿಗೆ ಜನರು ಸಿಎಂ ಬಳಿಗೆ ಬರುತ್ತಾರೆ ಎಂದರೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಶಿವಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಪಿ.ಸುನಿಲ್ ಕುಮಾರ್, ಸಂಘದ ಉಪಾಧ್ಯಕ್ಷರಾದ ಚನ್ನಬಸಪ್ಪ ಅವರು ವೇದಿಕೆಯಲ್ಲಿದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *