
shimoga | ಶಿವಮೊಗ್ಗ | ಪಾಲಿಕೆ ಅದೀನದಲ್ಲಿರುವ ಗ್ರಾಪಂ ಪ್ರದೇಶಗಳ ಇ-ಖಾತಾ ಗೊಂದಲ : ಗಮನಹರಿಸುವರೆ ಡಿಸಿ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಫೆ. 20: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿದ್ದ ಇ – ಖಾತಾ ಗೊಂದಲ ಪರಿಹಾರಕ್ಕೆ ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. ಮೂರು ತಿಂಗಳಲ್ಲಿ ಸ್ಥಿರಾಸ್ತಿಗಳಿಗೆ ಇ – ಖಾತಾ ನೀಡುವಂತೆ ಆದೇಶ ಹೊರಡಿಸಿದೆ. ಇದು ನಾಗರೀಕರಿಗೆ ಸಾಕಷ್ಟು ಅನುಕೂಲವಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇ – ಖಾತಾ ಮಾಡಿಸುವ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಆಯುಕ್ತರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಎ – ಖಾತಾ ಮಾಡಿಸಲು ಹಾಗೂ ಬಿ – ಖಾತಾ (ಅನದಿಕೃತ ಬಡಾವಣೆ_) ಮಾಡಿಸಲು ಅಗತ್ಯವಿರುವ ದಾಖಲೆಗಳ ಮಾಹಿತಿ ನೀಡಿದ್ದಾರೆ.
ಆದರೆ ಶಿವಮೊಗ್ಗ ನಗರಸಭೆಗೆ ಕಳೆದ 30 ವರ್ಷಗಳ ಹಿಂದೆ ಸೇರ್ಪಡೆಯಾಗಿದ್ದ ಗ್ರಾಮ ಪಂಚಾಯ್ತಿ ಅಧೀನದ ಪ್ರದೇಶಗಳ ಇ – ಖಾತಾ ಗೊಂದಲ ಮುಂದುವರಿದಿದೆ. ಪಾಲಿಕೆ ಕಂದಾಯ ವಿಭಾಗದಲ್ಲಿ ಇ-ಖಾತಾ ಮಾಡಿ ಕೊಡುತ್ತಿಲ್ಲ. ನಾನಾ ರೀತಿಯ ಆಡಳಿತಾತ್ಮಕ ಸಮಸ್ಯೆಗಳನ್ನು ಮುಂದಿಡುತ್ತಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಇದರಿಂದ ಸಾವಿರಾರು ನಾಗರೀಕರು ತೊಂದರೆ ಪಡುವಂತಾಗಿದೆ. ದಿನನಿತ್ಯ ಪಾಲಿಕೆ ಕಚೇರಿಗೆ ಎಡತಾಕುವಂತಾಗಿದೆ. ಹಿರಿಯ ಅಧಿಕಾರಿಗಳಿಂದ ಸೂಕ್ತ ನಿರ್ದೇಶನ ದೊರಕುತ್ತಿಲ್ಲ ಎಂದು ಪಾಲಿಕೆ ಕಂದಾಯ ವಿಭಾಗದ ಅಧಿಕಾರಿ, ಸಿಬ್ಬಂದಿಗಳು ಹೇಳುತ್ತಿದ್ದಾರೆ.
ಗಮನಹರಿಸಲಿ : ರಾಜ್ಯ ಸರ್ಕಾರ ಮೂರು ತಿಂಗಳ ಕಾಲಾವಕಾಶ ನೀಡಿದ್ದು, ಅಷ್ಟರೊಳಗೆ ಇ-ಖಾತಾ ಮಾಡಿಕೊಡುವಂತೆ ಸೂಚಿಸಿದೆ. ಮತ್ತೊಂದೆಡೆ, ಗ್ರಾಮ ಪಂಚಾಯ್ತಿಯಿಂದ 30 ವರ್ಷಗಳ ಹಿಂದೆ ನಗರಾಡಳಿತದ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಸಾವಿರಾರು ಸ್ಥಿರಾಸ್ತಿ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕ್ರಮಕೈಗೊಂಡಿಲ್ಲ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು, ಕಾಲಮಿತಿಯೊಳಗೆ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಾಗಿದೆ. ಈ ಮೂಲಕ ಸಾವಿರಾರು ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.
ಮುಖಂಡ ಶ್ಯಾಂಸುಂದರ್ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ

ಶಿವಮೊಗ್ಗ ನಗರ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ ಕಳೆದ 15 – 20 ವರ್ಷಗಳ ಮೇಲ್ಪಟ್ಟು ಕ್ರಯ ಕರಾರು ಪತ್ರಗಳ ಮೇಲೆ ಮನೆ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ಇ – ಖಾತಾ ಮಾಡಿಕೊಡಲು ಕ್ರಮಕೈಗೊಳ್ಳಬೇಕು ಎಂದು, ಮಾಜಿ ನಗರಸಭಾ ಸದಸ್ಯ ಶ್ಯಾಂಸುಂದರ್ ನೇತೃತ್ವದಲ್ಲಿ ಫೆ. 20 ರಂದು ಡಿಸಿ ಕಚೇರಿಯಲ್ಲಿ ನಾಗರೀಕರು ಮನವಿ ಪತ್ರ ಅರ್ಪಿಸಿದ್ದಾರೆ.
1994 ರಲ್ಲಿ ಶಿವಮೊಗ್ಗ ನಗರಸಭೆಗೆ ಹಸ್ತಾಂತರವಾಗಿದ್ದ ಗಾಡಿಕೊಪ್ಪ, ಆಲ್ಕೋಳ, ಮಲ್ಲಿಗೇನಹಳ್ಳಿ, ಮಲವಗೊಪ್ಪ ಸೇರಿದಂತೆ ಹಲವು ಗ್ರಾಮ ಪಂಚಾಯ್ತಿ ಪ್ರದೇಶಗಳ ಸ್ಥಿರಾಸ್ತಿ ಮಾಲೀಕರಿಗೆ ಇ – ಖಾತಾ ನೀಡುತ್ತಿಲ್ಲ. ಕಂದಾಯ ಭೂಮಿಯ ಅಗ್ರಿಮೆಂಟ್, ಆಧಾರ ಪತ್ರ, ಕ್ರಯ ಕರಾರು ಪತ್ರಗಳಿವೆ. ಗ್ರಾಪಂ ಖಾತೆಗಳಾಗಿವೆ. ಇದರ ಆಧಾರದ ಮೇಲೆ ಪಾಲಿಕೆಯಲ್ಲಿ ಖಾತೆ ತೆರೆಯಲಾಗಿದೆ. ಮೂರ್ನಾಲ್ಕು ದಶಕಗಳಿಂದ ಮನೆ ನಿರ್ಮಿಸಿಕೊಂಡು ನಾಗರೀಕರು ವಾಸಿಸುತ್ತಿದ್ದಾರೆ. ಇಂತಹ ಸ್ಥಿರಾಸ್ತಿಗಳಿಗೆ ಇ – ಖಾತಾ ನೀಡುವಂತೆ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು. ಜೊತೆಗೆ ಮುಖ್ಯಮಂತ್ರಿಗಳು, ನಗರಾಭಿವೃದ್ದಿ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಇದೇ ವೇಳೆ ಶ್ಯಾಂಸುಂದರ್ ಅವರು ಆಗ್ರಹಿಸಿದ್ದಾರೆ.