ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಸೆಪ್ಟೆಂಬರ್ 29: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ 1 ನೇ ವಾರ್ಡ್ ನ ಸೋಮಿನಕೊಪ್ಪ ಬಡಾವಣೆಯಲ್ಲಿರುವ ಕೆರೆಯು ಶಿವಮೊಗ್ಗ ನಗರ ಮಾತ್ರವಲ್ಲದೆ ಇಡೀ ತಾಲೂಕಿನಲ್ಲಿಯೇ ಅತೀ ದೊಡ್ಡ ಕೆರೆಯಾಗಿದೆ. ಆದರೆ ಆಡಳಿತದ ದಿವ್ಯ ನಿರ್ಲಕ್ಷ್ಯ, ಸೂಕ್ತ ನಿರ್ವಹಣೆಯ ಕೊರತೆಯಿಂದ ಅವ್ಯವಸ್ಥೆಯ ಆಗರವಾಗುತ್ತಿದೆ. ಹಾಗೆಯೇ ಕೆರೆಯಲ್ಲಿ ಈಜಲು ಹೋಗುವ ಶಾಲಾ ವಿದ್ಯಾರ್ಥಿಗಳು, ನಾಗರಿಕರು ಬಲಿಯಾಗುವಂತಾಗಿದೆ!
ಕೆರೆಯ ಪ್ರಾರಂಭದ ಸ್ಥಳದಲ್ಲಿಯೇ ಭಾರೀ ಆಳದ ಗುಂಡಿಗಳಿವೆ. ಇದರ ಬಗ್ಗೆ ಮಾಹಿತಿಯಿಲ್ಲದ ನಾಗರಿಕರು ಅದರಲ್ಲಿಯೂ ಬಾಲಕರು, ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಡುತ್ತಿದ್ದಾರೆ. ಇತ್ತೀಚೆಗೆ ಸದರಿ ಕೆರೆಯ ಆಳವಾದ ಗುಂಡಿಯಲ್ಲಿ ಸಿಲುಕಿ, 10 ನೇ ತರಗತಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ದುರಂತ ನಡೆದಿದೆ.
ಇಷ್ಟೆಲ್ಲದರ ಹೊರತಾಗಿಯೂ, ಕೆರೆಯ ಅಪಾಯಕಾರಿ ಸ್ಥಳದ ಬಳಿ ಎಚ್ಚರಿಕೆಯ ಫಲಕ ಹಾಕುವ ಕನಿಷ್ಠ ಕಾರ್ಯವನ್ನು ಆಡಳಿತ ಮಾಡಿಲ್ಲ. ಇದರಿಂದ ಅಪಾಯದ ಅರಿವಿಲ್ಲದೆ ಕೆರೆಯಲ್ಲಿ ಈಜಲು ತೆರಳಿ ಸಂಕಷ್ಟಕ್ಕೆ ಸಿಲುಕುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸ್ಥಳೀಯ ನಾಗರಿಕರು ದೂರುತ್ತಾರೆ.
ಗಮನಿಸಲಿ : ಸೋಮಿನಕೊಪ್ಪ ಕೆರೆಯು ಸರಿಸುಮಾರು 95 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿದೆ. ನಾಗರಿಕರಿಗೆ ಅನುಕೂಲಕರವಾಗಿದೆ. ಆದರೆ ವಿಶಾಲವಾದ ಕೆರೆಯನ್ನು ಅಭಿವೃದ್ದಿಗೊಳಿಸಿ, ಸರ್ವಋತು ಪ್ರವಾಸಿ ತಾಣವಾಗಿ ಅಭಿವೃದ್ದಿಗೊಳಿಸುವ ಯೋಜನೆಗಳು ಸಂಪೂರ್ಣ ಮೂಲೆಗುಂಪಾಗಿದೆ.
ಪ್ರಸ್ತುತ ಕೆರೆಯ ಸುತ್ತಮುತ್ತಲು ಅವ್ಯವಸ್ಥೆ ಆವರಿಸಿದ್ದು, ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಕೆರೆಯ ಸಮೀಪ ಖಾಸಗಿ ಲೇಔಟ್ ಗಳು ನಿರ್ಮಾಣವಾಗುತ್ತಿವೆ. ಕೆಲವರು ಕೆರೆಗೆ ಘನತ್ಯಾಜ್ಯಗಳನ್ನು ತಂದು ಹಾಕುತ್ತಿದ್ದಾರೆ. ಕೆರೆ ಏರಿಯ ಮೇಲೆ ಗಿಡಗಂಟೆ ಬೆಳೆದುಕೊಂಡು ಅವ್ಯವಸ್ಥೆಯ ಆಗರವಾಗಿದೆ. ಲೇಔಟ್ ಗಳ ಚರಂಡಿ, ಕೊಳಚೆ ನೀರನ್ನು ನೇರವಾಗಿ ಕೆರೆಗೆ ಬಿಡಲಾಗುತ್ತಿದೆ ಎಂದು ಸ್ಥಳೀಯ ನಾಗರೀಕರು ದೂರುತ್ತಾರೆ.
ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿರುವ ಸೋಮಿನಕೊಪ್ಪ ಕೆರೆಯನ್ನು, ಈ ಹಿಂದೆ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಆಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ತನ್ನ ಬಳಿಯಿರುವ ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ, ಕೆರೆಯನ್ನು ಸರ್ವಾಂಗೀಣ ಅಭಿವೃದ್ದಿಗೊಳಿಸಿ ನಗರದ ಪ್ರವಾಸಿ ತಾಣವಾಗಿ ರೂಪಿಸುವುದಾಗಿ ಹೇಳಿಕೊಂಡಿತ್ತು.
ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ, ಏರಿಯ ಮೇಲೆ ವಾಕಿಂಗ್ ಪಾಥ್ ನಿರ್ಮಾಣ, ವಿದ್ಯುತ್ ದೀಪಗಳ ಅಳವಡಿಕೆ, ಕೆರೆ ಮಧ್ಯೆ ವ್ಯೂ ಪಾಯಿಂಟ್ ನಿರ್ಮಾಣ, ಮಕ್ಕಳ ಆಟದ ಸಾಮಗ್ರಿಗಳ ಅಳವಡಿಕೆ, ಆಸನಗಳ ವ್ಯವಸ್ಥೆ, ಕೆರೆ ಸುತ್ತಲೂ ಫೆನ್ಸಿಂಗ್ ಅಳವಡಿಕೆ ಸೇರಿದಂತೆ ಕೆರೆ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳುವುದಾಗಿ ಹೇಳಿತ್ತು.
ಈ ಸಂಬಂಧ ಸರಿಸುಮಾರು 10 ಕೋಟಿ ರೂ. ವೆಚ್ಚದಲ್ಲಿ ವಿಸ್ತೃತ ಯೋಜನೆ ಸಿದ್ದಪಡಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರದಿಂದಲೂ ಅನುಮತಿ ಪಡೆದುಕೊಂಡಿತ್ತು. ಆದರೆ ತದನಂತರ ಉಲ್ಟಾ ಹೊಡೆದಿದ್ದ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ, ಕೆರೆ ಅಭಿವೃದ್ದಿಗೊಳಿಸುವ ಯೋಜನೆಯಿಂದ ಹಿಂದೆ ಸರಿದಿತ್ತು. ಆದರೆ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ನಡೆಸಿ ಕೈತೊಳೆದುಕೊಂಡಿತ್ತು. ಪ್ರಾಧಿಕಾರ ನಡೆಸಿದ ಕಾಮಗಾರಿಯೂ ಕಳಪೆಯಾಗಿದ್ದ ಆರೋಪಗಳು ಕೇಳಿಬಂದಿದ್ದವು.
ಇನ್ನಾದರೂ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು, ಸೋಮಿನಕೊಪ್ಪ ಕೆರೆಯನ್ನು ಸರ್ವಾಂಗೀಣ ಅಭಿವೃದ್ದಿಗೊಳಿಸಬೇಕು. ಪ್ರವಾಸಿ ತಾಣವಾಗಿ ರೂಪಿಸಿ, ಸಂರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಗಮನಹರಿಸಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.
ಬೇಡಿಕೆಗಳೇನು?
* ಕೆರೆಯ ಅಪಾಯಕಾರಿ ಸ್ಥಳದ ಬಗ್ಗೆ ಎಚ್ಚರಿಕೆ ಫಲಕ ಹಾಕಬೇಕು.
* ಅಪಾಯಕಾರಿ ಸ್ಥಳದ ಬಳಿ ಫೆನ್ಸಿಂಗ್ ಅಳವಡಿಸಬೇಕು.
* ಪ್ರವಾಸಿ ತಾಣವಾಗಿ ಕೆರೆ ಅಭಿವೃದ್ದಿಗೊಳಿಸಬೇಕು.
* ಕೆರೆಯ ಸುತ್ತಮುತ್ತಲ ಅವ್ಯವಸ್ಥೆ ಸರಿಪಡಿಸಬೇಕು.
* ಕೆರೆ ಏರಿಯ ಮೇಲೆ ವಾಕಿಂಗ್ ಪಾಥ್ ನಿರ್ಮಿಸಿ, ಲೈಟಿಂಗ್ ವ್ಯವಸ್ಥೆ ಮಾಡಬೇಕು.
* ಕೆರೆಗೆ ಕೊಳಚೆ ನೀರು ಸೇರ್ಪಡೆಯಾಗದಂತೆ ಕ್ರಮಕೈಗೊಳ್ಳಬೇಕು.
* ಕೆರೆ ಜಾಗ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಬೇಕು.
Gross Administrative Negligence Regarding Shivamogga City’s Largest Lake: Innocent Citizens Losing Their Lives! | Shivamogga, September 29: The lake located in the Sominakoppa locality (Ward 1) of the Shivamogga City Corporation is the largest lake not only in the city but in the entire taluk. However, due to gross administrative negligence and a lack of proper maintenance, it has become a site of utter disarray. Consequently, school students and citizens venturing into the lake to swim are losing their lives.
There are extremely deep pits right at the entry point of the lake. Unaware of this, citizens—particularly young boys—go in to swim and drown. Recently, a tragic incident occurred where a 10th-grade student lost his life after getting trapped in one of these deep pits.

