shimoga news | ಶಿವಮೊಗ್ಗ : ಅನಧಿಕೃತ ಬೀದಿ ದೀಪಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ – ಹಲವು ರಸ್ತೆಗಳಲ್ಲಿ ಕತ್ತಲೆ ಭಾಗ್ಯ!

Shivamogga : MESCOM disconnecting power to unauthorized street lights - many roads are in darkness! ಶಿವಮೊಗ್ಗ : ಅನದಿಕೃತ ಬೀದಿ ದೀಪಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ – ಹಲವು ರಸ್ತೆಗಳಲ್ಲಿ ಕತ್ತಲೆ ಭಾಗ್ಯ!

ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga), ಜೂನ್ 25: ಶಿವಮೊಗ್ಗ ನಗರದ ವಿವಿಧ ಬಡಾವಣೆಗಳ ರಸ್ತೆಗಳಲ್ಲಿನ ಬೀದಿ ದೀಪಗಳನ್ನು, ‘ಅಕ್ರಮ ಸಂಪರ್ಕ’ದ ಆರೋಪದ ಮೇರೆಗೆ ಮೆಸ್ಕಾಂ ಸಂಸ್ಥೆಯು ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ವ್ಯಾಪಕ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರಲಾರಂಭಿಸಿದೆ.

ಮಹಾನಗರ ಪಾಲಿಕೆ – ಮೆಸ್ಕಾಂ ನಡುವಿನ ಹಗ್ಗಜಗ್ಗಾಟದಿಂದ ನಾಗರಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹಲವು ರಸ್ತೆಗಳಲ್ಲಿ ಕತ್ತಲೆ ಆವರಿಸುವಂತಹ ದುಃಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಏನೀದು ಸಮಸ್ಯೆ? : ಶಿವಮೊಗ್ಗ ನಗರದ ಹಲವೆಡೆ ಮೀಟರ್ ಬೋರ್ಡ್ ಗೆ ಸಂಪರ್ಕ ಹೊಂದಿರದ ಬೀದಿ ದೀಪಗಳಿವೆ. ಕೆಲವೊಮ್ಮೆ ನಾಗರಿಕರೇ ಈ ರೀತಿಯ ಬೀದಿ ದೀಪಗಳನ್ನು ತಮ್ಮ ಮನೆ ಮುಂಭಾಗದ ರಸ್ತೆಗಳಲ್ಲಿ ಹಾಕಿಸಿಕೊಂಡಿರುತ್ತಾರೆ.

ಮೆಸ್ಕಾಂ ನಿಯಮದ ಪ್ರಕಾರ ಈ ರೀತಿಯ ಬೀದಿ ದೀಪಗಳು ನಿಯಮಬಾಹಿರ.  ಇದೀಗ ನಗರದ ಹಲವೆಡೆ ಈ ರೀತಿಯ ಬೀದಿ ದೀಪಗಳನ್ನು ಏಕಾಏಕಿ ಮೆಸ್ಕಾಂ ಸಂಸ್ಥೆಯು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾರಂಭಿಸಿದೆ. ಇದರಿಂದ ರಸ್ತೆಗಳಲ್ಲಿ ಕತ್ತಲೆ ಆವರಿಸುವಂತಾಗಿದೆ. ಮಳೆಗಾಲದ ಸಂದರ್ಭದಲ್ಲಿಯೇ ಮೆಸ್ಕಾಂ ಕೈಗೊಂಡಿರುವ ದಿಡೀರ್ ಕ್ರಮವು ಆಕ್ಷೇಪಕ್ಕೆ ಕಾರಣವಾಗಿದೆ.

ತರಾತುರಿ ಏಕೆ? : ಮಳೆಗಾಲದ ವೇಳೆಯೇ, ಮೀಟರ್ ಬೋರ್ಡ್ ಸಂಪರ್ಕ ಹೊಂದಿರದ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂನ ತರಾತುರಿ ಕ್ರಮಕ್ಕೆ ನಾಗರಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

‘ಸಂಪರ್ಕ ಕಡಿತಗೊಳಿಸುವುದಕ್ಕೂ ಮುನ್ನ, ಈ ಕುರಿತಂತೆ ನಾಗರಿಕರಿಗೆ ಮಾಹಿತಿ ನೀಡಬೇಕಾಗಿತ್ತು. ಮಹಾನಗರ ಪಾಲಿಕೆ ಆಡಳಿತದ ಗಮನಕ್ಕೆ ತರಬೇಕಾಗಿತ್ತು. ಅಕ್ರಮ ಸಂಪರ್ಕ ಸಕ್ರಮಗೊಳಿಸಿಕೊಳ್ಳಲು ಅವಕಾಶ ನೀಡಬೇಕಾಗಿತ್ತು. ಆದರೆ ನಾಗರಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಮೆಸ್ಕಾಂ ಕ್ರಮಕೈಗೊಳ್ಳುತ್ತಿರುವುದು ನಿಜಕ್ಕೂ ಖಂಡನಾರ್ಹವಾದುದಾಗಿದೆ’ ಎಂದು ಕೆಲ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉತ್ತರವಿಲ್ಲ : ‘ಈ ಹಿಂದೆ ಹಲವು ಬಾರಿ ಮೆಸ್ಕಾಂಗೆ ಪತ್ರ ಬರೆದು, ಅಕ್ರಮ ಬೀದಿ ದೀಪಗಳ ಮಾಹಿತಿ ನೀಡುವಂತೆ ಕೋರಲಾಗಿದೆ. ಆದರೆ ಇಲ್ಲಿಯವರೆಗೂ ಈ ಪತ್ರಗಳಿಗೆ ಯಾವುದೇ ಉತ್ತರ ನೀಡದ ಮೆಸ್ಕಾಂ ಸಂಸ್ಥೆಯು, ಇದೀಗ ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದೆ’ ಎಂದು ಪಾಲಿಕೆ ಮೂಲಗಳು ಮಾಹಿತಿ ನೀಡುತ್ತವೆ.

ತಕ್ಷಣವೇ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಪಾಲಿಕೆ ಆಯುಕ್ತ ಮಾಯಣ್ಣಗೌಡರವರು ಈ ವಿಷಯದತ್ತ ಚಿತ್ತ ಹರಿಸಬೇಕಾಗಿದೆ. ಮೆಸ್ಕಾಂ ಹಾಗೂ ಪಾಲಿಕೆ ಸಭೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂದು ನಾಗರಿಕರು ಆಗ್ರಹಿಸುತ್ತಾರೆ.

‘ಅಕ್ರಮ ಸಕ್ರಮ’ಕ್ಕೆ ಅವಕಾಶವೇ ಇಲ್ಲವೇ..?

*** ಅನದಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದ ಕೃಷಿ ಮೋಟಾರ್ ಪಂಪ್ ಸೆಟ್ ಗಳ ಸಕ್ರಮಕ್ಕೆ ಪ್ರಕಟಣೆ ಮೂಲಕ ರಾಜ್ಯ ಸರ್ಕಾರ ಕಾಲಾವಕಾಶ ಕಲ್ಪಿಸುತ್ತದೆ. ಆದರೆ ಶಿವಮೊಗ್ಗದ ಬೀದಿ ದೀಪಗಳ ವಿಷಯದಲ್ಲಿ ಮಾತ್ರ ಇದಕ್ಕೆ ಅವಕಾಶವೇ ಇಲ್ಲದಂತಾಗಿದೆ. ಅನದಿಕೃತ ಸಂಪರ್ಕದ ಆರೋಪದ ಮೇರೆಗೆ, ಬೀದಿ ದೀಪಗಳ ವಿದ್ಯುತ್ ಸಂಪರ್ಕವನ್ನು ದಿಡೀರ್ ಆಗಿ ಮೆಸ್ಕಾಂ ಕಡಿತಗೊಳಿಸುತ್ತಿದೆ. ಈ ಕ್ರಮಕ್ಕೂ ಮುನ್ನ ನಾಗರಿಕರಿಗೆ ಮಾಹಿತಿ ನೀಡುವ ಹಾಗೂ ಪಾಲಿಕೆ ಆಡಳಿತಕ್ಕೆ ಪತ್ರ ಬರೆದು ಸಕ್ರಮ ಮಾಡಿಕೊಳ್ಳುವಂತೆ ಡೆಡ್’ಲೈನ್ ನೀಡುವ ಕಿಂಚಿತ್ತೂ ಕ್ರಮವಾಗದಿರುವುದು ಏಕೆ? ಎಂಬುವುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.

ಎಂಎಲ್ಎ, ಡಿಸಿ, ಆಯುಕ್ತರು ಗಮನಿಸಲಿ

*** ಅನದಿಕೃತ ಬೀದಿ ದೀಪಗಳ ವಿದ್ಯುತ್ ಸಂಪರ್ಕ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣವೇ ಶಾಸಕ ಚನ್ನಬಸಪ್ಪ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಪಾಲಿಕೆ ಆಯುಕ್ತ ಮಾಯಣ್ಣಗೌಡರವರು ಗಮನಹರಿಸಬೇಕು. ಮೆಸ್ಕಾ ಜೊತೆ ಸಭೆ ನಡೆಸಬೇಕು. ನಾಗರಿಕರಿಗೆ ಅನಾನುಕೂಲವಾಗುವ ನಿರ್ಧಾರ ಕೈಗೊಳ್ಳದಂತೆ ತಾಕೀತು ಮಾಡಬೇಕು ಎಂದು ನಾಗರಿಕರು ಆಗ್ರಹಿಸುತ್ತಾರೆ.

shimoga news | Shivamogga: MESCOM disconnecting power to unauthorized street lights – many roads are in darkness!

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *