shimoga news | ಶಿವಮೊಗ್ಗ : ಗ್ರಾಮ ಪಂಚಾಯ್ತಿ ದಾಖಲೆಗಳಲ್ಲಿ ಇಡೀ ಗ್ರಾಮವೇ ಮಾಯ – ಆಡಳಿತದ ಲೋಪಕ್ಕೆ ಗ್ರಾಮಸ್ಥರು ಅಯೋಮಯ!

Shivamogga : The entire village is missing from the Gram Panchayat records – villagers are confused by the administrative lapses! ಶಿವಮೊಗ್ಗ : ಗ್ರಾಮ ಪಂಚಾಯ್ತಿ ದಾಖಲೆಗಳಲ್ಲಿ ಇಡೀ ಗ್ರಾಮವೇ ಮಾಯ – ಆಡಳಿತದ ಲೋಪಕ್ಕೆ ಗ್ರಾಮಸ್ಥರು ಅಯೋಮಯ!

ಶಿವಮೊಗ್ಗ (shivamogga), ಡಿಸೆಂಬರ್ 6: ‘ತಲತಲಾಂತರದಿಂದ ನೂರಾರು ಜನರು, ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಆದರೆ ಗ್ರಾಮ ಪಂಚಾಯ್ತಿ ದಾಖಲೆಗಳಲ್ಲಿ ಮಾತ್ರ, ಇಡೀ ಗ್ರಾಮವೇ ಕಣ್ಮರೆಯಾಗಿದೆ..! ಕೆಲ ಅಧಿಕಾರಿಗಳ ಕರ್ತವ್ಯ ಲೋಪ, ಬೇಜವಾಬ್ದಾರಿ ಧೋರಣೆಯಿಂದ ವಾಸದ ಮನೆಗಳಿಗೆ ದಾಖಲೆಗಳಲ್ಲಿದೆ ಗ್ರಾಮಸ್ಥರು ಪರದಾಡುವಂತಾಗಿದೆ..!!

ಹೌದು. ಇದು ಸತ್ಯ! ಶಿವಮೊಗ್ಗ ನಗರದಿಂದ ಕೆಲವೇ ಕೆಲ ಕಿ.ಮೀ. ಅಂತರದಲ್ಲಿರುವ ದುಮ್ಮಳ್ಳಿ ಶಿವಪುರ ತಾಂಡಾದ ನಿವಾಸಿಗಳು, ಕಳೆದ ಸರಿಸಮಾರು 10 ವರ್ಷಗಳಿಂದ ಎದುರಿಸಿಕೊಂಡ ಬರುತ್ತಿರುವ ಸಂಕಷ್ಟದ ಪ್ರಮುಖಾಂಶಗಳು…

ಕೆಲ ಅಧಿಕಾರಿಗಳು ಮಾಡಿದ ತಪ್ಪಿಗೆ, ತಾವು ವಾಸಿಸುತ್ತಿರುವ ಮನೆಗಳಿಗೆ ದಾಖಲೆಗಳಿಲ್ಲದೆ ನಿವಾಸಿಗಳು ಪರದಾಡುತ್ತಿದ್ದಾರೆ. ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ನಿರಂತರವಾಗಿ ಅಲೆದಾಡುತ್ತಿದ್ದಾರೆ.

ಏನೀದು ಸಮಸ್ಯೆ? : ದುಮ್ಮಳ್ಳಿ ಶಿವಪುರ ತಾಂಡಾವು ಈ ಹಿಂದೆ ನಿಧಿಗೆ ಗ್ರಾಮ ಪಂಚಾಯ್ತಿ ಅಧೀನದಲ್ಲಿತ್ತು. ಹೊಸದಾಗಿ ಸೋಗಾನೆ ಗ್ರಾಮ ಪಂಚಾಯ್ತಿ ಸೃಜಿಸಿದಾಗ, ಸದರಿ ಗ್ರಾಮದ ನೂರಾರು ಮನೆಗಳನ್ನು ನೂತನ ಸೋಗಾನೆ ಗ್ರಾಪಂ ಆಡಳಿತಕ್ಕೆ ಸೇರ್ಪಡೆಗೊಳಿಸಲಾಗಿತ್ತು.

ಈ ವೇಳೆ ಶಿವಪುರ ತಾಂಡಾದ ಮನೆಗಳಿಗೆ ಸಂಬಂಧಿಸಿದ ದಾಖಲೆಗಳ ಮಾಹಿತಿಯನ್ನು, ಗ್ರಾಮ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಆಡಳಿತದವರು ನಿಯಮಾನುಸಾರ ಕಚೇರಿ ದಾಖಲೆಗಳಲ್ಲಿ ಮತ್ತು ಪಂಚತಂತ್ರ ತಂತ್ರಾಂಶದಲ್ಲಿ ನಮೂದಿಸಿಲ್ಲ. ಇದರಿಂದ ಆಡಳಿತದ ದಾಖಲೆಗಳಲ್ಲಿ ಇಡೀ ಊರೇ ಇಲ್ಲದಂತಾಗಿದೆ!

ತಾವು ವಾಸಿಸುತ್ತಿರುವ ಮನೆ ಹಾಗೂ ನಿವೇಶನಗಳಿಗೆ ಗ್ರಾಪಂ ಕಚೇರಿಯಲ್ಲಿ ದಾಖಲೆಗಳೇ ಇರದಿರುವ ಕಾರಣದಿಂದ ಗ್ರಾಮಸ್ಥರು ಸರ್ಕಾರಿ ಸೌಲಭ್ಯ ಪಡೆಯುವುದು, ಬ್ಯಾಂಕ್ ಗಳಿಂದ ಸಾಲಸೌಲಭ್ಯ, ಆಸ್ತಿ ಹಂಚಿಕೆ ಸೇರಿದಂತೆ ಮತ್ತೀತರ ತುರ್ತು ಕೆಲಸಕಾರ್ಯ ಮಾಡಿಕೊಳ್ಳಲು ಸಂಕಷ್ಟ ಪಡುವಂತಾಗಿದೆ.

ನಿರ್ಲಕ್ಷ್ಯ: ಸಂಬಂಧಿಸಿದ ಕೆಲ ಅಧಿಕಾರಿಗಳ ಕರ್ತವ್ಯ ಲೋಪದಿಂದ ಅಮಾಯಕ ಗ್ರಾಮಸ್ಥರು ತೊಂದರೆಗೆ ಸಿಲುಕುವಂತಾಗಿದೆ. ಇಷ್ಟೆಲ್ಲದರ ಹೊರತಾಗಿಯೂ ಇಲ್ಲಿಯವರೆಗೂ ಸಮಸ್ಯೆ ಪರಿಹಾರಕ್ಕೆ ಆಡಳಿತ ವ್ಯವಸ್ಥೆ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲವೆಂಬ ದೂರುಗಳು ಸ್ಥಳೀಯ ಗ್ರಾಮಸ್ಥರದ್ದಾಗಿದೆ.

ಶಾಸಕರಿಗೆ ದೂರು : ಈ ನಡುವೆ ಕೆಲ ಗ್ರಾಮಸ್ಥರು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯನಾಯ್ಕ್ ಅವರ ಗಮನಕ್ಕೆ ಈ ವಿಷಯ ತಂದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕರು, ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಲಮಿತಿಯೊಳಗೆ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆ ಆಡಳಿತ ವ್ಯವಸ್ಥೆಯ ದಿವ್ಯ ನಿರ್ಲಕ್ಷ್ಯದಿಂದ ನೂರಾರು ಗ್ರಾಮಸ್ಥರು ತೊಂದರೆಗೆ ಸಿಲುಕುವಂತಾಗಿದೆ. ಇನ್ನಾದರೂ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಆಡಳಿತ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಕ್ರಮಕೈಗೊಳ್ಳುತ್ತದೆಯೇ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

*** ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿವಪುರ ತಾಂಡಾದ ಮನೆ – ನಿವೇಶನಗಳ ದಾಖಲೆಗಳನ್ನು ಗ್ರಾಮ ಪಂಚಾಯ್ತಿ ದಾಖಲೆಗಳಲ್ಲಿ ಸೇರ್ಪಡೆ ಮಾಡದೆ ನಿರ್ಲಕ್ಷ್ಯವಹಿಸಿರುವ ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ದ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಕಾಲಮಿತಿಯೊಳಗೆ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ‘ಶಿವಪುರ ತಾಂಡಾದ ನಿವಾಸಿಗಳು 10 ವರ್ಷಗಳಿಂದ ದಾಖಲೆಗಳಿಲ್ಲದೆ ಪರದಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಸ್ಪಷ್ಟ ಸೂಚನೆ ನೀಡಲಾಗಿದೆ’ ಎಂದು ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ಡಿಸೆಂಬರ್ 6 ರಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →